ಪರಿಷತ್ ಉಪ ಚುನಾವಣೆ, ಮತದಾನ ಪ್ರಾರಂಭ

ಧಾರವಾಡ, ಚಿತ್ರದುರ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಗುರುವಾರ ಬೆಳಗ್ಗೆ 8 ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು, ಸಂಜೆ 4 ಗಂಟೆಯವರಗೆ ಮತದಾನ ಮಾಡಲು ಅವಕಾಶವಿದೆ.
ಕಾಂಗ್ರೆಸ್ ಮತ್ತು ಇತರೆ ಪಕ್ಷಗಳ ನಡುವೆ ವಿಧಾನ ಪರಿಷತ್ ಚುನಾವಣೆಯಲ್ಲಿ ನೇರ ಹಣಾಹಣಿ ಏರ್ಪಟ್ಟಿದೆ. ಆದರೆ, ಲೋಕಸಭೆ ಉಪ ಚುನಾವಣೆ ಮುಂದೆ ಪರಿಷತ್ ಚುನಾವಣಾ ಪ್ರಚಾರ ಮಂಕಾಗಿತ್ತು. ಬಿಜೆಪಿ ಮತ್ತು ಕೆಜೆಪಿ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿವೆ.
ಪ್ರಮುಖ ಪ್ರತಿಪಕ್ಷ ಜೆಡಿಎಸ್ ವಿಧಾನ ಪರಿಷತ್ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಬಿಜೆಪಿಗೆ ಬೆಂಬಲ ನೀಡಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್ ಸೋಲಿಸಲು ಬಿಜೆಪಿ, ಜೆಡಿಎಸ್ ಮತ್ತು ಕೆಜೆಪಿ ಚುನಾವಣೆಯಲ್ಲಿ ಒಂದಾಗಿವೆ.
ತೆರವಾಗಿರುವ ಮೂರು ಕ್ಷೇತ್ರಗಳು ಬಿಜೆಪಿ ಪಕ್ಷಕ್ಕೆ ಸೇರಿದವು. ಆದ್ದರಿಂದ ಚುನಾವಣೆ ಗೆಲ್ಲುವುದು ಬಿಜೆಪಿ ಪಾಲಿಗೆ ಪ್ರತಿಷ್ಠೆಯಾಗಿದೆ. ಧಾರವಾಡ, ಚಿತ್ರದುರ್ಗ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಕೆಜೆಪಿ ಬೆಂಬಲ ನೀಡಿದೆ. ಮೈಸೂರಿನಲ್ಲಿ ಕೆಜೆಪಿ ಅಭ್ಯರ್ಥಿಗೆ ಬಿಜೆಪಿ ಬೆಂಬಲ ನೀಡಿದೆ.
ಮತದಾರರು ಯಾರು : ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಸಂಸತ್ ಸದಸ್ಯರು, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರು, ನಗರ ಸ್ಥಳೀಯ ಸಂಸ್ಥೆ ಸದಸ್ಯರು, ಜಿ.ಪಂ, ತಾ.ಪಂ, ಗ್ರಾ.ಪಂ ಸದಸ್ಯರು ಮತ ಚಲಾಯಿಸಲಿದ್ದಾರೆ.
ಅಭ್ಯರ್ಥಿಗಳ ವಿವರ : ಧಾರವಾಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್ ನ ನಾಗರಾಜ್ ಛಬ್ಬಿ ಅವರ ಎದುರಾಳಿ. ಕ್ಷೇತ್ರದಲ್ಲಿ ಒಟ್ಟು 7,345 ಮತದಾರರಿದ್ದಾರೆ. (ಕೆಜೆಪಿ ಜೊತೆ ಮೈತ್ರಿ ಮಾಡಿಕೊಂಡ ಶೆಟ್ಟರ್)
ಚಿತ್ರದುರ್ಗ ಕ್ಷೇತ್ರದಲ್ಲಿ ನವೀನ್ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್ ನಿಂದ ಎಂ.ಎ.ಸೇತೂರಾಮ್ ಸ್ಪರ್ಧಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಆಚಾರ್ ಕಣಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 5,098 ಮತದಾರರಿದ್ದಾರೆ.
ಮೈಸೂರು ಕ್ಷೇತ್ರದಲ್ಲಿ ಶೇಖರ್ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ನಿಂದ ಧರ್ಮಸೇನ ಮತ್ತು ಪಕ್ಷೇತರರಾಗಿ ಅಯೂಬ್ ಕಣದಲ್ಲಿದ್ದಾರೆ. ಕೇತ್ರದ ಒಟ್ಟು ಮತದಾರರು 7,010.
ಮೂರು ಕ್ಷೇತ್ರಗಳಲ್ಲಿ ಗುರುವಾರ ನಡೆಯುತ್ತಿರುವ ಚುನಾವಣೆಯ ಮತ ಎಣಿಕೆ ಆ.26ರ ಸೋಮವಾರ ನಡೆಯಲಿದೆ. ಯಾವ ಪಕ್ಷದ ಅಭ್ಯರ್ಥಿಗಳು ವಿಧಾನ ಪರಿಷತ್ ಪ್ರವೇಶಿಸುತ್ತಾರೆ ಎಂದು ಕಾದು ನೋಡಬೇಕು.












Click it and Unblock the Notifications