ಒಂದಾದ ದಳಪತಿಗಳು: ಖೇಲ್ ಖತಂ, ನಾಟಕ್ ಬಂದ್
ಬೆಂಗಳೂರು, ಆಗಸ್ಟ್ 29: ಬಿರುಗಾಳಿಗೆ ಸಿಕ್ಕಿ ಪತರಗುಟ್ಟಿದ್ದ ಜಾತ್ಯಾತೀತ ಜನತಾ ದಳ ಒಂದು ತಹಬಂದಿಗೆ ಬಂದಿದೆ. ದಳಪತಿಗಳು ಒಬ್ಬೊಬ್ಬರಾಗಿ ಮತ್ತೆ ತೆನೆ ತೆಕ್ಕೆಗೆ ಬರುತ್ತಿದ್ದು, ಖೇಲ್ ಖತಂ ನಾಟಕ್ ಬಂದ್ ಆಗುವ ಸೂಚನೆಗಳು ಸಿಗುತ್ತಿವೆ.
ಪಕ್ಷದಲ್ಲಿ ಯಾವುದೂ ಸರಿಯಿಲ್ಲ. ಕೆಲ ಶಾಸಕರು ಪಕ್ಷ ಬಿಟ್ಟುಹೋಗುವ ಅಪಾಯವಿದೆ ಎಂಬ ಸುಳಿವರಿತ ಎಚ್ ಡಿ ಕುಮಾರಸ್ವಾಮಿ ನೇರವಾಗಿ ಸಂಧಾನಕ್ಕಿಳಿದರು. ಗುರುವಾರ ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲಿನಲ್ಲಿ ಸಂಧಾನ ಸಭೆ ನಡೆಸಿ, ಏನೇ ಸಮಸ್ಯೆಗಳಿದ್ದರೂ ಪಕ್ಷದ ಆಂತರಿಕ ವಲಯದಲ್ಲೇ ಚರ್ಚಿಸಿ ಬಗೆಹರಿಸಿಕೊಳ್ಳೋಣ ಎಂದು ಮುನಿಸಿಕೊಂಡಿದ್ದ ಶಾಸಕರ ತಲೆ ಸವರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಮೀರ್ ಅಹಮದ್ ಅವರಂತೂ 'ಪ್ರಾಣ ಹೋದರೂ ಪಕ್ಷ ಬಿಡಲಾರೆ. ಕುಮಾರಣ್ಣನ ಸಹವಾಸ ಬಿಡಲಾರೆ' ಎಂದು ಘೋಷಿಸಿಕೊಂಡಿದ್ದಾರೆ.

ವಿಪಕ್ಷ ನಾಯಕರಾಗಿ ಕುಮಾರಸ್ವಾಮಿ ಮುಂದುವರಿಕೆ: ನಾಣಯ್ಯ
ಇದೀಗ ಬಂದ ಮಾಹಿತಿಯಂತೆ ವಿರೋಧ ಪಕ್ಷದ ನಾಯಕರಾಗಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಂದುವರಿಸಲು ಪಕ್ಷದ ಶಾಸಕಾಂಗ ನಿರ್ಧರಿಸಿದೆ ಎಂದು ಹಿರಿಯ ನಾಯಕ ಎಂಸಿ ನಾಣಯ್ಯ ತಿಳಿಸಿದ್ದಾರೆ. ಇದರಿಂದ ಪ್ರತಿಪಕ್ಷ ನಾಯಕರಾಗಿ ಕುಮಾರಸ್ವಾಮಿ ಸ್ಥಾನ ಅಬಾಧಿತವಾಗಿದೆ. ಆದರೆ ಪಕ್ಷದ ರಾಜ್ಯಾಧ್ಯಕ್ಷ ಯಾರಾಗಬೇಕು ಎಂಬುದರ ಬಗ್ಗೆ JDSLP ಇನ್ನೂ ನಿರ್ಧರಿಸಿಲ್ಲ. ಶಾಸಕರ ಒತ್ತಡಕ್ಕೆ ಮಣಿದು ಪ್ರತಿಪಕ್ಷ ನಾಯಕನಾಗಿ ಮುಂದುವರಿಯಲು ಒ್ಪಪಿರುವೆ ಎಂದು ಎಚ್ಸಿಕೆ ತಿಳಿಸಿದ್ದಾರೆ.

