ಸುಳ್ಳು ಹೇಳಿ ಪಡೆದ ಜಿ ಕೆಟಗರಿ ಸೈಟ್ ಗಳಿಗೆ ಕುತ್ತು

ಜಿ ಕೆಟಗರಿಯ 313 ನಿವೇಶನ ಹಂಚಿಕೆಯಲ್ಲಿ ಆಗಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ಹೈ ಕೋರ್ಟ್ ಆದೇಶದಂತೆ, ಬಿಡಿಎ ನ್ಯಾ.ಬಿ.ಪದ್ಮರಾಜ್ ನೇತೃತ್ವದ ಮೂವರು ಸದಸ್ಯರ ಸಮಿತಿ ರಚಿಸಿತ್ತು. ಸಮಿತಿಯು ಸೋಮವಾರ ಸರ್ಕಾರಕ್ಕೆ ತನ್ನ ವರದಿ ನೀಡಿದೆ.
ವರದಿಯಲ್ಲಿ ಸ್ವಂತ ಮನೆ, ನಿವೇಶನ ಹೊಂದಿದ್ದರೂ ಹಾಗೂ ಸರ್ಕಾರಿ, ಅರೆ ಸರ್ಕಾರಿ ಸಂಸ್ಥೆಯಿಂದ ರಿಯಾಯಿತಿ ದರದಲ್ಲಿ ಸೈಟ್ ಪಡೆದಿದ್ದರೂ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಜಿ-ಕೆಟಗರಿ ನಿವೇಶನ ಪಡೆದಿದ್ದರೆ, ಅದನ್ನು ರದ್ದಗೊಳಿಸುವಂತೆ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಸಮಿತಿಯ ವರದಿ ಪ್ರಕಾರ ಹಾಲಿ ಮತ್ತು ಮಾಜಿ ಮಂತ್ರಿಗಳು, ಶಾಸಕರು, ಸಂಸದರು ಸೇರಿದಂತೆ ಅನೇಕರು ಸುಳ್ಳುಪ್ರಮಾಣ ಪತ್ರ ಸಲ್ಲಿಸಿ ಜಿ-ಕೆಟಗರಿಯಡಿ ಬಿಡಿಎ ನಿವೇಶನ ಪಡೆದಿರುವುದು ವಿಚಾರಣೆಯಲ್ಲಿ ಪತ್ತೆಯಾಗಿದೆ.
ಸಮಿತಿಯಲ್ಲಿದ್ದ ನ್ಯಾ.ರಂಗವಿಠಲಚಾರ್ ಹಾಗೂ ಸರ್ಕಾರದ ನಿವೃತ್ತ ಮುಖ್ಯಕಾರ್ಯದರ್ಶಿ ಪಿ.ಬಿ.ಮಹಿಷಿ, ಎಂಟು ತಿಂಗಳ ವಿಚಾರಣೆ ಬಳಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸೊದೆ. ಸಮಿತಿಯ ವಿಚಾರಣಾ ವರದಿಯನ್ನು ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಲಿದೆ.
ಕೈ ತಪ್ಪಲಿದೆ ನಿವೇಶನ : ಸಮಿತಿಯ ವರದಿಯ ಕುರಿತು ಕೆಲವು ಮಾಹಿತಿಗಳು ಲಭ್ಯವಾಗಿವೆ. ಸುಳ್ಳುಪ್ರಮಾಣ ಪತ್ರ ನೀಡಿ ಪಡೆದ ನಿವೇಶನಗಳು ರದ್ದಾಗಲಿವೆ. ಆದರೆ, ನಿವೇಶನದಲ್ಲಿ ಮನೆ ಕಟ್ಟಿಕೊಂಡಿದ್ದರೆ ಅಥವ ಮಾರಾಟ ಮಾಡಿ ನೋಂದಣಿ ಮಾಡಿಸಿಕೊಂಡಿದ್ದರೆ ನಿವೇಶನ ರದ್ದಾಗುವುದಿಲ್ಲ.
ಜನಪ್ರತಿನಿಧಿಗಳು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಬಿಡಿಎಯಿಂದ ನಿವೇಶನ ಪಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿದೆ. ಇಂಥವರ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಸಮಿತಿ ಶಿಫಾರಸ್ಸು ಮಾಡಿದೆ ಎಂದು ತಿಳಿದು ಬಂದಿದೆ.
ರಾಜಕೀಯ ನಾಯಕರು ಹೆಚ್ಚು : ಜಿ-ಕೆಟಗರಿಯಡಿ ನಿವೇಶನ ಪಡೆದ 313 ಮಂದಿಯಲ್ಲಿ ಜನಪ್ರತಿನಿಧಿಗಳ ಸಂಖ್ಯೆಯೇ ಹೆಚ್ಚಿದೆ. ಹಾಲಿ ಮತ್ತು ಮಾಜಿ ಶಾಸಕರು/ಸಂಸದರು ತಮ್ಮ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ನಿವೇಶನಗಳನ್ನು ಪಡೆದಿದ್ದಾರೆ. (ಜಿ ಕೆಟಗರಿ ನಿವೇಶನ ತನಿಖೆಗೆ ಸಮಿತಿ ರಚನೆ)
ಸಮಿತಿ ಕೆಎಚ್‌ಬಿ, ನಗರಾಭಿವೃದ್ಧಿ ಪ್ರಾಧಿಕಾರಗಳು, ಬಿಡಿಎ, ಬಿಬಿಎಂಪಿ, ನಗರಸಭೆ, ನೋಂದಣಿ ಇಲಾಖೆಯಿಂದ ಮಾಹಿತಿಗಳನ್ನು ತರಿಸಿಕೊಂಡು ಅಕ್ರಮಗಳನ್ನು ಪತ್ತೆ ಹಚ್ಚಿದೆ. ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ಮಾಹಿತಿ ಸಂಗ್ರಹಿಸಿದೆ.
ಶಿಕ್ಷೆ ಏನು : ಸುಳ್ಳು ಪ್ರಮಾಣ ಪತ್ರ ಸಲ್ಲಿಸಿ ಪಡೆದ ನಿವೇಶನ ರದ್ದುಪಡಿಸುವ ಜೊತೆಗೆ, ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 463, 464, 465 ಪ್ರಕಾರ ಕೇಸು ದಾಖಲಿಸಿ, ಗರಿಷ್ಟ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.












Click it and Unblock the Notifications