ಪೊಲೀಸರ ಅತಿಥಿಯಾದ ದೇವಮಾನವ ಬಾಪು
ನವದೆಹಲಿ, ಸೆ,1: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪ ಹೊತ್ತಿರುವ ಸ್ವಯಂಘೋಷಿತ ದೇವಮಾನವ ಅಸಾರಾಮ್ ಬಾಪು ಅವರನ್ನು ಮಧ್ಯಪ್ರದೇಶದ ಇಂದೋರ್ ಆಶ್ರಮದಲ್ಲಿ ರಾಜಸ್ತಾನದ ಜೋಧ್ ಪುರ ಪೊಲೀಸರು ಶನಿವಾರ ಮಧ್ಯರಾತ್ರಿ ಬಂಧಿಸಿದ್ದಾರೆ.
ಬಾಪು ವಿಚಾರಣೆಗೆ ಅರ್ಹರಾಗಿದ್ದಾರೆ ಎಂದು ವೈದ್ಯಕೀಯ ವರದಿ ತಿಳಿಸಿದ ನಂತರ ಬಂಧಿಸಲಾಗಿದೆ. ಸುಮಾರು ಎಂಟು ಗಂಟೆಗಳ ಕಾಲ ಕಾದ ಬಳಿಕ ಪೊಲೀಸರ ತಂಡ ಬಾಪು ಅವರನ್ನು ಮಧ್ಯರಾತ್ರಿ ಬಂಧಿಸಿ ಜೋಧಪುರಕ್ಕೆ ಕರೆದೊಯ್ದರು.
ಭಾನುವಾರ ಬೆಳಗ್ಗೆ AI-635 ವಿಮಾನದ ಮೂಲಕ 72 ವರ್ಷ ವಯಸ್ಸಿನ ನರಸಂಬಂಧಿ ಕಾಯಿಲೆ ಹೊಂದಿರುವ ಬಾಪು ಅವರನ್ನು ದೆಹಲಿ ಮುಖಾಂತರ ಜೋಧ್ ಪುರಕ್ಕೆ ಕರೆತಂದು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸ್ ಕಮಿಷನರ್ ಬಿಜುಜಾರ್ಜ್ ಜೋಸೆಫ್ ತಿಳಿಸಿದ್ದಾರೆ.

ಪೊಲೀಸ್ ಬಂಧನ ತಪ್ಪಿಸಿಕೊಳ್ಳಲು ಅಸಾರಾಮ್ ಶುಕ್ರವಾರ ಸಂಜೆಯಿಂದ ನಾಪತ್ತೆಯಾಗಿದ್ದಾರೆ ಎಂಬ ಸುದ್ದಿ ದಟ್ಟವಾಗಿ ಹಬ್ಬಿತ್ತು. ಆದರೆ, ಶನಿವಾರ ಸಂಜೆ ಅಸಾರಾಮ್ ಪುತ್ರ ನಾರಾಯಣ ಸಾಯಿ ಇಂದೋರ್ ಆಶ್ರಮದಲ್ಲಿ ಸುದ್ದಿಗಾರರ ಜತೆ ಮಾತನಾಡಿ, 'ನನ್ನ ತಂದೆ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿಲ್ಲ.
ಅನಾರೋಗ್ಯದಿಂದ ಅವರು ಬಳಲುತ್ತಿದ್ದು ಆಶ್ರಮದಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ. ಅವರಿಗೆ ರಕ್ತದೊತ್ತಡ ಮತ್ತು ನರಶೂಲೆ ಇದೆ. ಅವರು ಭೂಗತವಾಗಿದ್ದಾರೆ ಎಂಬ ವದಂತಿಗಳಲ್ಲಿ ಹುರುಳಿಲ್ಲ' ಎಂದು ಹೇಳಿದ್ದರು.
ಬಾಪೂಜಿ ಆರೋಗ್ಯ ಸುಧಾರಣೆಯಾದ ತಕ್ಷಣ ಅಗತ್ಯವಿದ್ದರೆ ಜೋಧಪುರಕ್ಕೆ ಹೋಗಲಿದ್ದಾರೆ ಅಥವಾ ತನಿಖೆಗಾಗಿ ರಾಜಸ್ತಾನ ಪೊಲೀಸರು ಇಲ್ಲಿಗೆ ಬರುವುದಾದರೆ ಅದಕ್ಕೂ ಸ್ವಾಗತ. ನನ್ನ ತಂದೆಗೆ ಕಾನೂನಿನ ಬಗ್ಗೆ ಅಪಾರ ಗೌರವವಿದೆ' ಎಂದಿದ್ದರು. ಬಂಧನಕ್ಕೂ ಮುನ್ನ ಆಶ್ರಮದಲ್ಲಿ ರಾಜಸ್ತಾನ ಪೊಲೀಸರು ಬಾಪು ಅವರನ್ನು ತನಿಖೆಗೆ ಒಳಪಡಿಸಿದ್ದರು.
ಪತ್ರಕರ್ತರ ಮೇಲೆ ಹಲ್ಲೆ: ಜೋಧಪುರದಲ್ಲಿ ಶನಿವಾರ ಬೆಳಿಗ್ಗೆ ಆಶ್ರಮಕ್ಕೆ ತೆರಳಿದ್ದ ಸುದ್ದಿವಾಹಿನಿಯೊಂದರ ವರದಿಗಾರ ಹಾಗೂ ಕ್ಯಾಮೆರಾಮನ್ ಮೇಲೆ ಅಸಾರಾಮ್ ಬೆಂಬಲಿಗರು ಹಲ್ಲೆ ನಡೆಸಿದ್ದರು. ಈ ಸಂಬಂಧ ಆಶ್ರಮದ ಆರು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಅಸಾರಾಮ್ ಬಾಪು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ ಜೋಧಪುರದ ಖಂಡ್ವಾ ರಸ್ತೆಯಲ್ಲಿರುವ ಅವರ ಆಶ್ರಮದ ಮುಂದೆ ಬಾಪುವಿನ ಬೆಂಬಲಿಗರು ಭಾರೀ ಸಂಖ್ಯೆಯಲ್ಲಿ ನೆರೆದು ಪೊಲೀಸರಿಗೆ ತಡೆಯನ್ನುಂಟು ಮಾಡಿದ್ದರು. ಇದು, ಅಸಾರಾಮ್ ಆಶ್ರಮದಲ್ಲೇ ಅಡಗಿಕೊಂಡಿರಬಹುದು ಎಂಬ ಸುದ್ದಿಗೆ ಪುಷ್ಟಿ ನೀಡಿತ್ತು.
ನಿರಶನ ವಾಪಸ್: ಅಸಾರಾಮ್ ಬಾಪುವನ್ನು ತಕ್ಷಣವೇ ಬಂಧಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಸಂತ್ರಸ್ತ ಬಾಲಕಿಯ ತಂದೆ ಉತ್ತರ ಪ್ರದೇಶದ ಷಹಜಹಾನ್ ಪುರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಬಾಪು ಬಂಧನದ ನಂತರ ನಿರಶನ ವಾಪಸ್ ಪಡೆದಿದ್ದಾರೆ ಎನ್ನಲಾಗಿದೆ.












Click it and Unblock the Notifications