ದೇವೇಗೌಡ ಕಿಡಿಕಿಡಿ: ಕುಮಾರಸ್ವಾಮಿ ತಲೆದಂಡ ಖಚಿತ
ಬೆಂಗಳೂರು. ಆಗಸ್ಟ್ 26: ಸುಮ್ಮನೆ ಇರಲಾರದೆ ಇರುವೆ ಬಿಟ್ಟುಕೊಂಡಂತಾಗಿದೆ ಜೆಡಿಎಸ್ ಪರಿಸ್ಥಿತಿ. ಮಾಜಿ ಪ್ರಧಾನಿ ದೇವೇಗೌಡರ ಅಷ್ಟೂ ಲೆಕ್ಕಾಚಾರಗಳು 'ಕೈ'ಕೊಟ್ಟಿವೆ. rather ಶಿಷ್ಯ, ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಡಮೇಲು ಮಾಡಿದ್ದಾರೆ. ಇದಕ್ಕೆ ಮಂಡ್ಯ, ಬೆಂಗಳೂರು ಗ್ರಾಮಾಂತರದ ಮತದಾರರೂ 'ಕೈ'ಜೋಡಿಸಿದ್ದಾರೆ.
ಆದರೆ, ರಾಜಕೀಯ ಜೀವನದ ಕೊನೆಯ ಚರಣದಲ್ಲಿರುವ ಗೌಡರಿಗೆ ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಗೌಡರ ಇದುವರೆಗಿನ ರಾಜಕೀಯ ಜೀವನ ಒಂದು ತೂಕದ್ದಾದರೆ ಇನ್ನು ಮುಂದಿನದ್ದು ಬೇರೆಯೇ ರೀತಿಯದ್ದಾಗಿದೆ. ಹಾಗಾಗಿ ಹೀನಾಯ ಸೋಲಿನಿಂದ ಕಂಗೆಟ್ಟು ತಲೆಯ ಮೇಲೆ ಕೈಹೊತ್ತು ಪಕ್ಷದ ಪುನರ್ ಸಂಘಟನೆಯ ಸಂಪೂರ್ಣ ಜವಾಬ್ದಾರಿಯನ್ನೂ ತೆನೆಯ ಭಾರದೊಂದಿಗೆ ತಾವೇ ಹೊರಲು ಗೌಡರು ನಿರ್ಧರಿಸಿದ್ದಾರೆ.

ಮನೆಯಿಂದಲೇ ಕಾರ್ಯಾರಂಭ
ಮೊದಲು ಮನೆಯಿಂದಲೇ ಪಕ್ಷವನ್ನು ಸ್ವಚ್ಛಗೊಳಿಸುವ/ ಪುನರ್ ಸಂಘಟಿಸುವ ಕಾರ್ಯಕ್ಕೆ ಕೈಹಾಕಿದಂತಿದೆ. ಇದಕ್ಕೆ ಮೊದಲ ತಲೆದಂಡ ಎಂಬಂತೆ ಕುಮಾರಸ್ವಾಮಿ ಅವರಿಂದ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನವನ್ನು ಕಿತ್ತುಕೊಳ್ಳುವುದು. ಇದಕ್ಕೆ ಅತಿ ಮುಖ್ಯವಾಗಿ 2 ಕಾರಣಗಳಿರಬಹುದು.

ಅತ್ತ ಸಿದ್ದು ಇತ್ತ ಡಿಕೆಶಿ ಜೋಡಿ
ಒಂದು ಎದುರಾಳಿಗಳು ಪಾರಮ್ಯ ಮೆರೆದಿರುವುದು. ಅತ್ತ ಸಿದ್ದರಾಮಯ್ಯ ಇತ್ತ ಡಿಕೆ ಶಿವಕುಮಾರ್ ಅವರ ಜೋಡಿ ಜೆಡಿಎಸ್ ಗೆ ಸಮ ಹೊಡೆತ ನೀಡಿದ್ದಾರೆ. ಇವರೆದುರು ಪಕ್ಷವನ್ನು ಮತ್ತೆ ತಲೆಯೆತ್ತಿ ನಿಂತುಕೊಳ್ಳುವಂತೆ ಮಾಡುವ ಮಹತ್ತರ ಜವಾಬ್ದಾರಿ ಈಗ ಗೌಡರ ಮೇಲಿದೆ.