ಜಮೀರ್ -ಕುಮಾರಸ್ವಾಮಿ ಮತ್ತೆ ಭಯ್ಯಾ ಭಯ್ಯಾ?
ಕೆಲ ಕಾರಣಗಳಿಂದ ಮುನಿದು, ಪಕ್ಷದ ಸಕ್ರಿಯ ಚಟುವಟಿಕೆಗಳಿಂದಲೇ ದೂರವಾಗಿ ಪಕ್ಷ ತೊರೆಯುವ ಸಂದೇಶವನ್ನೂ ರವಾನಿಸಿದ್ದ ಆಪ್ತ ಶಾಸಕ ಜಮೀರ್ ಅಹಮದ್ ಖಾನ್ ಅವರ ಮನವೊಲಿಸುವಲ್ಲಿ ಎಚ್ ಡಿ ಕುಮಾರಸ್ವಾಮಿ ಯಶಸ್ವಿಯಾಗಿದ್ದಾರೆ.

ಸಭೆಗೆ ಬಂದ ಚಲುವರಾಯಸ್ವಾಮಿ
ಸಂಧಾನ ಸಭೆಯಲ್ಲಿ ಕುಮಾರಸ್ವಾಮಿ, ಜಮೀರ್ ಅಹಮ್ಮದ್, ಚಲುವರಾಯಸ್ವಾಮಿ ಸೇರಿದಂತೆ ಕೆಲ ಆಪ್ತರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಪ್ರಸ್ತುತ ವಿದ್ಯಾಮನಗಳ ಬಗ್ಗೆ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಸುಮಾರು 4 ಗಂಟೆ ಕಾಲ ಕೂಲಂಕಷವಾಗಿ ಚರ್ಚಿಸಿದ್ದಾರೆ.

ಕುಮಾರಸ್ವಾಮಿ ಆಜ್ಞಾಪೂರ್ವಕ ಮನವಿ
ಸದ್ಯದ ಪರಿಸ್ಥಿತಿಯಲ್ಲಿ ಶಾಸಕರು ರಾಜೀನಾಮೆ ನೀಡುವುದಾಗಲಿ, ಇಲ್ಲವೆ ಪಕ್ಷ ಬಿಟ್ಟು ಹೋಗುವುದಾಗಲಿ ಮಾಡಬಾರದು ಎಂದು ಕುಮಾರಸ್ವಾಮಿ ಆಜ್ಞಾಪೂರ್ವಕವಾಗಿ ಮಾಡಿಕೊಂಡ ಮನವಿಗೆ ಜಮೀರ್ ಅಹಮದ್, ಚಲುವರಾಯಸ್ವಾಮಿ ಸೇರಿದಂತೆ ಇತರೆ ಕೆಲ ಶಾಸಕರು ತಲೆಯಾಡಿಸಿದ್ದಾರೆ ಎನ್ನಲಾಗಿದೆ.

ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳೋಣ-ಕುಮಾರಸ್ವಾಮಿ ಸಲಹೆ
ವಿಧಾನಸಭೆ ಮತ್ತು ಎರಡು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ನಮಗೆ ಸೋಲುಂಟಾಗಿದೆ. ಇದರಿಂದ ಒಂದಷ್ಟು ಭಿನ್ನಾಭಿಪ್ರಾಯಗಳು ಮೂಡಿರುವುದು ಸಹಜ. ಆದರೆ ಮುಂದಿನ ದಿನಗಳಲ್ಲಿ ಇಂತಹುದಕ್ಕೆಲ್ಲ ಅವಕಾಶ ನೀಡದಂತೆ ಪಕ್ಷದ ಸಂಘಟನೆಯ ಕಡೆ ಗಮನ ಹರಿಸಲಾಗುವುದು.
ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಬೇಕೆಂಬ ಏಕೈಕ ಕಾರಣಕ್ಕಾಗಿ ಬಿಜೆಪಿ ಜತೆ ಕೈ ಜೋಡಿಸಿದ್ದೇನೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಮ್ಮ ಕುಟುಂಬದವರಿಗೆ ಟಿಕೆಟ್ ನೀಡಬೇಕೆಂಬ ಇಚ್ಚೆ ನನಗಿರಲಿಲ್ಲ. ಆದರೆ, ಕಾರ್ಯಕರ್ತರ ಒತ್ತಡದಂತೆ ಟಿಕೆಟ್ ನೀಡಲಾಯಿತು. ಚುನಾವಣೆಯಲ್ಲಿ ಸೋಲು-ಗೆಲುವು ಸಹಜ. ಇದನ್ನು ಸಕಾರಾತ್ಮಕವಾಗಿ ತೆಗೆದುಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳೋಣ ಎಂದು ಕುಮಾರಸ್ವಾಮಿ ಸಲಹೆ ನೀಡಿದರು.

