ಮೋದಿ ಬೆಂಬಲಿಸಿದರೆ ಬಿಜೆಪಿ-ಜೆಡಿಎಸ್ ದೋಸ್ತಿ?
ಹುಬ್ಬಳ್ಳಿ, ಆ.23 : ಲೋಕಸಭೆ ಉಪ ಚುಣಾವಣೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ದೋಸ್ತಿ ಮಾಡಿಕೊಳ್ಳಲು ನಿರ್ಧರಿಸಿವೆ. ಆದರೆ, ಜೆಡಿಎಸ್ ನರೇಂದ್ರ ಮೋದಿ ಪ್ರಧಾನಿ ಎಂದು ಒಪ್ಪಬೇಕು.
ಗುರುವಾರ ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಮತದಾನ ಮಾಡಿದ ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿಯೂ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಸುಳಿವು ನೀಡಿದರು.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಬೆಂಬಲಿಸುವುದಿಲ್ಲ ಎಂಬುದು ಜೆಡಿಎಸ್ ನಿಲುವಾದರೆ ನಮ್ಮ ಮತ್ತು ಜೆಡಿಎಸ್ ನಡುವೆ ಮೈತ್ರಿ ಸಾಧ್ಯವಿಲ್ಲ. ಲೋಕಸಭೆ ಮತ್ತು ಪರಿಷತ್ ಉಪ ಚುನಾವಣೆಯಲ್ಲಿಯೇ ನಮ್ಮ ಮೈತ್ರಿ ಕೊನೆಯಾಗಲಿದೆ ಎಂದರು.
ಎರಡು ಲೋಕಸಭೆ ಹಾಗೂ ಮೂರು ಕ್ಷೇತ್ರಗಳ ವಿಧಾನ ಪರಿಷತ್ ಉಪ ಚುನಾವಣೆಗೆ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾತುಕತೆ ಆಗಿತ್ತು ಎಂದು ಜೋಶಿ ಸ್ಪಷ್ಟಪಡಿಸಿದರು. ಮುಂದಿನ ಲೋಕಸಭೆಯಲ್ಲಿ ಬಿಜೆಪಿ ಸ್ವತಂತ್ರವಾಗಿಯೇ ಸ್ಪರ್ಧಿಸಲಿದೆ ಎಂದು ಹೇಳಿದರು.
ಜೆಡಿಎಸ್ ನಿಂದ ಪ್ರಸ್ತಾಪ : ಉಪ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಂದಲೇ ಮೊದಲ ಪ್ರಸ್ತಾಪ ಬಂದಿತ್ತು. ಇದರಿಂದ ಹೊಂದಾಣಿಕೆ ಮಾಡಿಕೊಳ್ಳಲಾಯಿತು ಎಂದರು.
ಕಾಂಗ್ರೆಸ್ಸೇತರ ಪಕ್ಷಗಳು ಒಟ್ಟಾಗೋಣ ಎಂದು ಹೊಂದಾಣಿಕೆ ಪ್ರಸ್ತಾಪವಿಟ್ಟಿದ್ದರು. ಆದ್ದರಿಂದ ಬಿಜೆಪಿ ಎರಡು ಲೋಕಸಭಾ ಸ್ಥಾನಗಳ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ. ಮೂರು ವಿಧಾನ ಪರಿಷತ್ ಉಪ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಹಾಕಲಿಲ್ಲ ಎಂದು ತಿಳಿಸಿದರು.
ಮುಂದಿನ ಲೋಕಸಭಾ ಚುನಾವಣೆ ಹೊಂದಾಣಿಕೆ ಬಗ್ಗೆ ಕಾಲ ಬಂದಾಗ ಚರ್ಚೆ ನಡೆಸಲಾಗುವುದು. ಒಂದು ವೇಳೆ ಮೋದಿ ನಾಯಕತ್ವವನ್ನು ಜೆಡಿಎಸ್ ಒಪ್ಪುವುದಿಲ್ಲ ಎಂದರೆ, ಅವರೊಂದಿಗೆ ಹೊಂದಾಣಿಕೆ ಬಿಜೆಪಿಗೆ ಬೇಡವಾಗಿದೆ ಎಂದು ಹೇಳಿದರು.












Click it and Unblock the Notifications