ಈರುಳ್ಳಿ ಬೆಲೆ ಎಷ್ಟಾದರೂ ಆ ಗ್ರಾಮಸ್ಥರಿಗೆ ಕಣ್ಣೀರು ಬರಲ್ಲ!
ಪಾಟ್ನಾ, ಆ.27 : ದೇಶದ ತುಂಬಾ ಈರುಳ್ಳಿ ಕೊಳ್ಳುವ ಜನರು ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದಾರೆ. ಆದರೆ, ಬಿಹಾರದ ಗ್ರಾಮವೊಂದು ಈರುಳ್ಳಿ ದರದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕಾರಣವಿಷ್ಟೆ ಈ ಗ್ರಾಮದಲ್ಲಿ ಈರುಳ್ಳಿ ಬಳಕೆಯನ್ನು ನಿಷೇಧಿಸಲಾಗಿದೆ.
ಬಿಹಾರದ ಬಂಕ್ರಾ ಜಿಲ್ಲೆಯ ಭೀಮಸೇನ ಎಂಬ ಹಳ್ಳಿಯ ಜನರಿಗೆ ಈರುಳ್ಳಿ ಬೆಲೆ ಎಷ್ಟು ಹೆಚ್ಚಾದರೂ ಯಾವುದೇ ಚಿಂತೆಯಿಲ್ಲ. ಕಾರಣ ಗ್ರಾಮದಲ್ಲಿ ಸುಮಾರು 200 ವರ್ಷಗಳಿಂದ ಅಡುಗೆಗೆ ಈರುಳ್ಳಿಯನ್ನು ಬಳಸುವುದಿಲ್ಲ.

ಭೀಮಸೇನ 200 ಮನೆಗಳಿರುವ ಚಿಕ್ಕ ಗ್ರಾಮ. ಈ ಗ್ರಾಮದ ಎಲ್ಲಾ ಮನೆಗಳಲ್ಲೂ ಈರುಳ್ಳಿ ಬಳಕೆ ನಿಷೇಧ ಆದ್ದರಿಂದ ಬೆಲೆ ಎಷ್ಟು ಹೆಚ್ಚಾದರೂ ಜನರು, ತಮ್ಮ ಪಾಡಿಗೆ ತಾವು ಹಾಯಾಗಿರುತ್ತಾರೆ. ಈರುಳ್ಳಿಯನ್ನು ಬಳಸಬಾರದು ಎಂಬುದು ಗ್ರಾಮದ ಒಂದು ಸಂಪ್ರದಾಯ.
ಭೀಮಸೇನ ಗ್ರಾಮದ ಮಹೇಂದರ್ ಸಿಂಗ್ ಹೇಳುವಂತೆ, ಬಹಳ ಹಿಂದೆ ಗ್ರಾಮ ಪ್ಲೇಗ್ ತರಹದ ಮಾರಣಾಂತಿಕ ರೋಗವೊಂದಕ್ಕೆ ತುತ್ತಾಗಿತ್ತು. ಇದರಿಂದ ಗ್ರಾಮದ ನೂರಾರು ಜನರು ಸಾವಿಗೀಡಾಗಿದ್ದರು.
ಈ ರೋಗ ಬರಲು ಗ್ರಾಮದ ದೇವತೆಯ ಶಾಪವೇ ಕಾರಣ. ಗ್ರಾಮಸ್ಥರು ರೋಗದಿಂದ ಗುಣಮುಕ್ತರಾದರೆ, ಗ್ರಾಮದಲ್ಲಿ ಈರುಳ್ಳಿ ಬಳಕೆಯನ್ನು ನಿಷೇಧಿಸುತ್ತೇವೆ ಎಂದು ಜನರು ಹರಕೆ ಹೊತ್ತರು. ರೋಗ ವಾಸಿಯಾದ ನಂತರ ಗ್ರಾಮದಲ್ಲಿ ಈರುಳ್ಳಿ ಬಳಸುತ್ತಿಲ್ಲ ಎಂದು ಹೇಳುತ್ತಾರೆ.
ಈರುಳ್ಳಿ ಬಳಕೆ ಮಾತ್ರವಲ್ಲ, ಗ್ರಾಮದ ಹೊಲಗಳಲ್ಲಿ ಈರುಳ್ಳಿಯನ್ನು ಬೆಳೆಯುವುದಿಲ್ಲ. ಗ್ರಾಮದಲ್ಲಿ ಯಾವುದೇ ಸಭೆ-ಸಮಾರಂಭ ನಡೆದು, ವಿವಿಧ ಭಕ್ಷ ಭೋಜನಗಳು ತಯರಾದರೂ ಈರುಳ್ಳಿಯ ಘಮ ನಿಮಗೆ ದೊರೆಯುವುದಿಲ್ಲ.
ಅಂದಹಾಗೆ ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಹತೋಟಿಗೆ ಬಂದಿದೆ. ರಾಜ್ಯದ ವಿವಿಧ ಭಾಗಗಳಿಂದ ಮಾರುಕಟ್ಟೆಗಳಿಗೆ ಈರುಳ್ಳು ಹೆಚ್ಚಾಗಿ ಸರಬರಾಜು ಆಗುತ್ತಿದೆ. ಬೆಂಗಳೂರಿನಲ್ಲಿ ಮಂಗಳವಾರ ಈರುಳ್ಳಿ ಬೆಲೆ 40 ರಿಂದ 45 ರೂ. ಇದೆ.(ಪಿಟಿಐ ಚಿತ್ರ)












Click it and Unblock the Notifications