ಬಿಜೆಪಿ ಜತೆ ಕೈ ಜೋಡಿಸಿದ್ದೇ ದೂರ ಉಳಿಯಲು ಕಾರಣ
ಇದಕ್ಕೆ ಪೂರಕವಾಗಿ ಸ್ಪಂದಿಸಿದ ಬಹುತೇಕ ಶಾಸಕರು ಪಕ್ಷ ಬಿಟ್ಟು ಹೋಗುವುದಾಗಲಿ, ಇಲ್ಲವೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಸ್ತಾವನೆಯನ್ನು ಕೈ ಬಿಟ್ಟಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ಜಮೀರ್ ಅವರು ತಮಗೆ ಸ್ಥಾನಮಾನಕ್ಕಿಂತ ಬಿಜೆಪಿ ಜತೆ ಕೈ ಜೋಡಿಸಿದ್ದೇ ತಾವು ಪಕ್ಷದ ಚಟುವಟಿಕೆಗಳಿಂದ ದೂರ ಉಳಿಯಲು ಕಾರಣವಾಯಿತು ಎಂದು ನಾಯಕರಿಗೆ ಅರಿಕೆ ಮಾಡಿಕೊಟ್ಟಿದ್ದಾರೆ. ಜತೆಗೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಭರವಸೆ ನೀಡಿದರು ಎನ್ನಲಾಗಿದೆ.

ಯಾವ ಪಕ್ಷದೊಂದಿಗೂ ಮೈತ್ರಿ ಬೇಡ
ಯಾವ ಪಕ್ಷದೊಂದಿಗೂ ಮೈತ್ರಿ ಮಾಡಿಕೊಳ್ಳದೆ ಸ್ವಂತ ಬಲದ ಮೇಲೆ ಅಭ್ಯರ್ಥಿಗಳನ್ನು ಕಣಕ್ಕಿಳಿಸೋಣ. ಕನಿಷ್ಟ 15 ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿ ಗೆಲ್ಲಿಸಬೇಕು.ಇದಕ್ಕಾಗಿ ಸೆಪ್ಟೆಂಬರ್ ತಿಂಗಳಿಂದಲೇ ರಾಜ್ಯಾದ್ಯಂತ ಪ್ರವಾಸ ಮಾಡೋಣ ಎಂದು ಬಹುತೇಕ ಶಾಸಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಕೂಡ ಸಮ್ಮತಿ ಸೂಚಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕುಮಾರಸ್ವಾಮಿ ಪಕ್ಷ ಸಂಘಟನೆಗೆ ತೊಡಗಿಸಿಕೊಂಡರೆ ಮೈಸೂರು-ಕರ್ನಾಟಕದಲ್ಲಿ ದೇವೇಗೌಡರು ಪ್ರಚಾರ ನಡೆಸಬೇಕು. ಹಂತ ಹಂತವಾಗಿ ಕೇಂದ್ರ ಸರ್ಕಾರದ ವೈಫಲ್ಯಗಳು ಮತ್ತು ರಾಜ್ಯಸರ್ಕಾರದ ಜನವಿರೋಧಿ ನೀತಿ ಮುಂದಿಟ್ಟುಕೊಂಡು ಪಕ್ಷ ಸಂಘಟಿಸಲು ದಳಪತಿಗಳು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.

