ಕರ್ನಾಟಕದ ತುಣುಕು ಸುದ್ದಿಗಳ ಇಣುಕು ನೋಟ
ಬೆಂಗಳೂರು, ಆ.27 : ಕರ್ನಾಟಕದ ಸಚಿವ ಸಂಪುಟವೇ ನವದೆಹಲಿಗೆ ಶಿಫ್ಟ್ ಆಗಿದ್ದು, ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಕ್ಕಾಗಿ ಹೈ ಕಮಾಂಡ್ ನಾಯಕರಿಂದ ಅನುಮತಿ ಪಡೆಯಲು ಪ್ರಯತ್ನ ನಡೆಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಬೆಳಗ್ಗೆ ನವದೆಹಲಿ ತಲುಪಿದ್ದಾರೆ. ರಾಜ್ಯದ ವಿವಿಧ ನಾಯಕರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಕಾಯುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಈಗಾಗಲೇ ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಹಸಿರು ನಿಶಾನೆ ತೋರಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳವಾರ ಬೆಳಗ್ಗೆ, ಆಸ್ಪತ್ರೆಯಿಂದ ಮನೆಗೆ ಆಗಮಿಸಿದ್ದು, ಇಂದು ನಾಯಕರ ಭೇಟಿಗೆ ಅವಕಾಶ ನೀಡುವ ಸಾಧ್ಯತೆ ಕಡಿಮೆ ಎಂದು ತಿಳಿದು ಬಂದಿದೆ. ವಿವಿಧ ಕೇಂದ್ರ ಸಚಿವರನ್ನು ಭೇಟಿ ಯಾಗುತ್ತಿರುವ ಸಿದ್ದರಾಮಯ್ಯ ರಾಜ್ಯದ ಯೋಜನೆಗಳಿಗೆ ಸಹಕಾರ ಕೋರುತ್ತಿದ್ದಾರೆ. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಸರ್ಕಾರದ ಹನಿಮೂನ್ ಅವಧಿ ಮುಗಿದಿದೆ
ಕಾಂಗ್ರೆಸ್ ಸರ್ಕಾರ ಹನಿಮೂನ್ ಅವಧಿ ಮುಗಿದಿದೆ. ವಿರೋಧ ಪಕ್ಷ ಬಿಜೆಪಿ ಸರ್ಕಾರದ ವಿರುದ್ದ ಹೋರಾಟ ಆರಂಭಿಸಲಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆದ ಸರ್ಕಾರ ನೀತಿ ವಿರೋಧಿಸಿ ಶೀಘ್ರದಲ್ಲೇ ಪ್ರತಿಭಟನೆ ಆರಂಭಿಸಲಾಗುವುದು ಎಂದು ಮಾಜಿ ಸಚಿವ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.

ಗಣೇಶ ಚತುರ್ಥಿಗೆ ಭರ್ಜರಿ ಕೊಡುಗೆ
ಬೆಳಗಾವಿಯಲ್ಲಿ ಮುಂಬೈ ಮಾದರಿ ಗಣೇಶೋತ್ಸವ ಆಚರಣೆಗೆ ಸಕ್ಕರೆ ಖಾತೆ ಸಚಿವ ಪ್ರಕಾಶ್ ಹುಕ್ಕೇರಿ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಮಂಗಳವಾರ ಬೆಳಗಾವಿಯಲ್ಲಿ ಮಾತನಾಡಿದ ಅವರು, ಗಣೇಶೋತ್ಸವ ಆಚರಣೆಗೆ 1 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಶಿಶು ಆರೋಗ್ಯ ಕೇಂದ್ರ ಪ್ರಾರಂಭ
ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಮಣಿಪಾಪ್ ಆಸ್ಪತ್ರೆ ಉಡುಪಿಯಲ್ಲಿ ನೂತನ ಶಿಶು ಆರೈಕೆ ಕೇಂದ್ರವನ್ನು ಆರಂಭಿಸಿದೆ. ಸ್ತನ್ಯಪಾನದ ಮಹತ್ವವನ್ನು ಜನರಿಗೆ ತಿಳಿಸುವ ಕಾರ್ಯಕ್ರಮವನ್ನು ಕೇಂದ್ರ ಹಮ್ಮಿಕೊಂಡಿದೆ. ಮೂವತ್ತು ಹಾಸಿಗೆಗಳ ೀ ಕೇಂದ್ರ ವಾರದ 7 ದಿನಗಳ ಕಾಲ 24 ಗಂಟೆ ಕಾರ್ಯ ನಿರ್ವಹಿಸಲಿದೆ. ಮಂಗಳವಾರ ಕೇಂದ್ರವನ್ನು ನಟಿ ತಾರಾ ಉದ್ಘಾಟಿಸಿದರು.

