ಇಂಡಿಯಾ272+ : ಅಂತರ್ಜಾಲದಲ್ಲಿ ಬಿಜೆಪಿ ಭರ್ಜರಿ ಅಭಿಯಾನ

ಲೋಕಸಭೆ ಚುನಾವಣೆಯಲ್ಲಿ ಬಹುಮತ ಗಳಿಸಲು ಯಾವುದೇ ಪಕ್ಷಕ್ಕೆ ಬೇಕಾಗಿರುವುದು 272 ಸೀಟುಗಳು. ಭಾರತೀಯ ಜನತಾ ಪಕ್ಷ ಈ ಕನಸಿನ ಬೆನ್ನತ್ತಿದೆ. ಬಿಜೆಪಿಯ ಈ ಕನಸು ನನಸಾಗುವುದೆ? ಇಂಥದೊಂದು ಕನಸನ್ನು ಹೊತ್ತೇ ಬಿಜೆಪಿ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷ ನರೇಂದ್ರ ಮೋದಿ ಅವರು, ಪ್ರಚಾರಕ್ಕಿಳಿದಿದ್ದಾರೆ. 'ಕನಸನ್ನು ಕಾಣದೇಹೋದರೆ ಅವನ್ನು ನನಸು ಮಾಡಿಕೊಳ್ಳುವ ಸಂಕಲ್ಪವಾದರೂ ಎಲ್ಲಿರುತ್ತದೆ?' ಎಂದು ಅವರು ಪ್ರಶ್ನಿಸಿಕೊಂಡಿದ್ದಾರೆ.
ಯುವಜನತೆಯನ್ನು ಸೆಳೆಯಲು ಮತ್ತು ಪ್ರಚಾರಕಾರ್ಯದಲ್ಲಿ ಸಾಮಾಜಿತ ತಾಣಗಳ ಮಹತ್ವ ಎಷ್ಟು ಮಹತ್ವದ್ದು ಎಂಬುದನ್ನು ಮನಗಂಡಿಸುವ, ನರೇಂದ್ರ ಮೋದಿ ಅವರು ಕಳೆದ ಬಾರಿ ಪುಣೆಯಲ್ಲಿ ಫರ್ಗ್ಯೂಸನ್ ಕಾಲೇಜಿನಲ್ಲಿ ಭಾಷಣ ಮಾಡುವ ಮುನ್ನ, ತಮ್ಮ ಭಾಷಣ ಹೇಗಿರಬೇಕೆಂದು ಸೋಷಿಯಲ್ ಮೀಡಿಯಾದ ಮುಖಾಂತರ ತಿಳಿಸಬೇಕೆಂದು ಯುವಜನತೆಯನ್ನು ಕೋರಿದ್ದರು. ಇದಕ್ಕೆ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ಭಾರೀ ಸ್ಪಂದನೆ ವ್ಯಕ್ತವಾಗಿತ್ತು. "ಸೋಷಿಯಲ್ ಮೀಡಿಯಾದ ಪವರ್ ಅಂದರೆ ಇದು" ಎಂದು ಅವರು ಉದ್ಗರಿಸಿದ್ದರು.
ಚುನಾವಣಾ ಪ್ರಚಾರದಲ್ಲಿ ತಂತ್ರಜ್ಞಾನವನ್ನು ಅತ್ಯಂತ ಪ್ರಭಾವಶಾಲಿಯಾಗಿ ಬಳಸಿಕೊಳ್ಳುವ ಉದ್ದೇಶದಿಂದ ರಾಜ್ಯಸಭಾ ಸಚಿವ ಮತ್ತು ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿರುವ ಪಿಯೂಷ್ ಗೋಯೆಲ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಈ ಅಭಿಯಾನದ ಬಗ್ಗೆ ಮಾತನಾಡುತ್ತ ಗೋಯೆಲ್ ಅವರು, "ದೇಶದಲ್ಲಿ 7 ಕೋಟಿಗೂ ಹೆಚ್ಚು ಯುವಕರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಂಡಿಲ್ಲ. ಮಿಷನ್ 272+ ಭಾಗವಾಗಿ, ಅವರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸುವುದು ಮತ್ತು ಭ್ರಷ್ಟಾಚಾರ ಹಾಗು ದುರಾಡಳಿತದ ಬಗ್ಗೆ ಅವರಲ್ಲಿ ಜಾಗೃತಿ ಮೂಡಿಸುವುದು. ಅವರು ಮತ ಚಲಾಯಿಸುವಂತೆ ಮಾಡುವುದು ಆದ್ಯ ಕರ್ತವ್ಯ" ಎಂದಿದ್ದರು.
