ಪಕ್ಷದಲ್ಲಿ ಗ್ರೇಡ್ ಪದ್ಧತಿ ಜಾರಿಗೆ ತಂದ ರಾಹುಲ್ ಗಾಂಧಿ!

ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳಿಗೆ ಅವರ ಕಾರ್ಯ ನಿರ್ವಹಣೆಗೆ ಅನುಗುಣವಾಗಿ ಹಸಿರು, ಹಳದಿ ಮತ್ತು ಕೆಂಪು ಗ್ರೇಡ್‌ಗಳನ್ನು ನಿಗದಿ ಪಡಿಸಲಾಗಿದೆ. ಹಸಿರು ಗ್ರೇಡ್ ಪಡೆದವರು ಅತ್ಯುತ್ತಮ, ಹಳದಿ ಸಾಧಾರಣ ಮತ್ತು ಕೆಂಪು ಕಳಪೆ ಗ್ರೇಡ್ ಎಂದು ತೀರ್ಮಾನಿಸಲಾಗಿದೆ.
ಆದರೆ, ಪಕ್ಷದಲ್ಲಿ ಕೆಂಪು ಗ್ರೇಡ್ ಪಡೆದವರಿಗೆ ಸುಧಾರಣೆಗೊಳ್ಳಲು ಒಂದು ಅವಕಾಶ ನೀಡಲಾಗುತ್ತದೆ. ಅದರಲ್ಲೂ ಅವರು ವಿಫಲರಾದರೆ, ಪಕ್ಷದ ಉನ್ನತ ಹುದ್ದೆಗಳು ಅಂತಹ ನಾಯಕರಿಗೆ ಅರ್ಧಚಂದ್ರವಾಗಲಿವೆ.
ಯಾರಿಗೆ ಗ್ರೇಡ್ : ಹೈಕಮಾಂಡ್ ನೇರವಾಗಿ ನೇಮಿಸುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನು ಹೊರತುಪಡಿಸಿ ಉಳಿದೆಲ್ಲ ಪದಾಧಿಕಾರಿಗಳು ಗ್ರೇಡಿಂಗ್ ವ್ಯಾಪ್ತಿಗೆ ಒಳಪಡಲಿದ್ದಾರೆ. ಅಂದರೆ, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಖಜಾಂಚಿಗಳು , ಜಿಲ್ಲಾ ಅಧ್ಯಕ್ಷರ ಸಹಿತ ಎಲ್ಲರ ತಲೆ ಮೇಲೆ ಗ್ರೇಡ್ ಇರುತ್ತದೆ.
ಎಲ್ಲಿ ಅನುಷ್ಠಾನ : ರಾಹುಲ್ ಗಾಂಧಿ ಜಾರಿಗೆ ತಂದಿರುವ ಗ್ರೇಡ್ ಪದ್ದತಿ ಕೇರಳ ಮತ್ತು ಗುಜರಾತ್ ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಂಡಿದೆ. ಕೇರಳ ಪ್ರದೇಶ ಕಾಂಗ್ರೆಸ್ ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿಗೆ ಗ್ರೇಡ್ ವರದಿ ಸಲ್ಲಿಸಿದೆ.
ಮಾನದಂಡವೇನು : ಪಕ್ಷದ ಪದಾಧಿಕಾರಿಗಳಿಗೆ ಗ್ರೇಡ್ ನೀಡಲು ಕೆಲವು ಪ್ರಶ್ನಾವಳಿಗಳನ್ನು ಸಿದ್ದಪಡಿಸಲಾಗಿದೆ. ಅಧಿಕಾರವಧಿಯ ಸಮಯದಲ್ಲಿ ಎಷ್ಟು ಕಿ.ಮೀ. ಪ್ರಯಾಣಿಸಿದ್ದೀರಿ?, ಎಷ್ಟು ಪಾದಯಾತ್ರೆಗಳನ್ನು ಮಾಡಿದ್ದೀರಿ?, ರಾಜ್ಯದಲ್ಲಿ ಎಷ್ಟು ಸಾರ್ವಜನಿಕ ಸಭೆಗಳು ನಡೆದಿವೆ? ಪದಾಧಿಕಾರಿಗಳ ಕೊನೆಯ ಸಭೆ ನಡೆದಿರುವುದು ಯಾವಾಗ? ಎಂಬುದು ಮುಖ್ಯ ಪ್ರಶ್ನೆಗಳಾಗಿವೆ.
ಒಂದು ವರ್ಷದ ಅವಧಿಯಲ್ಲಿ ಪಕ್ಷದ ವತಿಯಿಂದ ನಡೆದ ಕಾರ್ಯಕ್ರಮಗಳೇನು?, ಎಷ್ಟು ಹೋರಾಟಗಳಲ್ಲಿ ಭಾಗವಹಿಸಿದ್ದೀರಿ?, ಚುನಾವಣೆಯಲ್ಲಿ ಎಷ್ಟು ಸಲ ಸೋತಿದ್ದೀರಿ? ಮುಂತಾದ ಪ್ರಶ್ನೆಗಳು ಗ್ರೇಡ್ ನಿಗದಿಯ ಮಾನದಂಡಗಳಾಗಿವೆ.
ಪದಾಧಿಕಾರಿಗಳು ಈ ಪ್ರಶ್ನೆಗಳಿಗೆ ಉತ್ತರ ಬರೆಯಬೇಕು. ಪಕ್ಷದ ನೀಡಿದ ಕೆಲವು ವಿಷಯಗಳ ಕುರಿತು ಕಿರು ಪ್ರಬಂಧ ಬರೆಯಬೇಕು. ಇಷ್ಟು ಪರೀಕ್ಷೆಗಳ ನಂತರ ಗ್ರೇಡ್ ನಿಗದಿಯಾಗಲಿದೆ. ಹೇಗಿದೆ ರಾಹುಲ್ ಗಾಂಧಿ ಗ್ರೇಡ್ ಸಿಸ್ಟಂ?












Click it and Unblock the Notifications