ಮಿಂಟೋ ಬಳಿ ಕಿಲ್ಲರ್ ಬಿಎಂಟಿಸಿಗೆ ನವವಿವಾಹಿತ ಬಲಿ

ಮಿಂಟೋ ಸರ್ಕಲ್ ಬಳಿ ಆತ ಸ್ನೇಹಿತನ ಜತೆಗೂಡಿ ರಸ್ತೆ ಬದಿ ನಡೆದು ಹೋಗುತ್ತಿದ್ದ. ಆದರೆ ಅದೆಲ್ಲಿತ್ತೋ ಆ ಕೆಂಪುಭೂತ. ಆಯತಪ್ಪಿ, ಗೂಡ್ಸ್ ಗಾಡಿಗೆ ಗುದ್ದಿದ ಆ ಬಸ್ಸು ಮುಂದೆ ಪಾದಚಾರಿ ಮೇಲೆ ಹರಿದು ಆತನ ಬಾಳನ್ನು ಹೊಸಕಿ ಹಾಕಿದೆ.
ಇಂದು ಬೆಳಗ್ಗೆ 11.30 ಗಂಟೆಯಲ್ಲಿ ಈ ಅವಘಡ ಸಂಭವಿಸಿದ್ದು, ರಸ್ತೆ ಬದಿ ನಡೆದು ಹೋಗುತ್ತಿದ್ದ ಏರ್ ಟೆಲ್ ಉದ್ಯೋಗಿ ಸಂಜಯ್ ಅಂಗಡಿ (27) ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಒಂದೂವರೆ ವರ್ಷಗಳ ಹಿಂದೆ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಸಂಜಯ್ ಅಂಗಡಿ ಹಾಗೂ ಸುಮಾ ವಿವಾಹವಾಗಿದ್ದು, ಈ ದಂಪತಿಗೆ ಪ್ರೇಕ್ಷಾ ಎಂಬ ಐದು ತಿಂಗಳ ಮಗುವಿದೆ. ಏರ್ ಟೆಲ್ ಕಂಪನಿಯಲ್ಲಿ ಸಂಜಯ್ ಉದ್ಯೋಗದಲ್ಲಿದ್ದರು. ಮೃತರ ಸಹೋದ್ಯೋಗಿ ನಂಜುಂಡೇ ಗೌಡ ಮಾಗಡಿ ತಾಲೂಕಿನವರಾಗಿದ್ದು, ಈ ಘಟನೆಯಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬ್ರೇಕ್ ವೈಫಲ್ಯದಿಂದಾಗಿ ಅಪಘಾತ ಸಂಭವಿಸಿದೆ ಎಂದು ಅಲವತ್ತುಕೊಂಡ ಡ್ರೈವರ್ ಮತ್ತು ಕಂಡಕ್ಟರನನ್ನು ಮೃತ ಯುವಕನ ಸ್ನೇಹಿತರು ಮತ್ತು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಇತರೆ ಬಸ್ಸುಗಳ ಮೇಲೆ ಕಲ್ಲು ತೂರಿದ್ದಾರೆ.
ರಸ್ತೆಯಲ್ಲೇ ಶವವನ್ನಿಟ್ಟು ಸುಮಾರು ಗಂಟೆಗಳ ಕಾಲ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಬಸ್ಸನ್ನು ವೇಗವಾಗಿ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸಂಜೆ ನಾಲ್ಕು ಗಂಟೆಯಾದರೂ BMTC ಅಧಿಕಾರಿಗಳು ಇನ್ನೂ ಘಟನಾ ಸ್ಥಳಕ್ಕೆ ಧಾವಿಸಿಲ್ಲ ಎಂದು ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗೂಡ್ಸ್ ಗಾಡಿಗೆ ಗುದ್ದಿದ ಬಿಎಂಟಿಸಿ ಬಸ್ ಯುವನನ್ನು ಆಹುತಿ ತೆಗೆದುಕೊಂಡಿದ್ದೂ ಅಲ್ಲದೆ ನಾಲ್ಕೈದು ವಾಹನಗಳನ್ನು ಜಖಂಗೊಳಿಸಿದೆ. ಜತೆಗೆ ನಂಜುಂಡೇಗೌಡ ಎಂಬ ಮತ್ತೊಬ್ಬ ಪಾದಚಾರಿಗಳನ್ನು ಗಾಯಗೊಳಿಸಿದೆ.
