ಶ್ರೀ ಕಾಳಹಸ್ತಿ ದೇವಾಲಯದ ಕಲಶ ಕುಸಿತ

ಪುರಾತನವಾದ ಕಾಳಹಸ್ತಿ ದೇವಸ್ಥಾನದ ಪ್ರವೇಶದ್ವಾರದ ರಾಜಗೋಪುರದ ಮೇಲಿರುವ ಸುಮಾರು 10 ಕೆಜಿ ಕಲಶ ಗುರುವಾರ ರಾತ್ರಿ ಕುಸಿದು ಬಿದ್ದಿದೆ ಎಂದು ದೇವಾಲಯದ ಆಡಳಿತ ಮಂಡಳಿ ಹೇಳಿದೆ. ಅವಘಡ ನಡೆಯುವಾಗ ಭಕ್ತರು ಯಾರೂ ಸ್ಥಳದಲ್ಲಿ ಇರಲಿಲ್ಲ. ಆದ್ದರಿಂದ ಯಾರು ಗಾಯಗೊಂಡಿಲ್ಲ.
ಕಲಶ ಕುಸಿದು ಬಿದ್ದಿರುವುದು ಅಪಶಕುನ ಎಂದು ಭಕ್ತರು ಆತಂಕಗೊಂಡಿದ್ದಾರೆ. ಶುಕ್ರವಾರ ದೇವಾಲಯದಲ್ಲಿ ವಿಶೇಷ ಹೋಮ, ಹವನ, ಪೂಜೆ ನಡೆಸಲಾಗುತ್ತಿದ್ದು, ನೂರಾರು ಭಕ್ತರು ಪಾಲ್ಗೊಂಡಿದ್ದಾರೆ.
ಸುಮಾರು 500 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಗೋಪುರದ 30 ಅಡಿ ಮೇಲ್ಭಾಗದಲ್ಲಿ ಕಲಶವಿತ್ತು. ಗುರುವಾರ ಸಂಜೆ ಇದ್ದಕ್ಕಿದ್ದಂತೆ ಅದು ಕುಸಿದು ಬಿದ್ದು, ಐದು ಚೂರುಗಳಾಗಿವೆ. ಇದರಿಂದ ದೇವಾಲಯದ ಭಕ್ತರು ಆತಂಕ ಗೊಂಡಿದ್ದಾರೆ.
ಕಲಶ ಬಿದ್ದ ತಕ್ಷಣ ದೇವಾಲಯದ ಸುತ್ತಮುತ್ತಲಿನ ಅಂಗಡಿಗಳನ್ನು ಮುಚ್ಚಿದ ವ್ಯಾಪಾರಿಗಳು ದೇವಾಲಯಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದರು. ದೇವಾಲಯದ ಆಡಳಿತ ಮಂಡಳಿ ಭಕ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಕಳಶ ಇದ್ದಕ್ಕಿದ್ದಂತೆ ಉರುಳಿ ಬೀಳಲು ಕಾರಣವೇನು ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ವಿಜಯನಗರದ ಅರಸರು ನಿರ್ಮಿಸಿದ್ದ ಈ ದೇವಸ್ಥಾನ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ತಿರುಪತಿಯಿಂದ 36 ಕಿ.ಮೀ.ದೂರದಲ್ಲಿದ್ದು, ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.












Click it and Unblock the Notifications