ಶಾಸಕ ರೆಡ್ಡಿ ಪುತ್ರಿ ಆತ್ಮಹತ್ಯೆಗೆ ಪ್ರೇಮ ಭಗ್ನತೆ ಕಾರಣ
ಬೆಂಗಳೂರು, ಆಗಸ್ಟ್10: ಬಿಜೆಪಿಯ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ -ಆಶಾ ದಂಪತಿಯ ಜ್ಯೇಷ್ಠ ಪುತ್ರಿ ಗಗನಾ ರೆಡ್ಡಿ (17) ಗುರುವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗಗನಾ ಕ್ರೈಸ್ಟ್ ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಗಗನಾ ತನ್ನ ಸಹೋದರಿ ಮೇಘನಾ ಜತೆ ಟಿವಿ ನೋಡುತ್ತ ಕುಳಿತಿದ್ದಳು. ಈ ವೇಳೆ ಟಿವಿ ಚಾನಲ್ ಬದಲಾಯಿಸುವ ವಿಚಾರದಲ್ಲಿ ಸಹೋದರಿಯರು ಜಗಳವಾಡಿಕೊಂಡಿದ್ದಾರೆ. ಇಬ್ಬರ ಜಗಳ ಗಮನಿಸಿದ ಶಾಸಕರ ಪತ್ನಿ ಇಬ್ಬರಿಗೂ ಬುದ್ಧಿವಾದ ಹೇಳಿದ್ದಾರೆ. ಇದರಿಂದ ನೊಂದುಕೊಂಡ ಗಗನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಶಾಸಕರ ಮನೆಯವರನ್ನು ಉಲ್ಲೇಖಿಸಿ, ಪೊಲೀಸರು ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಆದರೆ ಇದೇ ಪೊಲೀಸರ ಪೈಕಿ ಹಿರಿಯ ಅಧಿಕಾರಿಯೊಬ್ಬರು ಶಾಸಕ ರೆಡ್ಡಿ ಪುತ್ರಿಯ ಆತ್ಮಹತ್ಯೆಗೆ ಬೇರೆಯದೇ ಕಾರಣವಿದೆ ಎಂದು ಹೇಳಿದ್ದಾರೆ. ಇದರಿಂದ ಗಗನಾ ಆತ್ಮಹತ್ಯೆ ಪ್ರಕರಣದ ಸುತ್ತ ಸಾಕಷ್ಟು ವಿವಾದದ ಹುತ್ತಗಳು ಎದ್ದಿವೆ.
ಅದಕ್ಕೂ ಮುನ್ನ, ರೆಡ್ಡಿ ಪುತ್ರಿಯ ಆತ್ಮಹತ್ಯೆಗೆ ಅವರ ಬಂಧುಬಳಗದವರು ಸಾಂತ್ವನ ವ್ಯಕ್ತಪಡಿಸಿದ್ದಾರಾದರೂ ಬೊಮ್ಮನಹಳ್ಳಿ ಕ್ಷೇತ್ರದ ಜನ ಅನೇಕ ಅನುಮಾನಗಳನ್ನು ವ್ಯಕ್ತಪಡಿಸುತ್ತಾ ಗುಸುಗುಸು ಮಾತನ್ನಾಡುತ್ತಿದ್ದಾರೆ. ಗಗನಾ ಧೈರ್ಯವಂತಳು. ಟಿವಿ ಜಗಳದಿಂದ ಈ ಸಾವು ಸಂಭವಿಸಿಲ್ಲ. ಅದಕ್ಕೆ ಬೇರೆಯದೇ ಕಾರಣಗಳಿವೆ ಎಂದು ಬೇರೆಯದೇ ನಿದರ್ಶನಗಳನ್ನೂ ನೀಡುತ್ತಿದ್ದಾರೆ.