ಕುಮಾರಸ್ವಾಮಿಯ ಬಿಜೆಪಿ ಸಾಂಗತ್ಯ
ಮತ್ತೊಂದು ಕಾರಣ ಎಚ್ಡಿಕೆ ಮತ್ತು ನಿರ್ಲಜ್ಜ ಬಿಜೆಪಿ ಜತೆಗಿನ ಅವರ ಸಾಂಗತ್ಯ. ಜಾತ್ಯಾತೀತ ಎಂದೇ ಹೇಳಿಕೊಳ್ಳುತ್ತಾ ಅವಕಾಶ ಸಿಕ್ಕಿದಾಗಲೆಲ್ಲಾ ಕೋಮುವಾದಿ ಬಿಜೆಪಿ ಜತೆ ಕೈಜೋಡಿಸುತ್ತಾ ಸೋಲುಂಡು, ಪಕ್ಷದ ಸಿದ್ಧಾಂತಕ್ಕೆ ಎಳ್ಳುನೀರು ಬಿಡುತ್ತಿರುವ ಕುಮಾರ ಕಂಠೀರವನನ್ನು ಈ ಬಾರಿ ಕೈಬಾಯಿ ಕಟ್ಟಿ ಒಂದು ಕಡೆ ಕೂಡಿಹಾಕಲು ದೇವೇಗೌಡರು ಶನಿವಾರವೇ ನಿರ್ಧರಿಸಿದಂತಿದೆ. ಕಾಂಗ್ರೆಸ್ ಎದುರು ಮತ್ತೆ ತಲೆಯೆತ್ತಿ ನಿಲ್ಲಬೇಕೆಂದರೆ ಅವರಿಗೆ ಇದು ಅನಿವಾರ್ಯವೂ ಹೌದು.

ನಾನು ಹೊಡೆದಂತೆ ಮಾಡುವೆ ನೀನು...
ಇಷ್ಟಾಗಿಯೂ ಪಕ್ಷದ ಮೇಲೆ ತಮ್ಮ ಕುಟುಂಬ ಹೊಂದಿರುವ ಕಪಿಮುಷ್ಠಿಯನ್ನು ಸಡಿಲಿಸಲು ಗೌಡರು ಸುತರಾಂ ಸಿದ್ಧರಿಲ್ಲ. 'ನಾನು ಹೊಡೆದಂತೆ ಮಾಡುವೆ ನೀನು ಅಳುವಂತೆ ನಟಿಸು' ಎಂಬ ಲೆಕ್ಕಾಚಾರದಲ್ಲಿದ್ದಾರೆ. ಹಾಗಾಗಿ, ವಿಧಾನಸಭೆಯ ಪ್ರತಿಪಕ್ಷದ ನಾಯಕನಾಗಿ ಕುಮಾರಸ್ವಾಮಿ ಸಿದ್ದು ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸಲಿ. ಇತ್ತ, ಪಕ್ಷದ ಸಂಘಟನೆಗಾಗಿ ಈ ಇಳಿವಯಸ್ಸಿನಲ್ಲಿ ತಾನೇ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜವಾಬ್ದಾರಿ ಹೊರುತ್ತೇನೆ ಎಂದು ಗೌಡರು ತಮ್ಮ ಆಪ್ತರ ಬಳಿ ಹೇಳಿದ್ದಾರೆ ಎನ್ನಲಾಗಿದೆ.

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ದಲಿತ ನಾಯಕ?
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥ ನಾಯಕನ ಹುಡುಕಾಟದಲ್ಲಿ ತೊಡಗಿರುವ ಗೌಡರು ತಮ್ಮದೇ ಒಕ್ಕಲಿಗ ಸಮುದಾಯದ ಬದಲು ಬೇರೊಂದು ಸಮುದಾಯಕ್ಕೆ ಸೇರಿದ ನಾಯಕನಿಗೆ ಮಣೆ ಹಾಕುತ್ತಾರಾ? ಸಿಎಂ ಸಿದ್ದು ಮುಖ್ಯಮಂತ್ರಿಯಾದಾಗ ದಲಿತ ನಾಯಕರಿಗೆ (ಖರ್ಗೆ) ಮುಖ್ಯಮಂತ್ರಿಪಟ್ಟ ಕಟ್ಟಬೇಕಿತ್ತು ಎಂದು ಎತ್ತಿಕಟ್ಟಿದ್ದ ಅಪ್ಪ-ಮಗ ಈಗ ತಮ್ಮ ಪಕ್ಷದ ರಾಜ್ಯಾಧ್ಯಕ್ಷ ಪಟ್ಟಕ್ಕೆ ದಲಿತರೊಬ್ಬರನ್ನು ತಂದುಕೂಡಿಸುತ್ತಾರಾ ಎಂಬುದೇ ಸದ್ಯದ ಪ್ರಶ್ನೆ/ ಕುತೂಹಲ.

