ಸ್ಫೋಟ : ವಿದ್ಯಾರ್ಥಿನಿಯರಿಗೆ ಸರ್ಕಾರಿ ಸೀಟು

ಏ.17ರಂದು ಮಲ್ಲೇಶ್ವರಂ ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್ ಸ್ಪೋಟದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ರಕ್ಷಿತಾ ಹಾಗೂ ಲೀಶಾ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲೇ ಸಿಇಟಿ ಪರೀಕ್ಷೆ ಬರೆಯಲು ಅವರಿಗೆ ಅವಕಾಶ ನೀಡಲಾಗಿತ್ತು.
ಆದರೆ, ಕಡಿಮೆ ಅಂಕಗಳಿ ಲಭಿಸಿದ ಕಾರಣ ವಿದ್ಯಾರ್ಥಿನಿ ರಕ್ಷಿತಾಗೆ ತಾನು ಇಷ್ಟಪಟ್ಟ ಕಾಲೇಜಿನಲ್ಲಿ ಇಂಜಿನಿಯರಿಂಗ್ ಸೀಟು ದೊರಕಿರಲಿಲ್ಲ. ಆದ್ದರಿಂದ ಸರ್ಕಾರಿ ಕೋಟಾದರಿ ಸೀಟು ಹಂಚಿಕೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದರು.
ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿದ ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ರಕ್ಷಿತಾಗೆ ಬೆಂಗಳೂರಿನ ಎಸ್‌ಕೆಎಸ್‌ಜೆಟಿಐ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸರ್ಕಾರಿ ಕೋಟಾದಲ್ಲಿ ಬಿಇ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಸೀಟು ಹಂಚಿಕೆ ಮಾಡಿದೆ.
ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ಇನ್ನೊಬ್ಬ ಗಾಯಾಳು ಲೀಶಾ ಮಲ್ಲೇಶ್ವರಂನ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನಲ್ಲೇ ಬಿಸಿಎ ವ್ಯಾಸಂಗ ಮಾಡುವ ಕನಸು ಕಂಡಿದ್ದರು. ಇದಕ್ಕೆ ಒಪ್ಪಿಗೆ ಸೂಚಿಸಿರುವ ಕಾಲೇಜು ಆಡಳಿತ ಮಂಡಳಿ, ಲೀಶಾಗೆ ಉಚಿತ ಪ್ರವೇಶ ನೀಡಿದೆ. (ಸ್ಫೋಟ: ವಿದ್ಯಾರ್ಥಿನಿಯರಿಗೆ ಆಸ್ಪತ್ರೆಯಲ್ಲೇ ಸಿಇಟಿ)
ಕಾಲೇಜಿನ ಕ್ರಮವನ್ನು ಉನ್ನತ ಶಿಕ್ಷಣ ಇಲಾಖೆ ಸಚಿವ ಆರ್.ವಿ.ದೇಶಪಾಂಡೆ ಸ್ವಾಗತಿಸಿದ್ದಾರೆ. ಇಬ್ಬರು ಗಾಯಾಳು ವಿದ್ಯಾರ್ಥಿನಿಯರಿಗೆ ತಲಾ 1 ಲಕ್ಷ ರೂ. ಪರಿಹಾರ ಮತ್ತು ಚಿಕಿತ್ಸಾ ವೆಚ್ಚ ಭರಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.












Click it and Unblock the Notifications