ಹರಕು ಮುರುಕು ಇಂಗ್ಲೀಷ್ ಆಕೆ ಸಾವಿಗೆ ಕಾರಣ?

ಕಿಂಗ್ ಜಾರ್ಜ್ ಮೆಡಿಕಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸುಮ್ಬುಲ್ ಇಶಾಕ್ ಅವರು ತಮ್ಮ ಸೀನಿಯರ್ಸ್ ರೇಗಿಸಿದ್ದರಿಂದ ತೀವ್ರವಾಗಿ ಮನನೊಂದು ಬುಧವಾರ ಕಾಲೇಜಿನ ಮೂರನೇ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಎಂಸಿ ಸಕ್ಸೇನಾ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿನಿ ಸುಮ್ಬುಲ್ ಅವರು Ragging ಹಾಗೂ ಇಂಗ್ಲೀಷ್ ಭಾಷಾ ಅಜ್ಞಾನದಿಂದ ಬೇಸತ್ತಿದ್ದರು ಎಂದು ಕುಟುಂಬದವರು ಹೇಳಿದ್ದಾರೆ. ಕಾಲೇಜು ಆವರಣದಲ್ಲಿ ಬಿದ್ದಿದ್ದ ಸುಮ್ಬುಲ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿದ್ದು, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ದುರಂತ ಸಾವನ್ನಪ್ಪಿದ್ದಾರೆ.
ಬುಧವಾರದಿಂದ ಆಕೆ ವೆಂಟಿಲೇಟರ್ ನಲ್ಲಿದ್ದರು. ತಲೆ ಹಾಗೂ ಕಾಲಿಗೆ ತೀವ್ರ ಪೆಟ್ಟಾಗಿತ್ತು. ಸುಮ್ಬುಲ್ ಸಾವಿಗೆ ದುಃಖ ವ್ಯಕ್ತಪಡಿಸಿರುವ ಕಾಲೇಜು ಆಡಳಿತ ಮಂಡಳಿ, Ragging ನಡೆದಿರುವುದೆಲ್ಲ ಸುಳ್ಳು. ಆಕೆ ಇಂಗ್ಲೀಷ್ ವಿಷಯ ಸ್ವಲ್ಪ ಹಿಂದಿದ್ದರು ಹಾಗಾಗಿ ಬೇಸರ ಮೂಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದಿದ್ದಾರೆ.
ಈ ನಡುವೆ ಕಾಲೇಜು ಮಂಡಳಿಯ ಒತ್ತಡದಿಂದ ಆಕೆ ವೆಂಟಿಲೇಟರ್ ತೆಗೆದು ಹಾಕಲಾಗಿದೆ. ಹೀಗಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ಸುಮ್ಬುಲ್ ಕುಟುಂಬ ವರ್ಗ ಪ್ರತಿಭಟನೆ ನಡೆಸಿದೆ.
ಗುರು ತೇಜ್ ಬಹದ್ದೂರು ತಾಂತ್ರಿಕ ವಿಶ್ವವಿದ್ಯಾಲಯದ Ragging ನಿಗ್ರಹ ತಂಡ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನಿಯ ಸಹಪಾಠಿಗಳ ಹೇಳಿಕೆ ಪಡೆದು ಹಿಂತಿರುಗಿದ್ದಾರೆ.
ಆತ್ಮಹತ್ಯೆ ಬಗ್ಗೆ ಯಾವುದೇ ಸೂಚನೆ ಸಿಗಲಿಲ್ಲ. ಕ್ಲಾಸ್ ಮುಗಿಯುವ ಮುನ್ನವೇ ಆಕೆ ಹೊರ ನಡೆದಿದ್ದು ಮಾತ್ರ ನಮಗೆ ಗೊತ್ತಾಯಿತು ಕೆಲವು ವಿದ್ಯಾರ್ಥಿಗಳು ಹೇಳಿದ್ದಾರೆ. ಸೂಸೈಡ್ ನೋಟ್ ಕೂಡಾ ಸಿಕ್ಕಿಲ್ಲ. Ragging ಬಗ್ಗೆ ಮಾಹಿತಿ ಇನ್ನೂ ಸಿಕ್ಕಿಲ್ಲ. ಸಿಸಿಟಿವಿ ಕೆಮೆರಾಗಳನ್ನು ಅಳವಡಿಸಿ ಈ ರೀತಿ ಘಟನೆಗಳನ್ನು ತಡೆಗಟ್ಟುವಂತೆ ಕಾಲೇಜು ಮಂಡಳಿಗೆ ಸೂಚಿಸಲಾಗಿದೆ. Ragging ಬಗ್ಗೆ ದೂರು ಕೇಳಿ ಬಂದರೆ ಸೂಕ್ತ ಸಾಕ್ಷಿ ಸಿಕ್ಕರೆ ಕ್ರಮ ಕೈಗೊಳ್ಳಬಹುದು. ಆಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದು ಮಾತ್ರ ನಿಜ ಎಂದು ತಿಳಿದು ಬಂದಿದೆ.
ಸದ್ಯಕ್ಕೆ ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ತನಿಖೆ ಮುಂದುವರೆದಿದೆ ಎಂದು ಮಾಧ್ಯಮ ವಕ್ತಾರ ಅಲೋಕ್ ಪಾಠಕ್ ಹೇಳಿದ್ದಾರೆ.












Click it and Unblock the Notifications