ಬಿಜೆಪಿ ಮೋದಿ ಕಾಲೆಳೆದರೆ, ಯುಪಿಎ III ಸರಕಾರ ಖಚಿತ
ಬೆಂಗಳೂರು, ಆ. 26 : "ಮೊಟ್ಟಮೊದಲ ದಿನದಿಂದ ಮಾಧ್ಯಮ ನರೇಂದ್ರ ಮೋದಿ ಅವರ ವಿರುದ್ಧ ನಿಂತಿದೆ, ಮಾಧ್ಯಮವನ್ನು ಕಾಂಗ್ರೆಸ್ ತನ್ನ ಜೇಬಿನಲ್ಲಿ ಬಚ್ಚಿಟ್ಟುಕೊಂಡಿದೆ. ಇದಾವುದಕ್ಕೂ ತಲೆಕೆಡಿಸಿಕೊಳ್ಳದ ಮೋದಿ ಗುಜರಾತ್ ಅಭಿವೃದ್ಧಿಗೆ ಟೊಂಕ ಕಟ್ಟಿದ್ದಾರೆ. ನಿಜ ಹೇಳಬೇಕೆಂದರೆ, ಮಹಾತ್ಮಾ ಗಾಂಧಿ ಅವರ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿರುವುದು ನರೇಂದ್ರ ಮೋದಿ ಮಾತ್ರ."
ಗುಜರಾತ್ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ನರೇಂದ್ರ ಮೋದಿ ಅವರ ಬಗ್ಗೆ ಪ್ರಶಂಸೆಯ ಮಳೆ ಸುರಿಸಿದವರು, ಖ್ಯಾತ ಬರಹಗಾರ್ತಿ ಮತ್ತು ಶಿಕ್ಷಣತಜ್ಞೆ ಮಧು ಪೂರ್ಣಿಮಾ ಕಿಶ್ವರ್ ಅವರು. ಮೋದಿ ಅವರ ಬಗ್ಗೆ ಮತ್ತು ಗುಜರಾತ್ ರಾಜ್ಯದ ಅಧ್ಯಯನ ನಡೆಸಿರುವ ಮಧು ಕಿಶ್ವರ್ ಅವರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು ಬೆಂಗಳೂರಿನ ನಾಗರಿಕರ ಎದಿರು.
ಆಗಸ್ಟ್ 25ರ ಭಾನುವಾರ, ಮಧ್ಯಾಹ್ನ 3.30ಕ್ಕೆ ಜಯನಗರದ ಮೂರನೇ ಬ್ಲಾಕ್ ನಲ್ಲಿರುವ ರಾಷ್ಟ್ರೋತ್ಥಾನ ಯೋಗಿಕ್ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ 'ಜಿಜ್ಞಾಸಾ' ಏರ್ಪಡಿಸಿದ್ದ 'ಮೋದಿ, ಮುಸ್ಲಿಂ ಮತ್ತು ಮೀಡಿಯಾ' ಸಂವಾದ ಕಾರ್ಯಕ್ರಮದಲ್ಲಿ, ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ಸಭಿಕರೆದಿರು ಮಧು ಕಿಶ್ವರ್ ಅವರು ಮುಕ್ತವಾಗಿ ಸಂವಾದದಲ್ಲಿ ಭಾಗವಹಿಸಿದರು.

ನಿಲುವು ಬದಲಿಸಿಕೊಂಡ ಮಧು ಕಿಶ್ವರ್
"ಮೋದಿ ಅವರ ಬಗ್ಗೆ ವಿರುದ್ಧ ನಿಲುವನ್ನು ತಳೆದಿದ್ದ ನಾನು, 2002ರಲ್ಲಿ ನಡೆದ ಗೋಧ್ರಾ ನರಮೇಧದ ನಂತರ ಅವರನ್ನು ಪದಚ್ಯುತಿಗೊಳಿಸಬೇಕು ಮತ್ತು ಗಲ್ಲಿಗೇರಿಸಬೇಕು ಎಂದು ಕೂಡ ಬರೆದಿದ್ದೆ. ಆದರೆ, ಹಾಗೆ ಬರೆದಿದ್ದು ಅವರನ್ನು ಕುರಿತು ಸಂಶೋಧನೆ ನಡೆಸುವ ಮೊದಲು. ಸಾಕಷ್ಟು ಅಧ್ಯಯನ ನಡೆಸಿದ ನಂತರ ನನ್ನ ನಿಲುವನ್ನೇ ಬದಲಿಸಿಕೊಂಡೆ" ಎಂಬ ಮಾತಿನೊಂದಿಗೆ ಮಧು ಅವರು ಸಂವಾದಕ್ಕೆ ಚಾಲನೆ ನೀಡಿದರು.