ಶಿಕ್ಷಕ ಶವವಾಗಿ ಪತ್ತೆ
ಶಾಲೆಗೆ ಸೌಲಭ್ಯ ಒದಗಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಮಕ್ಕಳ ಪುಂಡಾಟದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿಟ್ಟು ಕಾಣೆಯಾಗಿದ್ದ ಕಬ್ಬನ್ ಪೇಟೆ ಬಿಬಿಎಂಪಿ ಪ್ರೌಢ ಶಾಲೆಯ ಹಂಗಾಮಿ ಮುಖ್ಯ ಶಿಕ್ಷಕ ವೇದಾಂತ ಪಾಟೀಲ್ (52) ಅವರ ಶವ ಮಂಡ್ಯ ಜಿಲ್ಲೆ ಹಂಗರಹಳ್ಳಿ ಬಳಿ ಪತ್ತೆಯಾಗಿದೆ. ಕಾವೇರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿಟ್ಟು ಪಾಟೀಲ್ ಶನಿವಾರದಿಂದ ನಾಪತ್ತೆಯಾಗಿದ್ದರು. (ಮಕ್ಕಳ ಪುಂಡಾಟ ಮೇಷ್ಟ್ರು ನಾಪತ್ತೆ)

ತಾಯಿಯನ್ನೇ ಕೊಂದ ಮಗ
ಹೆತ್ತ ತಾಯಿಯನ್ನು ಮಗ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಗುಲ್ಬರ್ಗಾ ಜಿಲ್ಲೆಯ ಕೋಳೂರು ಗ್ರಾಮದಲ್ಲಿ ನಡೆದಿದೆ. ಖ್ಯಾದಿಗೆಮ್ಮ (50) ಕೊಲೆಯಾದ ದುರ್ದೈವಿ. ಇವರ ಮಗ ಭೀಮಪ್ಪ ಪೂಜಾರಿ ಮಂಗಳವಾರ ಬೆಳಗ್ಗೆ ತಾಯಿಯನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಕೊಲೆಗೆ ಆಸ್ತಿ ವಿವಾದವೇ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಫರಹತಾಬಾದ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಭೀಮಪ್ಪನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.

ರಸ್ತೆ ಅಪಘಾತಕ್ಕೆ 3 ಬಲಿ
ಬೊಲೇರೊ ವಾಹನ ಪಲ್ಟಿಯಾಗಿ ಹಳ್ಳಕ್ಕೆ ಬಿದ್ದ ಪರಿಣಾಮ 3ಮಂದಿ ಸ್ಥಳದಲ್ಲೇ ಸಾವನ್ನಪ್ಪಿ, ನಾಲ್ವರು ಗಂಭೀರ ವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಬೆಕ್ಕೋಡು ಕ್ರಾಸ್ ಬಳಿ ನಡೆದಿದೆ. ಕಾರಿನಲ್ಲಿದ್ದವರೆಲ್ಲರೂ ಬಾಗಲಕೋಟೆ ಮೂಲದವರೆಂದು ತಿಳಿದುಬಂದಿದೆ. ವೇಗದಲ್ಲಿ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ, ಹಳ್ಳಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ. ಗಾಯಗೊಂಡ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆ.31 ಮತ್ತು ಸೆ.1ರಂದು ಜಲಪಾತ ಉತ್ಸವ
ಗಗನ ಚುಕ್ಕಿ ಮತ್ತು ಭರಚುಕ್ಕಿ ಜಲಪಾತದಲ್ಲಿ ಆ.31 ಮತ್ತು ಸೆ.1ರಂದು ಜಲಪಾತ ಉತ್ಸವ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವ ಪ್ರಸಾದ್ ಹೇಳಿದ್ದಾರೆ. ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲವಾಗುವಂತೆ ಕುಡಿಯುವ ನೀರು, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. ಉತ್ಸವದಲ್ಲಿ 26 ಕಲಾ ತಂಡಗಳು ಭಾಗವಹಿಲಿವೆ. ವಿವಿಧ ಕರಕುಶಲ ಉದ್ದಿಮೆಗಳನ್ನು ಪ್ರೋತ್ಸಾಹಿಸಲು 20 ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದರು

ಚಿತ್ರದುರ್ಗಕ್ಕೆ ಹರಿಯಲಿದ್ದಾಳೆ ಭದ್ರಾ
ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಸಿ, ಜಿಲ್ಲೆಯ ಕುಡಿಯು ನೀರಿನ ಸಮಸ್ಯೆ ಬಗೆಹರಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿಎ ಎಚ್.ಆಂಜನೇಯ ಹೇಳಿದ್ದಾರೆ. ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಬೇಕು ಎಂದು ಸಿಎಂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೇಂದ್ರದ ಸಹಕಾರದಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂದರು.

ದಸರಾದಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ
ದಸರಾ ವಸ್ತು ಪ್ರದರ್ಶನದಲ್ಲಿ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ದಸಾರಕ್ಕೆ ಆಗಮಿಸುವ ಪ್ರವಾಸಿಗರ ಪ್ಯಾಕೇಜ್ ಟೂರ್ ಗಳ ಮೂಲಕ ಮೈಸೂರು ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ತೆರಳಲು ಅವಕಾಶ ಕಲ್ಪಿಸಲಾಗುವುದು. ದಸರಾ ಕುರಿತ ಪ್ರತಿಯೊಂದು ಮಾಹಿತಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಸಚಿವರು ಹೇಳಿದರು.












Click it and Unblock the Notifications