ಯಾದಗಿರಿ : ಬಸ್ ಸಿಬ್ಬಂದಿ, ವಿದ್ಯಾರ್ಥಿ ಮಾರಾಮಾರಿ
ಯಾದಗಿರಿ, ಆ. 28 : ಬಸ್ಸಿನ ಬಾಗಿಲಲ್ಲಿ ನಿಂತು ತೂರಾಡುತ್ತಾ ಬರಬೇಡಿ ಎಂದು ಹೇಳಿ ಬಸ್ ನಿರ್ವಾಹಕಿಯೊಬ್ಬಳು ವಿದ್ಯಾರ್ಥಿಯೊಬ್ಬನ ಬೆನ್ನಿಗೆ ತಟ್ಟಿದ ಘಟನೆ ವಿಕೋಪಕ್ಕೆ ಹೋಗಿ, ಕಲ್ಲು ತೂರಾಟ, ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆಯಿಂದಾಗಿ ಯಾದಗಿರಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬುಧವಾರ ಬಿಗುವಿನ ಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿಯೊಬ್ಬನ ಬೆನ್ನಿಗೆ ನಿರ್ವಾಹಕಿ ತಟ್ಟಿದ್ದೇ ತಡ ರೊಚ್ಚಿಗೆದ್ದ ಕಾಲೇಜು ವಿದ್ಯಾರ್ಥಿಗಳ ಸಮೂಹ ಆಕ್ರೋಶ ವ್ಯಕ್ತಪಡಿಸಿದೆ. ಇಷ್ಟಕ್ಕೆ ನಿಲ್ಲದೆ ಹಲವಾರು ನಗರ ಸಾರಿಗೆ ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ ವಿದ್ಯಾರ್ಥಿಗಳು. ಬಸ್ ಚಾಲಕ ನಿಂಗಪ್ಪ ಎಂಬುವವರ ಮೇಲೆ ಕೂಡ ಹಲ್ಲೆ ನಡೆಸಲಾಗಿದೆ.

ನಡೆದದ್ದೇನು? : ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿಗಳು ತುಂಬಿದ ಬಸ್ಸಿನ ಬಾಗಿಲಲ್ಲಿ ನೇತಾಡಿಕೊಂಡು ನಿಂತಿದ್ದರು. ಯಾರಾದರೂ ಬಿದ್ದರೆ ಅನಾಹುತವಾದೀತೆಂದು ಬಸ್ಸಿನ ನಿರ್ವಾಹಕಿ ವಿದ್ಯಾರ್ಥಿಗಳಿಗೆ ತಿಳಿಮಾತು ಹೇಳಿದ್ದಾರೆ. ಹಿಂದೆ ಇನ್ನೊಂದು ಬಸ್ಸು ಬರುತ್ತಿದೆ, ಅದಕ್ಕೆ ಹೋಗಿ ಎಂದು ಹೇಳಿದರೂ ಕೇಳಿಲ್ಲ. ಇದರಿಂದ ಕುಪಿತಳಾದ ನಿರ್ವಾಹಕಿ ವಿದ್ಯಾರ್ಥಿಯೊಬ್ಬನ ಬೆನ್ನಿಗೆ ತಟ್ಟಿದ್ದಾಳೆ.
ಅಲ್ಲೇ ಆಗಿರುವುದು ಅನಾಹುತ. ಅದ್ಹೇಕೆ ವಿದ್ಯಾರ್ಥಿ ಮೇಲೆ ಕೈ ಮಾಡಿದಿ ಎಂದು ವಿದ್ಯಾರ್ಥಿಗಳು ಜಗಳ ತೆಗೆದಿದ್ದಲ್ಲದೆ ನಿರ್ವಾಹಕಿ ಮೇಲೂ ಹಲ್ಲೆ ಮಾಡಲು ಯತ್ನಿಸಿದ್ದಾರೆ. ರಸ್ತೆತಡೆ ನಡೆಸಿ ಘೇರಾವೋ ಮಾಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಇತರ ಬಸ್ ಸಿಬ್ಬಂದಿಗಳು ವಿದ್ಯಾರ್ಥಿಗಳ ವಿರುದ್ಧ ತಿರುಗಿ ನಿಂತಿದ್ದಾರೆ. ಜಗಳ ತಾರಕಕ್ಕೇರಿ ವಿದ್ಯಾರ್ಥಿಗಳು ಬಸ್ ಮತ್ತು ಸಿಬ್ಬಂದಿ ಮೇಲೆ ಕಲ್ಲು ತೂರಲು ಆರಂಭಿಸಿದ್ದಾರೆ.
ಕಲ್ಲು ತೂರಾಟದಲ್ಲಿ ಅನೇಕ ಬಸ್ಸುಗಳ ಗಾಜು ಪುಡಿಯಾಗಿದ್ದಲ್ಲದೆ, ನಿಂಗಪ್ಪ ಎಂಬ ಚಾಲಕನಿಗೆ ಕಲ್ಲೇಟು ಬಿದ್ದಿದೆ. ಅವರ ತಲೆಗೆ ತೀವ್ರ ಪೆಟ್ಟು ಬಿದ್ದಿದೆ. ನಿಂಗಪ್ಪ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 10ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವಿದ್ಯಾರ್ಥಿಗೆ ಹೊಡೆದ ನಿರ್ವಾಹಕಿ ಮೇಲೂ ಕ್ರಮ ತೆಗೆದುಕೊಳ್ಳಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ.












Click it and Unblock the Notifications