ನರೇಂದ್ರ ಮೋದಿ ಅವರ ನಾಯಕತ್ವದ ಅಡಿಯಲ್ಲಿ 'ಮಿಷನ್ 272+' www.india272.com ವೆಬ್ ಸೈಟ್ ರೂಪದಲ್ಲಿ ಆರಂಭವಾಗಿದೆ. ಆಗಸ್ಟೊಳಗೆ 10 ಸಾವಿರ ಸ್ವಯಂಸೇವಕರು ಮತ್ತು 1 ಲಕ್ಷ ಆನ್ ಲೈನ್ ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳುವ ಗುರಿಯನ್ನು ಬಿಜೆಪಿ ಇಟ್ಟುಕೊಂಡಿದೆ. ಮತದಾರರನ್ನು ತಲುಪಲು ಸ್ವಯಂಸೇವಕರಿಗೆ ಬಿಜೆಪಿಯ ಉದ್ದೇಶದ ಬಗ್ಗೆ ಮನವರಿಗೆ ಮಾಡಿಕೊಡುವುದು ಮತ್ತು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಕಾರ್ಯಾಗಾರವನ್ನೂ ನಡೆಸಲಾಗುವುದು ಎಂದು ಗೋಯೆಲ್ ಹೇಳಿದ್ದಾರೆ. ಇದಕ್ಕಾಗಿ http://volunteer.india272.com/ ಮೀಸಲಿಡಲಾಗಿದೆ.
ಉದ್ಯಮಿ ಮತ್ತು ಮಿಷನ್ 272+ ರೂವಾರಿಯಾಗಿರುವ ರಾಜೇಶ್ ಜೈನ್ ಅವರು, ಸ್ವಯಂಸೇವಕರ ಮಹತ್ವ, ಬೂತ್ ನಿರ್ವಹಣೆ ಮತ್ತು ಮತದಾರರನ್ನು ಮತದಾನದ ಬಗ್ಗೆ ಶಿಕ್ಷಿತರನ್ನಾಗಿ ಮಾಡುವ ಬಗ್ಗೆ ವಿವರಣೆ ನೀಡಿದ್ದಾರೆ. ಆ.11ರಂದು ಭಾನುವಾರ ಹೈದರಾಬಾದಿನಲ್ಲಿ ನರೇಂದ್ರ ಮೋದಿ ಅವರು ಮಾಡಲಿರುವ ಭಾಷಣದ ಬಗ್ಗೆ ತಾಣದಲ್ಲಿ ವಿವರಣೆ ನೀಡಲಾಗಿದೆ. ಮುಸ್ಲಿಂ ಮಹಿಳಾ ನಾಗರಿಕರು ಬಹುಸಂಖ್ಯೆಯಲ್ಲಿ ಸ್ವಯಂಸೇವಕರಾಗಿ ನೋಂದಾಯಿಸಿಕೊಳ್ಳುತ್ತಿದ್ದಾರೆ ಎಂದೂ ತಿಳಿದುಬಂದಿದೆ.
ತಂತ್ರಜ್ಞಾನದ ಬಳಕೆಯ ಬಗ್ಗೆ ನರೇಂದ್ರ ಮೋಹಿ ಅವರ ಹೇಳಿಕೆ ಅತ್ಯಂತ ಮಹತ್ವಪೂರ್ಣವಾದದ್ದು. ಅವರು ಹೇಳಿದ್ದೇನೆಂದರೆ, "ಚುನಾವಣೆಗಳು ಬರುತ್ತವೆ ಹೋಗುತ್ತವೆ. ಆದರೆ ಪ್ರಜಾಪ್ರಭುತ್ವವನ್ನು ಇನ್ನಷ್ಟು ಬಲಿಷ್ಠ ಮಾಡಬೇಕೆನ್ನುವ ನಮ್ಮ ಗುರಿಯ ಬಗ್ಗೆ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಭಾರತದ ಜನಸಂಖ್ಯೆಯ ಬಹುಪಾಲು ಇರುವ ಯುವಜನತೆಗೆ ನಾವು ಯಾವತ್ತೂ ಸ್ಪಂದಿಸುತ್ತಿರಬೇಕು. ನಮ್ಮ ಉಜ್ವಲತೆಯಾಗಿ ಭಾರತವನ್ನು ಬದಲಾಯಿಸಲು ಯುವಜನತೆಗೆ ಮಾತ್ರ ಸಾಧ್ಯ."
67ನೇ ಸ್ವಾತಂತ್ರ್ಯ ದಿನಾಚರಣೆ : ಈ ಪುಟ ನಿಮ್ಮ ಸ್ನೇಹಿತರಿಗೆ ಕಳಿಸಿ












Click it and Unblock the Notifications