ಕನ್ನಡದಲ್ಲಿ, ದೇವರ ಹೆಸರಿನಲ್ಲಿ ರಮ್ಯಾ- ಸುರೇಶ್ ಪ್ರಮಾಣ
ನವದೆಹಲಿ, ಆಗಸ್ಟ್ 26: ಭಾರಿ ಅಂತರದೊಂದಿಗೆ ಅಮೋಘ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ ರಮ್ಯಾ ಮತ್ತು ಡಿಕೆ ಸುರೇಶ್ ಅವರು ಸಂಸತ್ತಿನಲ್ಲಿ ಇಂದು ಸೋಮವಾರ ಪೂರ್ವನಿಗದಿತ ಸಮಯದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸ್ಪೀಕರ್ ಮೀರಾಕುಮಾರ್ ಅವರು ಇಬ್ಬರಿಗೂ ಪ್ರಮಾಣ ವಚನ ಬೋಧಿಸಿದರು.
ಮಜಂತಾ ಬಣ್ಣದ ಕ್ಲೋಸ್ಡ್ ನೆಕ್ ರವಿಕೆ ಮತ್ತು ಇಳಕಲ್ ಸೀರೆಯಲ್ಲಿ ಕಂಗೊಳಿಸಿದ ನಟಿ ರಮ್ಯಾ ಅವರು ಕನ್ನಡದಲ್ಲಿ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿ ತಮ್ಮತ್ತ ಧಾವಿಸಿದ ರಮ್ಯಾ ಬಗ್ಗೆ ಸ್ಪೀಕರ್ ಮೀರಾಕುಮಾರ್ ಅವರು ಮುಗುಳ್ನಗೆ ಬೀರಿ, ಮೆಚ್ಚುಗೆ ಸೂಚಿಸಿದರು.

ಅದೇ ರೀತಿ, ಡಿಕೆ ಸುರೇಶ್ ಅವರು ಶ್ವೇತ ವರ್ಣದ ದಿರಿಸಿನಲ್ಲಿ ಮಿಂಚಿದರು. ಅವರೂ ಸಹ ಕನ್ನಡದಲ್ಲಿ, ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ನೂತನ ಸದಸ್ಯರಿಬ್ಬರೂ ಮಹತ್ವದ ಸದನ ಕಲಾಪದಲ್ಲಿ ಪಾಲ್ಗೊಂಡರು.
ಪ್ರಮಾಣ ವಚನ ಸ್ವೀಕರಿಸುವ ವೇಳೆ ರಮ್ಯಾ ಅವರ ತಾಯಿ ಮತ್ತು ಕೆಲವು ಆಪ್ತ ಗೆಳತಿಯರು, ಡಿಕೆ ಸುರೇಶ್ ಸಹೋದರ ಡಿಕೆ ಶಿವಕುಮಾರ್ ಮತ್ತವರ ಕುಟುಂಬದ ಸದಸ್ಯರು ಪ್ರೇಕ್ಷಕರ ಗ್ಯಾಲರಿಯಲ್ಲಿ ಹಾಜರಿದ್ದರು. ರಮ್ಯಾ ಹಾಗೂ ಸುರೇಶ್ ಅವರುಗಳು ಅನುಕ್ರಮವಾಗಿ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭಾ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಇಂಗ್ಲೀಷಿನಲ್ಲಿ ಸಂವಿಧಾನದ ಹೆಸರಿನಲ್ಲಿ: ಇದಾದನಂತರ ರಾಜ್ಯದಿಂದ ರಾಜ್ಯ ಸಭೆಗೆ ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ಸಿನ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅವರು ಸಹ ಮೇಲ್ಮನೆ ಸದಸ್ಯರಾಗಿ ಸತತವಾಗಿ 3ನೆಯ ಬಾರಿಗೆ ಪ್ರಮಾಣ ಸ್ವೀಕರಿಸಿದರು.












Click it and Unblock the Notifications