ಕರ್ನಾಟಕದ ತುಣುಕು ಸುದ್ದಿಗಳ ಇಣುಕು ನೋಟ
ತುಮಕೂರು, ಆ.22 : ತುಮಕೂರಿನ ಸುಭಾಷ್ ನಗರದ ಮನೆಯೊಂದಕ್ಕೆ ನುಗ್ಗಿರುವ ಕಳ್ಳರು 50 ಸಾವಿರ ರೂ.ಮೌಲ್ಯದ ಆಭರರಣ ದರೋಡೆ ಮಾಡಿ, ಮನೆಯಲ್ಲಿದ್ದ ಹೋಳಿಗೆ ತಿಂದು, ಪಾತ್ರೆ ತೊಳೆದಿಟ್ಟು ಹೋಗಿರುವ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಬುಧವಾರ ರಾತ್ರಿ ಕೋಳಿ ಅಂಗಡಿ ಮಾಲೀಕ ಮಂಜುನಾಥ್ ಅವರ, ಸುಭಾಷ್ ನಗರದ ಮನೆಗೆ ನುಗ್ಗಿದ ಕಳ್ಳರು, ವರ ಮಹಾಲಕ್ಷ್ಮೀ ಹಬ್ಬ ಮಾಡಿ ಬೀರುವಿನಲ್ಲಿಟ್ಟಿದ್ದ 50 ಸಾವಿರ ರೂ. ಆಭರಣ ಮತ್ತು 10 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಮಂಜುನಾಥ್ ಕುಟುಂಬದವರ ಜೊತೆ ಪ್ರವಾಸ ಹೋಗಿದ್ದರಿಂದ ಕಳ್ಳರು ರಾತ್ರಿ ಪೂರ್ತಿ ಮನೆಯಲ್ಲಿಯೇ ಕಾಲ ಕಳೆದಿದ್ದಾರೆ. ಮನೆಯ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಫ್ರಿಡ್ಜ್ ಬಾಗಿಲು ತೆಗೆದು ಅದರಲ್ಲಿದ್ದ ಹೋಳಿಗೆ ತಿಂದು, ಪಾತ್ರೆ ತೊಳೆದಿಟ್ಟು ಹೋಗಿದ್ದಾರೆ. ಅಕ್ಕ-ಪಕ್ಕದ ಮನೆಯವರು ಗುರುವಾರ ಬೆಳಗ್ಗೆ ಬಾಗಿಲು ತೆರಿದ್ದು ನೋಡಿ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂವರಿಂದ ನಾಲ್ವರಿದ್ದ ತಂಡ ಆಗಮಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಪ್ರವಾಸ ಹೋಗಿರುವ ಮಂಜುನಾಥ್ ಅವರು ವಾಪಸ್ ಆಗಿದ್ದು, ಸುಮಾರು 50 ಸಾವಿರ ರೂ.ಮೌಲ್ಯದ ಚಿನ್ನಾಭರಣ ಮತ್ತು 10 ಸಾವಿರ ರೂ. ಹಣ ಮನೆಯಲ್ಲಿತ್ತು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. (ಕರ್ನಾಟಕದ ಇತರ ಜಿಲ್ಲಾಸುದ್ದಿಗಳು)

ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ
ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ಬಿಜೆಪಿ, ಜೆಡಿಎಸ್ ಮತ್ತು ಕೆಜೆಪಿ ಪ್ಷಕಗಳು ಒಂದಾಗಿವೆ. ಕರ್ನಾಟಕದಲ್ಲಿ ಇನ್ನು ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲವಿಲ್ಲ ಎಂದು ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ಹೇಳಿದ್ದಾರೆ. ಮೈಸೂರಿನಲ್ಲಿ ಗುರುವಾರ ವಿಧಾನಪರಿಷತ್ ಚುನಾವಣೆಗೆ ಮತದಾನ ಮಾಡಿದ ನಂತರ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಶುಕ್ರವಾರ ಹರಿಪ್ರಸಾದ್ ಪ್ರಮಾಣ ವಚನ
ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಯಾಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಗುರುವಾರ ರಾಜ್ಯಸಭೆ ಚುನಾವಣಾಧಿಕಾರಿ ಓಂ ಪ್ರಕಾಶ್ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ. ಶುಕ್ರವಾರ ಅವರು ನವದೆಹಲಿಯಲ್ಲಿ ರಾಜ್ಯಸಭೆ ಸ್ಪೀಕರ್ ಮತ್ತು ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರಿಂದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಬೆಟ್ಟಿಂಗ್ ಭರಾಟೆ
ಲೋಕಸಭೆ ಉಪ ಚುನಾವಣೆ ಮುಗಿದ ಬಳಿಕ ಮಂಡ್ಯದಲ್ಲಿ ಬೆಟ್ಟಿಂಗ್ ಪ್ರಾರಂಭವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ನಟಿ ರಮ್ಯಾ ಸೋಲುತ್ತಾರೆ. ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಸಿ.ಎಸ್.ಪುಟ್ಟರಾಜು ಜಯಗಳಿಸುತ್ತಾರೆ ಎಂದು ಸಾವಿರಾರು ರೂ. ಬೆಟ್ಟಿಂಗ್ ಕಟ್ಟಲಾಗಿದೆ. ಆ.24ರ ಶನಿವಾರ ಲೋಕಸಭೆ ಉಪ ಚುನಾವಣೆಯ ಮತ ಎಣಿಕೆ ನಡೆಯಲಿದೆ.

