ದುಬೈಗೆ ಹೋಗಲು ಜಗಳ, ದಂಪತಿ ಆತ್ಮಹತ್ಯೆ

ಆತ್ಮಹತ್ಯೆಗೆ ಶರಣಾದವರನ್ನು ಶರವಣ (24) ಹಾಗೂ ಸೋನಿಯಾ (22) ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಪಾನಿಪೂರಿಯಲ್ಲಿ ಕ್ರಿಮಿನಾಶಕ ಮಿಶ್ರಣ ಮಾಡಿಕೊಂಡು ದಂಪತಿ ಸೇವಿಸಿದ್ದಾರೆ. ಇದರಿಂದ ಸೋನಿಯಾಗೆ ವಿಪರೀತ ವಾಂತಿಯಾಗಿದ್ದು, ಆಕೆ ತನ್ನ ಕುಟುಂಬದವರಿಗೆ ವಿಷಯ ತಿಳಿಸಿದ್ದಾರೆ.
ಸೋನಿಯಾ ಪೋಷಕರು ತಕ್ಷಣ ಮಗಳ ಮನೆಗೆ ಆಗಮಿಸಿದ್ದಾರೆ. ಬಾಗಿಲು ಮುರಿದು ನೋಡಿದಾಗ ಮಗಳು ಮತ್ತು ಅಳಿಯ ಅರೆಪ್ರಜ್ಞಾವಸ್ಥೆಯಲ್ಲಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ದುಬೈಗೆ ಹೋಗವ ಹಠ : ಶರವಣ ಮತ್ತು ಸೋನಿಯಾ ಮೂರು ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕೆಲವು ದಿನಗಳ ಹಿಂದೆ ಕೆಲಸ ಬಿಟ್ಟಿದ್ದರು.
ಶರವಣ ದುಬೈಗೆ ಹೋಗಿ ಕೆಲಸ ಮಾಡಲು ನಿರ್ಧರಿಸಿದ್ದರು. ಆದರೆ, ಪತ್ನಿ ಸೋನಿಯಾ ಇದಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ತನ್ನನ್ನು ದುಬೈಗೆ ಕರೆದುಕೊಂಡು ಹೋಗುವಂತೆ ಜಗಳವಾಡಿದ್ದಳು. ಈ ವಿಚಾರವಾಗಿ ದಂಪತಿ ಮಧ್ಯೆ ಜಗಳ ನಡೆಯುತ್ತಿತ್ತು ಎಂದು ವಿವೇಕನಗರ ಪೊಲೀಸರು ಹೇಳಿದ್ದಾರೆ.
ಪತಿ ದುಬೈಗೆ ಹೋದರೆ ಮತ್ತೆ ಮರಳುವುದಿಲ್ಲ ಎಂಬುದು ಸೋನಿಯಾ ಅನುಮಾನವಾಗಿತ್ತು. ಆದ್ದರಿಂದ ಆಕೆ ತಾನು ಬರುವುದಾಗಿ ಹಠ ಮಾಡುತ್ತಿದ್ದಳು. ಆದರೆ, ಗರ್ಭಿಣಿಯನ್ನು ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಮಗುವಾದ ಬಳಿಕ ಕರೆದುಕೊಂಡು ಹೋಗುತ್ತೇನೆ ಎಂದು ಶರವಣ ಸಮಾಧಾನ ಪಡಿಸಿದರೂ ಆಕೆ, ಹಠ ಹಿಡಿದ್ದಳು ಎಂದು ಸೋನಿಯಾ ಕುಟುಂಬದವರು ತಿಳಿಸಿದ್ದಾರೆ.
ಬುಧವಾರ ಸಹ ದಂಪತಿ ಇದೇ ವಿಚಾರವಾಗಿ ಜಗಳವಾಡಿದ್ದಾರೆ. ಇದರಿಂದ ಮನನೊಂದ ಇಬ್ಬರು ಸಂಜೆ ಮನೆಯಿಂದ ಹೊರಹೋದವರು, ಪಾನಿಪೂರಿ ತೆಗೆದುಕೊಂಡು ಬಂದು ಅದರಲ್ಲಿ ಕ್ರಿಮಿನಾಶಕ ಬೆರೆಸಿಕೊಂಡು ತಿಂದು, ಸಾವನ್ನಪ್ಪಿದ್ದಾರೆ.












Click it and Unblock the Notifications