ಸೋಮವಾರದ ವೇಳೆಗೆ ಹೊಸ ಅಧ್ಯಕ್ಷರು
ವಿಧಾನಸಭೆಯ ಪ್ರತಿಪಕ್ಷದ ಮುಖ್ಯ ಸಚೇತಕ ಹುದ್ದೆಯನ್ನು ಯಾರಿಗೆ ನೀಡಿದರೂ ತಮ್ಮ ವಿರೋಧವಿಲ್ಲ. ಇದೇ ರೀತಿ ಅಧ್ಯಕ್ಷ ಸ್ಥಾನವನ್ನು ಪಕ್ಷದ ವರಿಷ್ಠರಾದ ದೇವೇಗೌಡರು ಯಾರಿಗೆ ನೀಡಿದರೂ ಅದನ್ನು ಸ್ವಾಗತಿಸುವುದಾಗಿ ಕುಮಾರಸ್ವಾಮಿ ಬಳಿ ಮುನಿಸಿಕೊಂಡಿದ್ದ ಶಾಸಕರು ಹೇಳಿರುವುದರಿಂದ ಜೆಡಿಎಸ್ ನಲ್ಲಿ ಉಂಟಾಗಿದ್ದ ಭಿನ್ನಮತದ ಹೊಗೆ ಮಂಜಿನಂತೆ ಕರಗಿದೆ.
ಅಲ್ಲದೆ, ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆಗೆ ಯಾರನ್ನು ನೇಮಕ ಮಾಡಬೇಕು, ಯಾರನ್ನು ಮಾಡಿದರೆ ಹೆಚ್ಚು ಪ್ರಯೋಜನವಾಗುತ್ತೇ ಎಂಬುದರ ಬಗ್ಗೆಯೂ ಕುಮಾರಸ್ವಾಮಿ ಶಾಸಕರಿಂದ ಅಭಿಪ್ರಾಯ, ಸಲಹೆ ಪಡೆದಿದ್ದಾರೆ. ಬಹುತೇಕ ಸೋಮವಾರದ ವೇಳೆಗೆ ಹೊಸ ಅಧ್ಯಕ್ಷರು ಯಾರು ಎಂಬುದು ತೀರ್ಮಾನವಾಗಲಿದೆ. ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರೇ ಎಲ್ಲರ ಸಮ್ಮುಖದಲ್ಲಿ ಹೊಸ ಅಧ್ಯಕ್ಷರನ್ನು ಘೋಷಣೆ ಮಾಡಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಒಂದಾದ ದಳಪತಿಗಳು: ಖೇಲ್ ಖತಂ, ನಾಟಕ್ ಬಂದ್
ಗುರುವಾರ ಬೆಂಗಳೂರಿನ ಹೊರವಲಯದ ರೆಸಾರ್ಟಿನಲ್ಲಿ ಎಚ್ ಡಿ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಜಮೀರ್ ಅಹಮ್ಮದ್ ಖಾನ್, ಪುಟ್ಟಣ್ಣ, ಅಖಂಡ ಶ್ರೀನಿವಾಸ್, ಚಲುವರಾಯಸ್ವಾಮಿ ಮೊದಲಾದವರು ಭಾಗವಹಿಸುವ ಮೂಲಕ ನಮ್ಮಲ್ಲಿ ಯಾವುದೇ ಅಸಮಾಧಾನವಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭೆ ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಮುನಿಸಿಕೊಂಡಿದ್ದ ಜೆಡಿಎಸ್ ಕೆಲ ಮುಖಂಡರು ಮತ್ತು ಶಾಸಕರು ಇಂದು ಸಭೆಗೆ ಹಾಜರಾಗಿದ್ದಾರೆ. ಈ ಮೂಲಕ ಜೆಡಿಎಸ್ ನಲ್ಲೀಗ ಮುನಿಸು, ಅಸಮಾಧಾನ, ಅತೃಪ್ತಿ ನಿವಾರಣೆಯಾಗಿದ್ದು, ಹೊಸ ಚೈತನ್ಯ ತುಂಬಿಕೊಂಡಿದೆ.












Click it and Unblock the Notifications