ಅಧ್ಯಯನ ನಡೆಸಿದ ಹಿನ್ನೆಲೆ
ಅಮೆರಿಕಾ ಸಂದರ್ಶಿಸಲು ಮೋದಿಗೆ ವೀಸಾ ನೀಡಬಾರದು ಎಂದು ಮುಸ್ಲಿಂರನ್ನು ಅಷ್ಟೊಂದಾಗಿ ಪ್ರಶಂಸೆ ಮಾಡದ ಅಮೆರಿಕಾದ ಅಂದಿನ ಅಧ್ಯಕ್ಷ ಜಾರ್ಜ್ ಬುಶ್ ಅವರಿಗೆ ಹಲವಾರು ಜನರು ಮನವಿ ಮಾಡಿಕೊಂಡ ಮೇಲೆ, ಮೋದಿ ಅವರ ಕುರಿತು ಗಂಭೀರವಾಗಿ ಅಧ್ಯಯನ ನಡೆಸಲು ಮತ್ತು ಎಲ್ಲ ವಿವಾದಗಳ ಹಿಂದಿನ ಸತ್ಯ ಕಂಡುಕೊಳ್ಳಲು ಮಧು ಕಿಶ್ವರ್ ನಿರ್ಧರಿಸಿದರು.

ಮೋದಿ ಒಬ್ಬರೇ ಗುರಿ ಏಕೆ?
ಇತರ ರಾಜ್ಯಗಳಲ್ಲಿ ಕೋಮುಗಲಭೆ ನಡೆದಿದ್ದಾಗ ಆಯಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಯಾರೂ ಟೀಕಿಸದೆ, ನರೇಂದ್ರ ಮೋದಿ ಅವರನ್ನು ಮಾತ್ರ ಏಕೆ ಎಲ್ಲರೂ ಗುರಿ ಮಾಡುತ್ತಿದ್ದಾರೆ ಎಂದು ಸ್ವತಃ ಮುಸ್ಲಿಂ ಆಗಿರುವ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರು ಪ್ರಶ್ನಿಸಿದ್ದನ್ನು ಮಧು ಅವರು ಉದಾಹರಣೆಯಾಗಿ ನೀಡಿದರು.

ಮೋದಿ ಅಭಿವೃದ್ಧಿ ಕಾಣುತ್ತಿಲ್ಲವೇಕೆ?
ಎಸ್ಐಟಿ ಮತ್ತು ನಾನಾವತಿ ಕಮಿಷನ್ ವರದಿಯನ್ನು ತಳ್ಳಿಹಾಕಿದಾಗ, ಮಧು ಕಿಶ್ವರ್ ಅವರು ತಾವೇ ಸ್ವತಃ ಗುಜರಾತ್‌ಗೆ ಭೇಟಿ ನೀಡಿ ಸತ್ಯ ತಿಳಿಯಲು ನಿರ್ಧರಿಸಿದ್ದನ್ನು ಹೇಳಿದ ಮಧು, ಗುಜರಾತ್ ನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳತ್ತ ಯಾಕೆ ಯಾರೂ ನೋಡುತ್ತಿಲ್ಲ, ಮೋದಿ ಅವರ ಅಭಿವೃದ್ಧಿ ಮಾಡೆಲ್ ಯಾಕೆ ಪರಿಗಣಿಸುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಮೊದಲ ದಿನದಿಂದ ಮೋದಿ ವಿರುದ್ಧ ಮಾಧ್ಯಮ
2002ರಲ್ಲಿ ಗಲಭೆ ನಡೆದ ಸಂದರ್ಭದಲ್ಲಿ ಮೋದಿ ಅವರು ನೆರೆಯ ರಾಜ್ಯಗಳಿಗೆ, ಕೋಮುಗಲಭೆ ಹತ್ತಿಕ್ಕಲು ಸಹಾಯ ನೀಡಬೇಕೆಂದು ಮನವಿ ಮಾಡಿ ಪತ್ರ ಬರೆದ್ದದ್ದನ್ನು ಸ್ಲೈಡ್ ಶೋನಲ್ಲಿ ತೋರಿಸಿದರು. ಅದನ್ನು ಎಲ್ಲ ರಾಜ್ಯಗಳು ತಿರಸ್ಕರಿಸಿದವು. ಮಾಧ್ಯಮ ಕೂಡ ಮೊದಲ ದಿನದಿಂದ ಮೋದಿ ಅವರನ್ನು ಹತ್ತಿಕ್ಕಲು ಷಡ್ಯಂತ್ರ ನಡೆಸಿದೆ. ಇಂಥ ಮಾಧ್ಯಮವನ್ನು ಕಾಂಗ್ರೆಸ್ ತನ್ನ ಕೈವಶ ಮಾಡಿಕೊಂಡಿದೆ ಎಂದು ಮಧು ಅಭಿಮತ ವ್ಯಕ್ತಪಡಿಸಿದರು.

