ಮಣಿಪಾಲ್ ಗ್ಯಾಂಗ್ ರೇಪ್: ಆರೋಪಿಗಳಿಂದ ವಕೀಲರು ದೂರ

ಆರೋಪಿಗಳಾದ ಯೋಗೀಶ್ ಪೂಜಾರಿ, ಹರಿಪ್ರಸಾದ್ ಪೂಜಾರಿ ಹಾಗೂ ಆನಂದ ಪಾಣಾರ ಜೂ. 20ರಂದು ಮಧ್ಯರಾತ್ರಿ ಮಣಿಪಾಲ ವಿವಿ ಕ್ಯಾಂಪಸ್ಸಿನಿಂದ ವೈದ್ಯ ವಿದ್ಯಾರ್ಥಿನಿಯನ್ನು ಆಟೋದಲ್ಲಿ ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು.
ಈ ಮಧ್ಯೆ ಸಾಕ್ಷ್ಯನಾಶ ಪಡಿಸುವ ಕಾರ್ಯದಲ್ಲಿ ತೊಡಗಿದ್ದ ಆಪಾದನೆ ಮೇಲೆ ಬಂಧಿತರಾಗಿರುವ ಇನ್ನಿಬ್ಬರು ಆರೋಪಿಗಳಾದ ಬಾಲಚಂದ್ರ ಪೂಜಾರಿ ಮತ್ತು ಹರೀಂದ್ರ ಪೂಜಾರಿ ಪರವಾಗಿ ವಕೀಲರೊಬ್ಬರು ವಾದ ನಡೆಸುತ್ತಿದ್ದಾರೆ. ಆದರೆ ಘಟನೆ ನಡೆದು ಎರಡು ತಿಂಗಳು ಕಳೆದಿದ್ದರೂ ಅತ್ಯಾಚಾರ ಆರೋಪಿಗಳ ಪರವಾಗಿ ವಾದ ಮಾಡುವುದಕ್ಕೆ ಯಾವ ವಕೀಲರು ಅರ್ಜಿ ಸಲ್ಲಿಸಿಲ್ಲ.
ಪ್ರಕರಣದ ತನಿಖಾಧಿಕಾರಿ, ಮಣಿಪಾಲ ಎಸ್‌ಐ ಸದಾನಂದ ತಿಪ್ಪಣ್ಣನವರ್ ಅವರು ಎಲ್ಲ ಆರೋಪಿಗಳನ್ನು ಉಡುಪಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ನಾಗಜ್ಯೋತಿ ಅವರು ಆರೋಪಿಗಳಿಗೆ 5 ದಿನಗಳ ಕಾಲ (ಆ. 30ರವರೆಗೆ) ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಇದು ಈ ಆರೋಪಿಗಳಿಗೆ ವಿಧಿಸಲಾದ 5ನೇ ನ್ಯಾಯಾಂಗ ಬಂಧನವಾಗಿದೆ.
ಪ್ರಕರಣದ ಬಗ್ಗೆ ತನಿಖಾಧಿಕಾರಿ ಸದಾನಂದ ತಿಪ್ಪಣ್ಣನವರ್ ವಿವರವಾದ 600 ಪುಟಗಳಿಗೂ ಮೀರಿದ ಚಾರ್ಜ್‌ಶೀಟನ್ನು ನ್ಯಾಯಾಲಯಕ್ಕೆ ಆ. 22ರಂದು ಸಲ್ಲಿಸಿದ್ದಾರೆ. ಪ್ರಸ್ತುತ ಪ್ರಕರಣ ಮುಖ್ಯ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ವಿಚಾರಣೆಗಾಗಿ ಜಿಲ್ಲಾ ಸತ್ರ (ಸೆಷನ್ಸ್) ನ್ಯಾಯಾಲಯಕ್ಕೆ ವರ್ಗಾವಣೆಗೊಳ್ಳಬೇಕಾಗಿದೆ.
ಆ. 30ರಂದು ಆರೋಪಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಾಗಿದ್ದು, ಅಂದು ಪ್ರಕರಣ ಸತ್ರ ನ್ಯಾಯಾಲಯಕ್ಕೆ ವರ್ಗವಾಗಬಹುದು ಎಂದು ಸರ್ಕಾರಿ ಅಭಿಯೋಜಕ ಜಿಎಸ್ ಜಿತೂರಿ ಅಭಿಪ್ರಾಯಪಟ್ಟಿದ್ದಾರೆ.
ಆರೋಪಿಗಳ ಮುಖ ದರ್ಶನವಾಯ್ತು: ಅತ್ಯಾಚಾರಕ್ಕೊಳಗಾಗಿದ್ದ ವಿದ್ಯಾರ್ಥಿನಿ ಆರೋಪಿಗಳನ್ನು ಗುರುತಿಸುವುದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ತನಿಖೆಯ ಪ್ರಕ್ರಿಯೆಗೆ ಅತ್ಯಗತ್ಯವಾಗಿದ್ದ ಐಡೆಂಟಿಟಿ ಪೆರೇಡ್ ಪ್ರಕ್ರಿಯೆ ನಡೆಯಲಿಲ್ಲ.
ಆದರೆ ಪೊಲೀಸರು ವೈಜ್ಞಾನಿಕವಾಗಿ (ಡಿಎನ್‌ಎ ಪರೀಕ್ಷೆ ಮೂಲಕ) ಆರೋಪಿಗಳ ಗುರುತು ಪತ್ತೆ ಮಾಡಿದ್ದು, ಆ ವರದಿಯನ್ನು ಚಾರ್ಜ್ ಶೀಟಿನೊಂದಿಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಮುಖವನ್ನು ಬಟ್ಟೆಯಿಂದ ಮುಚ್ಚದೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.












Click it and Unblock the Notifications