ಒಂಟಿ ಹುಲಿ
ಅತ್ತ ಶನಿವಾರ ಫಲಿತಾಂಶ ಹೊರಬೀಳುತ್ತಿದ್ದಂತೆ 'ಇನ್ನು ಕಾಂಗ್ರೆಸ್ಸಿನ ಅಶ್ವಮೇಧವನ್ನು ಹಾಸನದತ್ತ ಓಡಿಸುವುದಾಗಿ' ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರು ರಣಕಹಳೆ ಉದಿರುವುದು ಗೌಡರಲ್ಲಿ ಸಣ್ಣ ನಡುಕವುಂಟುಮಾಡಿರಲೂ ಸಾಕು. ಮೊದಲೇ ಅಧಿಕಾರ ಪ್ರಾಪ್ತಿಯಾಗದೆ ಹಸಿದ ಹೆಬ್ಬುಲಿಯಂತಾಗಿರುವ ಡಾ. ಪರಮೇಶಿ ಅವರಿಂದ ಇಂತಹ ಹೇಳಿಕೆ ಬಂದ ಮೇಲಂತೂ ಗೌಡರು ಸುಮ್ಮನೆ ಕುಳಿತುಕೊಳ್ಳುವ ಹಾಗಿಲ್ಲ. ಮಂಡ್ಯ ಮತ್ತು ರಾಮನಗರದ ಮೇಲಿನ ಅಧಿಪತ್ಯ 'ಕೈ'ಜಾರಿದ ಮೇಲೆ ಹಾಸನವನ್ನಾದದರೂ ಉಳಿಸಿಕೊಳ್ಳುವ ಜರೂರತ್ತು ಗೌಡರಿಗೆ.

ಮೊದಲ ಬಾರಿಗೆ ಕುಟುಂಬದ ಹೊರಗಿನವರು ರಾಜ್ಯಾಧ್ಯಕ್ಷ
'ರಾಜ್ಯಾಧ್ಯಕ್ಷನಾದ ಮೇಲೆ ಕುಮಾರಸ್ವಾಮಿ ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಿಲ್ಲ. ಒಬ್ಬರಿಗೆ ಒಂದೇ ಸ್ಥಾನ ಎಂಬ ತತ್ವ ಈಗ ಅರಿವಿಗೆ ಬಂದಿದ್ದು 'ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕುಮಾರ ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುತ್ತೇನೆ. ಆದರೆ ಆತನ ಪ್ರತಿಪಕ್ಷ ನಾಯಕನ ಸ್ಥಾನದ ಬಗ್ಗೆ ಪಕ್ಷದ 40 ಶಾಸಕರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದೇ ಅಂತಿಮ. ಒಂದು ವೇಳೆ ಬೇರೊಬ್ಬರು ಅಂದರೆ ಕುಟುಂಬದವರಲ್ಲದೆ ಬೇರೊಬ್ಬರು ರಾಜ್ಯಾಧ್ಯಕ್ಷರಾಗಲಿ ಎಂದು ಈ ಶಾಸಕರು ಬಯಸಿದರೆ ಅದಕ್ಕೆ ಅಸ್ತು ಅನ್ನಲು ಗೌಡರು ಸಿದ್ಧವಿರುವುದಾಗಿ ಗೌಡರ ಆಪ್ತ ಮೂಲಗಳು ಹೇಳಿವೆ.
ಒಂದು ವೇಳೆ ರಾಜಕೀಯ ಪಂಡಿತರ ಎಣಿಕೆಯಂತೆ ಕುಮಾರಸ್ವಾಮಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಯುವುದು ಮತ್ತು ಆ ಜಾಗದಲ್ಲಿ ದಲಿತ ನಾಯಕರೊಬ್ಬರನ್ನು ಪ್ರತಿಷ್ಠಾಪಿಸುವುದೇ ಆದರೆ ಅದು ಜೆಡಿಎಸ್ ಪಾಲಿಗೆ ನಿಜಕ್ಕೂ ಚರಿತ್ರಾರ್ಹ ದಿನವಾಗುತ್ತದೆ.

