ಬೆಂಗಳೂರಿನಲ್ಲಿ ಮೆಗಾ ಸಿಟಿ ಪೊಲೀಸಿಂಗ್

ಗುರುವಾರ ವಿಧಾನಸೌಧದಲ್ಲಿ ಗೃಹ ಸಚಿವ ಕೆ.ಜೆ.ಜಾರ್ಜ್ ನೇತೃತ್ವದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯ ನಂತರ ಮಾತನಾಡಿದ ಜಾರ್ಜ್, ಬೆಂಗಳೂರಿನ ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ನಾಗರಿಕ ಸ್ನೇಹಿ 'ಸ್ಪಂದನ' ಕೇಂದ್ರ ಸ್ಥಾಪಿಸಲಾಗುವುದು ಎಂದರು.
ಸ್ಪಂದನ ಕೇಂದ್ರ ಸಮುದಾಯ ಸಂಪನ್ಮೂಲ ಕೇಂದ್ರದಂತೆ ಕಾರ್ಯನಿರ್ವಹಿಸಲಿದೆ. ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಕ್ಕಳಿಗೆ ಸಂಬಂಧಿಸಿದ ಪ್ರಕರಣಗಳ ಬಗ್ಗೆ ಕೇಂದ್ರ ನೆರವು ನೀಡಲಿದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯನ್ನು ತಂತ್ರಜ್ಞಾನಮುಖೀ ಯನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಪೊಲೀಸರು ಬದಲಾಗುತ್ತಿರುವ ತಂತ್ರಜ್ಞಾನವನ್ನು ಬಳಸಿಕೊಳ್ಳುಲು, ಕೇಂದ್ರ ಸರ್ಕಾರದ ಈ ಮೆಗಾಸಿಟಿ ಪೊಲೀಸಿಂಗ್ ಯೋಜನೆಯಲ್ಲಿ ತಂತ್ರಜ್ಞಾನ ಮತ್ತು ತಂತ್ರಜ್ಞಾನರಹಿತ ಕಾರ್ಯಕ್ರಮಗಳನ್ನು ಅಳವಡಿಸಲಾಗುವುದು ಎಂದರು. (ಬೆಂಗಳೂರಿಗೆ ಬಂತು ಕಮ್ಯುನಿಟಿ ಪೊಲೀಸಿಂಗ್ ವ್ಯವಸ್ಥೆ!)
ದೇಶದ ಆರು ಮಹಾನಗರಗಳನ್ನು ಮೆಗಾಸಿಟಿ ಪೊಲೀಸಿಂಗ್ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಲ್ಲಿ ಬೆಂಗಳೂರು ಸೇರಿದ್ದು, ನಗರದ ಪೊಲೀಸ್ ವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಕೇಂದ್ರ ಸರ್ಕಾರ ಅಗತ್ಯ ಅನುದಾನದ ನೆರವು ನೀಡಲಿದೆ ಎಂದು ಮಾಹಿತಿ ನೀಡಿದರು.
8,000 ಪೊಲೀಸರ ನೇಮಕ : ಈ ವರ್ಷ ಒಟ್ಟು 8,000 ಪೊಲೀಸ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸಚಿವರು ಹೇಳಿದರು. ಪೊಲೀಸ್ ಇಲಾಖೆಯ ಕೆಲಸಕ್ಕೆ ಅನುಕೂಲವಾಗುವ ದೃಷ್ಟಿಯಿಂದ ನೇಮಕ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.
ಬೆಂಗಳೂರು ನಗರಕ್ಕೆ 2,700 ಪೊಲೀಸರ ಕೊರತೆ ಇದೆ. ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವಂತೆ ಸಿಎಂ ಸೂಚನೆ ನೀಡಿದ್ದಾರೆ. ಹೊಸ ನೇಮಕಾತಿಯಲ್ಲಿ ಬೆಂಗಳೂರಿನ ಪೊಲೀಸರ ಕೊರತೆ ತುಂಬಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಭತ್ಯೆ ಹೆಚ್ಚಳ : ಹೋಂಗಾರ್ಡ್‌ಗಳ ದಿನ ಭತ್ಯೆಯನ್ನು 200 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದೆ. ಬೆಂಗಳೂರು ಪೊಲೀಸ್ ಆಯುಕ್ತ ರಾಘವೇಂದ್ರ ಔರಾದಕರ್ ಹೋಂ ಗಾರ್ಡ್ ಗಳ ಭತ್ಯೆ ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಮನವಿಗೆ ಸ್ಪಂದಿಸಿದ ಗೃಹ ಸಚಿವ ಜಾರ್ಜ್ ದಿನಭತ್ಯೆ ಹೆಚ್ಚಳಗೊಳಿಸಲು ಸೂಚನೆ ನೀಡಿದ್ದಾರೆ.












Click it and Unblock the Notifications