ಬುಧವಾರ ಡಿಪ್ಲೊಮೊ ವಿದ್ಯಾರ್ಥಿ ಬಲಿ:
ಸ್ನೇಹಿತನ ಇಂಟರ್ ವ್ಯೂಗಾಗಿ ಎರಡು ಬೈಕ್ ಗಳಲ್ಲಿ ತೆರಳಿದ್ದ ಸ್ನೇಹಿತರು ಇಂಟರ್ ವ್ಯೂ ಮುಗಿಸಿ ವಾಪಸ್ ಆಗುತ್ತಿದ್ದಾಗ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಡಿಪ್ಲೊಮೊ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬ್ಯಾಟರಾಯನಪುರದ ನಿವಾಸಿ, ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಾಗೇಶ್ ರಾವ್ ಎಂಬುವರ ಪುತ್ರ ಕುಶಾಲ್ (19) ಮೃತಪಟ್ಟ ವಿದ್ಯಾರ್ಥಿ.
ಬಿಕಾಂ ಮುಗಿಸಿದ್ದ ಸ್ನೇಹಿತ ಮನೋಜ್ ಕುಮಾರ್ ಗೆ ನಿನ್ನೆ ಕಂಪನಿಯೊಂದು ಇಂಟರ್ ವ್ಯೂಗಾಗಿ ಆಹ್ವಾನಿಸಿತ್ತು. ಈ ಸಂದರ್ಭದಲ್ಲಿ ಸ್ನೇಹಿತ ಕುಶಾಲ್ ಪಿಇಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಡಿಪ್ಲೊಮೊ ವ್ಯಾಸಂಗ ಮಾಡುತ್ತಿದ್ದು, ಈತನೂ ಸಹ ಮತ್ತೊಬ್ಬ ಸ್ನೇಹಿತ ಅಭಿಷೇಕ್ ಜೊತೆ ಬೇರೆ ಬೇರೆ ಬೈಕ್ ಗಳಲ್ಲಿ ಮನೋಜ್ ಕುಮಾರ್ ಜೊತೆ ತೆರಳಿದ್ದರು.
ಸ್ನೇಹಿತನ ಇಂಟರ್ ವ್ಯೂ ಮುಗಿದ ನಂತರ ಅಭಿಷೇಕ್ ಬೈಕ್ ನಲ್ಲಿ ಕುಶಾಲ್ ಹಿಂಬದಿ ಕುಳಿತು ವಾಪಸ್ ಆಗುತ್ತಿದ್ದರು. ಮಾರ್ಗಮಧ್ಯೆ ಅಭಿಷೇಕ್ ಬೈಕ್ ಕೈಕೊಟ್ಟ ಪರಿಣಾಮ ಮುಂದೆ ಹೋಗುತ್ತಿದ್ದ ಸ್ನೇಹಿತ ಮನೋಜ್ ಕುಮಾರನಿಗೆ ಮೊಬೈಲ್ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಮನೋಜ್ ಕುಮಾರ್ ಇವರ ಬಳಿ ಬಂದು ಇವರ ಬೈಕ್ ಅನ್ನು ಎಳೆದುಕೊಂಡು (ಟೊಯಿಂಗ್) ಹೋಗುತ್ತಿದ್ದನು.
ಆದರೆ ನೈಸ್ ರಸ್ತೆಯ ಚೆನ್ನಸಂದ್ರ ಬ್ರಿಡ್ಜ್ ಬಳಿ ಸಂಜೆ 7.15ರಲ್ಲಿ ವೇಗವಾಗಿ ಬಂದ ಬಿಎಂಟಿಸಿ ಬಸ್ ಅಭಿಷೇಕ್ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಕುಶಾಲ್ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶವವನ್ನು ರಾಜರಾಜೇಶ್ವರಿ ನಗರದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಲಾಗಿದೆ.
ಘಟನೆಯಲ್ಲಿ ಸವಾರ ಅಭಿಷೇಕ್ ನ ಎರಡು ಕಾಲುಗಳು ಮುರಿದಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ಈತ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೆಂಗೇರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತವೆಸಗಿದ ಬಿಎಂಟಿಸಿ ಬಸ್ ಚಾಲಕ ರವೀಂದ್ರ ಕುಂದಗೋಳ ಎಂಬಾತನನ್ನು ಬಂಧಿಸಿದ್ದಾರೆ.












Click it and Unblock the Notifications