ಅಪರಾತ್ರಿ ವೇಳೆ ಶವಪರೀಕ್ಷೆ
ಈ ನೆಲದ ಕಾನೂನಿನಿಂತೆ ರಾತ್ರಿ ವೇಳೆ ಅದೂ ಅಪರಾತ್ರಿ ವೇಳೆ ಶವಪರೀಕ್ಷೆ ನಡೆಸುವಂತಿಲ್ಲ. ಆದರೆ ಶಾಸಕ ಸತೀಶ್ ರೆಡ್ಡಿ ಪುತ್ರಿ ಗಗನಾಳ ಶವಪರೀಕ್ಷೆಯನ್ನು ಆತುರಾತುರವಾಗಿ ಗುರುವಾರ ರಾತ್ರಿ 2 ಗಂಟೆಯಲ್ಲಿ ನಡೆಸಲಾಗಿದೆ. ಅದರ ಜರೂರತ್ತು ಏನಿತ್ತು? ಶಾಸಕರಿಗೆ ಬೇರೆಯದೇ ಆದ ಕಾನೂನು ಸವಲತ್ತು ಇದೆಯಾ? ಎಂಬ ಸಾರ್ವಜನಿಕ ಚರ್ಚೆ ನಡೆಯುತ್ತಿದೆ.
ಇನ್ನು ಜನಪ್ರಿಯ ಶಾಸಕರು ತಮ್ಮ ಪುತ್ರಿಯ ಅಂತ್ಯ ಸಂಸ್ಕಾರವನ್ನು ಆತುರಾತುರದ ಶವಪರೀಕ್ಷೆ ನಡೆಯುತ್ತಿದ್ದಂತೆ ಅದಕ್ಕಿಂತ ಆತುರಾತುರವಾಗಿ ಅಂತ್ಯಸಂಸ್ಕಾರ ನಡೆಸಿದ್ದೇಕೆ. ಮಾರನೆಯ ದಿನ ಬೆಳಕು ಹರಿಯುವುದಕ್ಕೂ ಕಾಯದೆ ಬೆಳಗಿನ ಜಾವ 5 ಗಂಟೆಯಲ್ಲಿ ಹೊಂಗಸಂದ್ರದಲ್ಲಿ ಮಗುವಿನ ಅಂತ್ಯ ಸಂಸ್ಕಾರ ನಡೆಸಿರುವುದು ಸಹಜವಾಗಿಯೇ ಸಾಕಷ್ಟು ಸಂಶಕ್ಕೆ ಕಾರಣವಾಗಿದೆ.

ಘಟನೆ ನಡೆದ 8 ಗಂಟೆಗಳಲ್ಲೇ ಶವ ಸಂಸ್ಕಾರ
ಸ್ಥಳೀಯ (ಮಡಿವಾಳ ಠಾಣೆಯ) ಪೊಲೀಸರಿಗೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ನಿವಾಸವೇ ಠಾಣೆಯಾಗಿದ್ದು, ಶಾಸಕರ ಆಣತಿಯಂತೆ ಆತುರಾತುರವಾಗಿ ಎಲ್ಲವನ್ನೂ ಗಪ್ ಚುಪ್ ಆಗಿ ಮಾಡಿಮುಗಿಸಿದ್ದಾರೆ. ಘಟನೆ ನಡೆದ 8 ಗಂಟೆಗಳಲ್ಲೇ, ಯಾವುದೇ ಸುಳಿವು/ಸಾಕ್ಷ್ಯ ಲಭ್ಯವಾಗದಂತೆ ಶವ ಸಂಸ್ಕಾರಕ್ಕೂ ಅವಕಾಶ ಕಲ್ಪಿಸಿರುವುದಕ್ಕೆಸ್ಥಳೀಯ ಪೊಲೀಸರ ಬಗ್ಗೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಷ್ಟಕ್ಕೂ ಗಗನಾ ಏಕೆ ಆತ್ಮಹತ್ಯೆ ಮಾಡಿಕೊಂಡಳು?
ಒಂದು ಮೂಲದ ಪ್ರಕಾರ ಗಗನಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ವಿಷಯ ತಿಳಿದ ತಾಯಿ ಆಕೆಯನ್ನು ಗದರಿಸಿ ಪ್ರೀತಿ-ಪ್ರೇಮ ಬೇಡ ಎಂದು ಬುದ್ಧಿಮಾತು ಹೇಳಿದ್ದರು ಎನ್ನಲಾಗಿದೆ. ಇದರಿಂದ ಆದ ಬೇಸರವೂ ಆತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಆದರೆ ಇದನ್ನು ಶಾಸಕರ ಕುಟುಂಬ ಹಾಗೂ ಪೊಲೀಸರು ಅಲ್ಲಗಳೆದಿದ್ದಾರೆ. ಟಿವಿ ನೋಡುವ ವಿಚಾರದಲ್ಲಿಯೇ ಸಹೋದರಿಯರ ನಡುವೆ ಜಗಳ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದಾರೆ.

