ಜಮೀರ್ ಗೈರು: ರಾಧಿಕಾ-ಕುಮಾರಸ್ವಾಮಿ ಫ್ಯಾಕ್ಟರ್ ಕಾರಣ

ಉಪ ಚುನಾವಣೆ ಸಂದರ್ಭದಲ್ಲಿ ಅನೇಕ ರಾಜಕೀಯ ಮುಖಂಡರ ನಿಷ್ಠೆ ಬದಲಾಗಿದೆ. ಈ ಮಧ್ಯೆ ಸದ್ದಿಲ್ಲದೆ ಮತ್ತೊಬ್ಬ ಪ್ರಭಾವಿ ನಾಯಕ ತಮ್ಮ ನಿಷ್ಠೆ ಬದಲಿಸಿದ್ದಾರೆ ಎಂಬ ಗುಸುಗುಸು ಕೇಳಿಬಂದಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಂದ ಮುನಿಸುಕೊಂಡು ಪ್ರಚಾರ ಕಣದಿಂದ ದೂರವುಳಿದಿರುವ ಅವರ ಬಲಗೈ ಬಂಟ, ಹಾಲಿ ಚಾಮರಾಜ ಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಅವರು ಕಾಂಗ್ರೆಸ್ ಕೈಹಿಡಿಯುವ ಸಾಧ್ಯತೆಗಳು ಹೆಚ್ಚಾಗಿವೆ ಎನ್ನಲಾಗಿದೆ. ಸದ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಅವರಿಗೆ ಅನುಕೂಲವಾಗುವಂತೆ ಪ್ರಚಾದಿಂದ ದೂರವುಳಿದಿರುವ ಜಮೀರ್, ಮುಂದೆ ಶಿವಕುಮಾರ್ ಕೈಬಲಪಡಿಸಲು ಆಪರೇಶನ್ ಹಸ್ತದಿಂದಾಗಿ ಕಾಂಗ್ರೆಸ್ ಸೇರುವ ಸಾಧ್ಯತೆಗಳು ದಟ್ಟವಾಗಿವೆ ಎನ್ನಲಾಗಿದೆ.
ಒಂದು ಮಾಹಿತಿಯ ಪ್ರಕಾರ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರಕ್ಕೆಂದು ಜಮೀರ್ ಸಾಕಷ್ಟು ಹಣ ಖರ್ಚು ಮಾಡಿದ್ದರು. ಆದರೆ ಚುನಾವಣೆ ಮುಗಿದು ಮೂರು ತಿಂಗಳಾದರೂ ಗೌಡರ ಕುಟುಂಬ ಹಣ ವಾಪಸ್ ಮಾಡುವ ಗೋಜಿಗೆ ಹೋಗಿಲ್ಲ. ಇದರಿಂದ ಕಂಗೆಟ್ಟಿರುವ ಜಮೀರ್ ಕುಮಾರಣ್ಣನಿಂದ ದೂರವುಳಿದಿದ್ದಾರೆ ಎನ್ನಲಾಗಿದೆ.
ನಟಿ ರಾಧಿಕಾ- ಕುಮಾರಸ್ವಾಮಿ ಫ್ಯಾಕ್ಟರ್: ಮತ್ತೊಂದು ಮಾಹಿತಿಯ ಪ್ರಕಾರ ಜಮೀರ್, ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಏಕೆಂದರೆ ಕುಮಾರಣ್ಣಗೆ ನಟಿ ರಾಧಿಕಾರನ್ನು ಪರಿಚಯಿಸಿದ್ದೇ ಜಮೀರ್ ಎಂಬ ಮಾಹಿತಿ ಅನಿತಾ ಕುಮಾರಸ್ವಾಮಿ ಅವರ ಗಮನಕ್ಕೆ ಬಂದಿದ್ದು, ಶಾಸಕ ಜಮೀರ್ ರನ್ನು ಪ್ರಚಾರದಿಂದ ದೂರವಿಟ್ಟಿದ್ದಾರೆ ಎನ್ನಲಾಗಿದೆ.
ಏನೇ ಆಗಲಿ ರಾಮನಗರ ಮತ್ತು ಚನ್ನಪಟ್ಟಣ ಭಾಗಗಳಲ್ಲಿ ಅಲ್ಪಸಂಖ್ಯಾತ ಮತದಾರರು ಭಾರಿ ಸಂಖ್ಯೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಜಮೀರ್ ಪ್ರಚಾರದಿಂದ ದೂರ ಉಳಿದಿರುವುದು ಜೆಡಿಎಸ್ಸಿಗೆ ಭಾರಿ ಹೊಡೆತ ನೀಡಲಿದೆ ಎನ್ನಲಾಗಿದೆ.












Click it and Unblock the Notifications