ಅರಿವುಗೇಡಿ ಬಿಜೆಪಿ ಜತೆಗಿನ ಮೈತ್ರಿ ಖತಂ?
ಲೋಕಸಭಾ ಚುನಾವಣೆಗಾಗಿ ಜಾತ್ಯಾತೀತ ಪಕ್ಷದ ನೇತೃತ್ವವನ್ನು ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರೇ ವಹಿಸಿಕೊಳ್ಳುವುದು ಈ ಘಳಿಗೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿರುವುದರಿಂದ ಜೆಡಿಎಸ್ ಜತೆಗಿನ ಮೈತ್ರಿಯಾಸೆಯನ್ನು ಕೈಬಿಡುವುದು ಬಿಜೆಪಿಗೆ ಅನಿವಾರ್ಯವಾಗಲಿದೆ. ಏಕೆಂದರೆ ಪಕ್ಷದಿಂದ ವಿಮುಖರಾಗುತ್ತಿರುವ ಅಲ್ಪಸಂಖ್ಯಾತ ಮತದಾರರರನ್ನು ಮತ್ತೆ ಓಲೈಸುವುದು ದೊಡ್ಡಗೌಡರಿಗೆ ಈ ಕ್ಷಣದ ತುರ್ತು ಅಗತ್ಯವಾಗಿದೆ.

ಮುಳುವಾದ 'ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್'
ಕೆಜೆಪಿ/ಬಿಜೆಪಿ ಜತೆ ಕೈಜೋಡಿಸಿ ನಗೆಪಾಟಲಿಗೀಡಾಗುತ್ತಿದ್ದಂತೆ ಅನೇಕ ಹಿರಿಯ ನಾಯಕರು ಚುನಾವಣೆ ನಡೆಯುತ್ತಿರುವಾಗ ಪಕ್ಷವನ್ನು ತೊರೆದಿದ್ದೂ ಜೆಡಿಎಸ್ ಗೆ ನುಂಗಲಾರದ ತುತ್ತಾಯ್ತು. ಬಿಜೆಪಿ ಜತೆಗಿನ 'ಅಡ್ಜಸ್ಟ್ ಮೆಂಟ್ ಪಾಲಿಟಿಕ್ಸ್'ಗೆ ಶರಣಾದ್ದರಿಂದ ಮುಜುಗುರಕ್ಕೀಡಾದ ಸಿ ನಾರಾಯಣಸ್ವಾಮಿ, ಕೆಆರ್ ಪೇಟೆ ಕೃಷ್ಣ ಮುಂತಾದವರು 'ಜಾತ್ಯಾತೀತ' ಜನತಾ ದಳವನ್ನು ತೊರೆದಿದ್ದರು.
ಜತೆಗೆ ಕಲ್ಪನಾ ಸಿದ್ದರಾಜು, ಎಂ ಶ್ರೀನಿವಾಸ್ ಅವರು 'ಕೈ'ಹಿಡಿದಿದ್ದು, ಅಲ್ಪಸಂಖ್ಯಾತರು ಹೆಚ್ಚಾಗಿರುವ ಮಂಡ್ಯ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಶಾಸಕ ಜಮೀರ್ ಕಾಣಿಸಿಕೊಳ್ಳದೇ ಹೋಗಿದ್ದು ತಪ್ಪು ಸಂದೇಶ ರವಾನೆಯಾಗಿದೆ. ಅದೇ ವೇಳೆ ಜೆಡಿಎಸ್ಸಿನ 23 ಶಾಸಕರು ಆಪರೇಶನ್ ಹಸ್ತಕ್ಕೆ ತುತ್ತಾಗಲಿದ್ದಾರೆ ಎಂಬ ಸುದ್ದಿಯನ್ನು ಡಿಕೆಶಿ ಚುನಾವಣೆ ಸಂದರ್ಭದಲ್ಲಿ ತೇಲಿಬಿಟ್ಟಿದ್ದು ಜೆಡಿಎಸ್ಸಿಗೆ ಮುಳುವಾಗಿರಲಿಕ್ಕೂ ಸಾಕು.












Click it and Unblock the Notifications