ಗುಜರಾತ್ ನಲ್ಲಿ ಮುಸ್ಲಿಂ ಸುಭಿಕ್ಷ
ಮೋದಿ ವಿರುದ್ಧ ಮುಸ್ಲಿಂರನ್ನು ಹಿಡಿದೆತ್ತುತ್ತಿರುವ ಕಾಂಗ್ರೆಸ್ ಬಗ್ಗೆ ಕಿಡಿಕಾರಿದ ಅವರು, ಗುಜರಾತ್ ನಲ್ಲಿ ಮೋದಿ ಆಡಳಿತ ಬಂದ ನಂತರ ಮುಸ್ಲಿಂ ಸಮುದಾಯ ಸಾಕಷ್ಟು ಅಭಿವೃದ್ಧಿ ಕಂಡಿದೆ. ಇದರಿಂದ ಅವರಿಗೆ ಕೆಡುಕೇನು ಆಗಿಲ್ಲ. ಮೋದಿ ಮುಸ್ಲಿಂರನ್ನು ತುಳಿಯುತ್ತಿದ್ದಾರೆ ಎಂದು ವಾದಿಸುವವರು ಸ್ವತಃ ಗುಜರಾತ್ ಗೆ ಆಗಮಿಸಿ ಮುಸ್ಲಿಂರನ್ನು ಖುದ್ದಾಗಿ ಕಂಡು ಅವರ ಅಭಿಪ್ರಾಯ ತಿಳಿದುಕೊಳ್ಳಬೇಕು ಎಂದು ಚಾಲೇಂಜ್ ಮಾಡಿದರು.

ಕಿಕ್ಕಿರಿದು ತುಂಬಿದ ಸಭಾಂಗಣ
ಒಟ್ಟಿನಲ್ಲಿ ಸಂವಾದಲ್ಲಿ ಮೋದಿ ಆಡಳಿತ ಮತ್ತು ಅವರ ಕಾರ್ಯವಿಧಾನದ ಬಗ್ಗೆ ಮಧು ಕಿಶ್ವರ್ ಅವರು ಸಾಕಷ್ಟು ಮಾಹಿತಿಗಳನ್ನು ಒದಗಿಸಿದರು. ಕುಳಿತುಕೊಳ್ಳಲು ಜಾಗವಿಲ್ಲದೆ ಹಲವಾರು ಜನರು ನೆಲದ ಮೇಲೆ ಕುಳಿತು ಮತ್ತು ಸಿಕ್ಕಲ್ಲಿ ನಿಂತು ಮೂರು ಕಾಲು ಗಂಟೆಗಳ ಕಾಲ ನಡೆದ ಈ ಸಂವಾದವನ್ನು ಆಲಿಸಿದರು.

ಮಧು ಜೊತೆ ಪ್ರಶ್ನೋತ್ತರ ಸಮಯ
ಮಧು ಅವರ ಮಾತು ಮುಗಿದ ನಂತರ ಪ್ರಶ್ನೆಗಳ ಮಳೆ ಸುರಿಸಲು ಸಭಿಕರು ಕಾದಿದ್ದರು. ಎಲ್ಲ ಪ್ರಶ್ನೆಗಳಿಗೆ ಮಧು ಅವರು ಹಸನ್ಮುಖಿಯಾಗಿಯೇ ಉತ್ತರಿಸಿದರು. ಒನ್ಇಂಡಿಯಾ ಪ್ರಶ್ನೆ ಹೀಗಿತ್ತು, "ಗುಜರಾತ್ ನಲ್ಲಿ ಮೋದಿ ಮತ್ತು ಮುಸ್ಲಿಂ ನಡುವಿನ 'ಮದುವೆ' ಮತ್ತು ದಾಂಪತ್ಯ ಸಂಸತದಿಂದ ಸಾಗಿದೆ. ಆದರೆ, ಮೋದಿ ಮತ್ತು ಗುಜರಾತ್ ಹೊರಗಿನ ಮುಸ್ಲಿಂ ಜೊತೆಗಿನ ಬಾಂಧವ್ಯ ಸುಗಮವಾಗಿ ಸಾಗುವುದು ಎಂದು?"