ಜನರ ಕಷ್ಟ ಆಲಿಸಲು ಸಿಎಂ ರೆಡಿ
ಆ.27ರ ಮಂಗಳವಾದಿಂದ ನಿರಂತರವಾಗಿ ಪ್ರತಿ ಮಂಗಳವಾರ ಸಿಎಂ ಗೃಹ ಕಚೇರಿಯಲ್ಲಿ ಜನತಾದರ್ಶನ ನಡೆಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಪ್ರಕಟಣೆ ಹೊರಡಿಸಿದೆ. ಬಜೆಟ್ ಅಧಿವೇಶನ ಮತ್ತು ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಕೆಲವು ದಿನಗಳಿಂದ ಜನತಾ ದರ್ಶನ ಸ್ಥಗಿತಗೊಂಡಿತ್ತು.

ಭೀಕರ ಅಪಘಾತಕ್ಕೆ ಮೂವರು ಬಲಿ
ಕಾರು ಮತ್ತು ಸರ್ಕಾರಿ ಬಸ್ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಜೇವರ್ಗಿ ತಾಲೂಕಿನ ಹಿಪ್ಪರಗಿ ಕ್ರಾಸ್ ಬಳಿ ಗುರುವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆಲೋಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರು ಮಹಾರಾಷ್ಟ್ರ ಮೂಲದವರು ಎಂದು ತಿಳಿದುಬಂದಿದೆ.

ಎಲ್ಲರಿಗೂ ಮತದಾನ ಕಡ್ಡಾಯ ಮಾಡಿ
ಮತದಾನವನ್ನು ಎಲ್ಲರೂ ಕಡ್ಡಾಯವಾಗಿ ಮಾಡಬೇಕು ಎಂಬ ನೀತಿ ಜಾರಿಗೆ ತರಬೇಕು ಎಂದು ಮೈಸೂರು ಸಂಸದ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನಲ್ಲಿ ಗುರುವಾರ ವಿಧಾನಪರಿಷತ್ ಚುನಾವಣೆಗೆ ಮತದಾನ ಮಾಡದ ಅವರು, ಬುಧವಾರ ನಡೆದ ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಲೋಕಸಭೆ ಉಪ ಚುನಾವಣೆಯಲ್ಲಿ ಮತದಾನ ಕಡಿಮೆ ಆಗಿದೆ. ಎಲ್ಲಾ ಜನರು ಕಡ್ಡಾಯವಾಗಿ ಮತದಾನ ಮಾಡಬೇಕು ಎಂಬ ಕಾನೂನು ಜಾರಿಗೊಳಿಸಬೇಕು ಎಂದರು.

ಅನಿತಾ ಕುಮಾರಸ್ವಾಮಿ ಸೋಲುತ್ತಾರಂತೆ
ಲೋಕಸಭೆ ಉಪ ಚುನಾವಣೆಯಲ್ಲಿ ನೀರಸ ಮಾತದಾನವಾದರೂ ಬೆಟ್ಟಿಂಗ್ ವಿಚಾರದಲ್ಲಿ ಬೆಂಗಳೂರು ಗ್ರಾಮಾಂತರದ ಜನರು ಹಿಂದೆ ಬಿದ್ದಿಲ್ಲ. ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಸೋಲುತ್ತಾರೆ ಎಂದು ಭಾರೀ ಬೆಟ್ಟಿಂಗ್ ನಡೆಯುತ್ತಿದೆ. ಡಿ.ಕೆ.ಸುರೇಶ್ ಗೆಲುವು ಸಾಧಿಸುತ್ತಾರೆ ಎಂಬ ಜನರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ. ಶನಿವಾರ ಪ್ರಕಟವಾಗುವ ಚುಣಾವಣೆ ಫಲಿತಾಂಶದ ಮೇಲೆ ಎಲ್ಲಾರ ಕಣ್ಣು ನೆಟ್ಟಿದೆ.

ಚೀನಾಕ್ಕೆ ಹಾರಲಿರುವ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ ಸೆ.12ರಿಂದ ಮೂರು ದಿನಗಳ ಕಾಲ ಚೀನಾ ಪ್ರವಾಸ ಕೈಗೊಳ್ಳಲಿದ್ದಾರೆ ಮುಖ್ಯಮಂತ್ರಿಯಾದ ಬಳಿಕ ಸಿಎಂ ಮೊದಲ ಬಾರಿ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ. ವ್ಯಾಪಾರ ಒಪ್ಪಂದ, ಬಂಡವಾಳ ಹೂಡಿಕೆ ಕುರಿತು ಚೀನಾದೊಂದಿಗೆ ಸಿದ್ದರಾಮಯ್ಯ ಮಾತುಕತೆ ನಡೆಸಲಿದ್ದಾರೆ.












Click it and Unblock the Notifications