ಶಾಸಕ ಸತೀಶ್ ರೆಡ್ಡಿ ಕಣ್ಣಿಗೆ ಬಿದ್ದ ಗಗನಾ ಪ್ರೀತಿ
ಪುತ್ರಿ ಗಗನಾಳ ಪ್ರೀತಿ ವಿಷಯ ಅಪ್ಪ ಸತೀಶ್ ರೆಡ್ಡಿ ಕಿವಿಗೂ ಬಿದ್ದಿದೆ. ಇದಕ್ಕೆ ಶಾಸಕ ಸತೀಶ್ ರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೂ ಗಗನಾ ತನ್ನ ಪ್ರಿಯಕರನ ಜತೆ ಸಾರ್ವಜನಿಕವಾಗಿ ಓಡಾಡುತ್ತಿರುವುದು ಒಂದು ವಾರದ ಹಿಂದೆ ಶಾಸಕ ಸತೀಶ್ ರೆಡ್ಡಿ ಕಣ್ಣಿಗೂ ಬಿದ್ದಿದೆ.
ಮೂಲಗಳ ಪ್ರಕಾರ ತಕ್ಷಣ ಹುಡುಗನ ಮನೆಗೆ ನುಗ್ಗಿದ ಶಾಸಕ ಸತೀಶ್ ರೆಡ್ಡಿ, ಮನೆಯವರನ್ನು ಮತ್ತು ಯುವಕನನ್ನು ತರಾಟೆಗೆ ತೆಗೆದುಕೊಂಡು, ಎಚ್ಚರಿಕೆ ನೀಡಿದ್ದಾರೆ. ಕೊನೆಗೆ, ಹುಡುಗನಿಗೆ ಜೀವಬೆದರಿಕೆಯನ್ನೂ ಹಾಕಿದ್ದಾರೆ ಎನ್ನಲಾಗಿದೆ.

ಗುರುವಾರ ಸಂಜೆ ಏನಾಯ್ತು?:
ಅಪ್ಪನ ರೌದ್ರಾವತಾರ ಕಂಡು ಗಗನಾ ತೀವ್ರವಾಗಿ ಅಸಮಾಧಾನಗೊಂಡಿದ್ದಳು. ಗುರುವಾರ ಸಂಜೆ ಪ್ರಿಯಕರನ ಜತೆ ಒಂದೇ ಸಮನೆ ಮೊಬೈಲಿನಲ್ಲಿ ಮಾತನಾಡುತ್ತಿರುವುದು ತಾಯಿ ಆಶಾ ಕಣ್ಣಿಗೆ ಬಿದ್ದಿದೆ. ಇದರಿಂದ ಕೋಪಗೊಂಡ ಆಶಾ ರೆಡ್ಡಿ ಮಗಳಿಗೆ ತಿಳಿಯಹೇಳಿದ್ದಾರೆ. ಅಪ್ಪ ಜನಪ್ರಿಯ ನಾಯಕರು. ಮನೆಯ ಪ್ರತಿಷ್ಠೆ ಮಣ್ಣುಪಾಲಾಗುತ್ತದೆ ಎಂದು ಕಿವಿ ಹಿಂಡಿದ್ದಾರೆ.
ಒಂದು ಮೂಲದ ಪ್ರಕಾರ ಅದಾಗುತ್ತಿದ್ದಂತೆ ರಾತ್ರಿ 8 ಗಂಟೆ ವೇಳೆಗೆ ಗಗನಾ ಮೇಲ್ಮಹಡಿಗೆ ಹೋದವಳೆ, ಮರಳಿ ಬಾರದ ಲೋಕಕ್ಕೆ ತೆರಳಿದ್ದಾಳೆ.












Click it and Unblock the Notifications