ಮೋದಿ ಕಾಲೆಳೆದರೆ ಬಿಜೆಪಿ ಕಥೆ ಗೋವಿಂದ
ಇದಕ್ಕೆ, "ಇದು ಬಿಜೆಪಿಗೆ ಬಿಟ್ಟ ವಿಚಾರ. ಮೋದಿಯ ಪರಿಕಲ್ಪನೆಗಳೊಂದಿಗೆ ಬಿಜೆಪಿ ಯಾವ ರೀತಿ ಹೊಂದಿಕೊಳ್ಳುತ್ತದೆ ಮತ್ತು 2014ರ ಲೋಕಸಭೆ ಚುನಾವಣೆಯಲ್ಲಿ ಎಂಥ ಅಭ್ಯರ್ಥಿಗಳನ್ನು ಆರಿಸುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ. ಬಿಜೆಪಿ ಮೋದಿ ಕಾಲು ಎಳೆಯಲು ಯತ್ನಿಸಿದರೆ, ಅನಗತ್ಯ ಸಂಘರ್ಷಕ್ಕೆ ಇಳಿದರೆ ಏನು ಬೇಕಾದರೂ ಆಗಬಹುದು. ಊಹಿಸುವುದು ಅಸಾಧ್ಯ" ಎಂದು ಅವರು ಉತ್ತರಿಸಿದರು.

ಪಕ್ಷದ ಹಿತಾಸಕ್ತಿಯ ವಿರುದ್ಧ ನಡೆದುಕೊಂಡರೆ...
"ಮೋದಿ ಅವರೊಂದಿಗೆ ಹೆಜ್ಜೆ ಹಾಕದೆ, ಪಕ್ಷದ ಹಿತಾಸಕ್ತಿಯ ವಿರುದ್ಧವೇ ಕೆಲ ನಾಯಕರು ನಡೆದುಕೊಂಡರೆ, ಯುಪಿಎ III ಸರಕಾರವನ್ನು ಸ್ವಾಗತಿಸಲು ಭಾರತದ ಜನತೆ ಸಿದ್ಧರಾಗಿರಬೇಕಾಗುತ್ತದೆ" ಎಂಬ ಮಧು ಕಿಶ್ವರ್ ಅವರ ಎಚ್ಚರಿಕೆಯ ಮಾತಿಗೆ ಕಿಕ್ಕಿರಿದು ತುಂಬಿದ್ದ ಸಭಿಕರಿಂದ ಕಿವಿಗಡಚಿಕ್ಕುವ ಚಪ್ಪಾಳೆಗಳ ಸುರಿಮಳೆ. ಅಲ್ಲಿಗೆ ಸಂವಾದವೂ ಮುಗಿದಿತ್ತು.
ಈ ಕಾರ್ಯಕ್ರಮಕ್ಕೆ ಕರ್ನಾಟಕದ ವಿಧಾನಪರಿಷತ್ ಸದಸ್ಯರಾದ ಡಾ. ಪಿ.ವಿ. ಕೃಷ್ಣ ಭಟ್ (ಅಧ್ಯಕ್ಷ, ಶಿಕ್ಷಣ ಮತ್ತು ಅಧ್ಯಯನ ಕೇಂದ್ರ, ಬೆಂಗಳೂರು), ಮಧು ಕಿಶ್ವರ್ ಅವರು ಬರೆದಿರುವ 'ಮೋದಿನಾಮಾ' ಪುಸ್ತಕವನ್ನು ಕನ್ನಡಕ್ಕೆ ಭಾಷಾಂತರಿಸಿರುವ ಮೈಸೂರಿನ ವಿಧಾನಪರಿಷತ್ ಸದಸ್ಯ ಗೋ. ಮಧುಸೂಧನ್, ಬಿಜೆಪಿ ವಕ್ತಾರ ಮತ್ತು ವಿಧಾನಪರಿಷತ್ ಸದಸ್ಯ ಅಶ್ವತ್ಥ ನಾರಾಯಣ ಮತ್ತು ಜಯನಗರದ ಶಾಸಕ ಬಿ.ಎನ್. ವಿಜಯ ಕುಮಾರ್ ಅವರು ಆಗಮಿಸಿದ್ದರು.
ಟ್ವಿಟ್ಟರಲ್ಲಿ ಮಧು ಪೂರ್ಣಿಮಾ ಕಿಶ್ವರ್
ಜಿಜ್ಞಾಸಾ - ಲೈವ್ ಬ್ಲಾಗ್












Click it and Unblock the Notifications