ಫೋನ್ ಕರೆ ನಂಬಿ 10 ಲಕ್ಷ ಕಳೆದುಕೊಂಡ ಮಹಿಳೆ!

ಶಿವಮೊಗ್ಗ ನಗರದ ಬೊಮ್ಮನಕಟ್ಟೆಯ ನಿವಾಸಿ ಹಸೀನಾ ಎಂಬುವವರು ವಂಚನೆಗೆ ಒಳಗಾದ ಮಹಿಳೆ. ಹಸೀನಾ ಅವರಿಗೆ ಕರೆ ಬರುತ್ತಿದ್ದ ಎಲ್ಲಾ ಮೊಬೈಲ್ ನಂಬರ್ ಗಳು ಸ್ವಿಚ್ ಆಫ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆ ಏನು : ಹಸೀನಾ ಅವರಿಗೆ ಮೊದಲು ನಿಮ್ಮ ಏರ್ ಟೆಲ್ ಮೊಬೈಲ್ ನಂಬರ್ ಗೆ ಐಪಿಲ್ ಕಾಂಟೆಸ್ಟ್ ಸ್ಪರ್ಧೆಯಲ್ಲಿ 25 ಲಕ್ಷ ಹಣ ಬಂದಿದೆ ಎಂಬ ಸಂದೇಶ ಎಂಟು ತಿಂಗಳ ಹಿಂದೆ ಬಂದಿತ್ತು. ಇದನ್ನು ನಂಬಿದ ಹಸೀನಾ ಆ ನಂಬರ್ ಗೆ ಕರೆ ಮಾಡಿದ್ದಾರೆ.
ಕರೆ ಮಾಡಿದ ಆಕಾಶ್ ವರ್ಮಾ ನಿಮಗೆ 25 ಲಕ್ಷ ಬಂದಿರುವುದು ಹೌದು. ನೀವು ನಿಮ್ಮ ವಿಳಾಸ ಮತ್ತು ಬ್ಯಾಂಕ್ ಅಕೌಂಟ್ ನಂಬರ್ ಕೊಡಿ ಎಂದು ಕೇಳಿದ್ದಾನೆ. ವರ್ಮಾ ಮಾತು ನಂಬಿದ ಹಸೀನಾ ಎಲ್ಲಾ ವಿವರಗಳನ್ನು ನೀಡಿದ್ದಾರೆ.
ನಂತರ ಕರೆ ಮಾಡಿ ನಿಮ್ಮ ಅಕೌಂಟ್ ಗೆ ಹಣ ವರ್ಗಾಯಿಸಲು 12,000 ರೂ. ಪಾವತಿ ಮಾಡಬೇಕು ಎಂದು ಹೇಳಿದ್ದಾನೆ. 25 ಲಕ್ಷ ಆಸೆಯಲ್ಲಿದ್ದ ಮಹಿಳೆ ಅವರು ನೀಡಿದ ನಂಬರ್ ಗೆ ಹಣ ಜಮಾ ಮಾಡಿದ್ದಾರೆ.
ನಿಮ್ಮ ಅಕೌಂಟ್ ಶಿವಮೊಗ್ಗದಲ್ಲಿದೆ ಅದು ಜಿಲ್ಲಾ ಕೇಂದ್ರವಾದ್ದರಿಂದ 24, 000 ಹಣ ನೀಡಿ ಎಂದು ಕೇಳಿದ್ದಾನೆ. ಆದರೂ, ಅನುಮಾನ ಬಾರದ ಹಸೀನಾ ಹಣವನ್ನು ಅವರ ಅಕೌಂಟ್ ಗೆ ವರ್ಗಾವಣೆ ಮಾಡಿದ್ದಾರೆ.
ಹೀಗೆ ಎಂಟು ತಿಂಗಳಿನಿಂದ ಕರೆ ಮಾಡಿ 10 ಲಕ್ಷ ರೂ.ಗಳನ್ನು ವಿವಿಧ ಬ್ಯಾಂಕ್ ಗಳಿಗೆ ಜಮಾ ಮಾಡಿಕೊಂಡಿರುವ ಆಕಾಶ್ ಮರ್ಮಾ ನಂತರ ತನ್ನ ಮೂರು ನಂಬರ್ ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.
ಆ.14ರ ನಂತರ ಆಕಾಶ್ ಮರ್ಮಾ ಯಾವುದೇ ಕರೆ ಮಾಡಿಲ್ಲ. ಬಹುಮಾನ ಹಣವೂ ಹಸೀನಾ ಕೈ ಸೇರಿಲ್ಲ. ವರ್ಮಾರ ಎಲ್ಲಾ ನಂಬರ್ ಗಳು ಸ್ವಿಚ್ ಆಫ್ ಆಗಿವೆ. ಇದರಿಂದ ಕಂಗಾಲಾದ ಮಹಿಳೆ ದೊಡ್ಡಪೇಟೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕರೆ ಮಾಡಿದರೂ ಪೋನ್ ಸ್ವಿಚ್ ಆಫ್ ಆಗಿದೆ. ಇದು ಬೇರೆ ರಾಜ್ಯದ ಮೊಬೈಲ್ ನಂಬರ್ ಗಳಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications