ತಮ್ಮನಿಗಾಗಿ ತೇಜಸ್ವಿನಿ ಬೆಂಬಲವನ್ನೂ ಕೋರಿದ ಡಿಕೆಶಿ
ರಾಮನಗರ, ಆಗಸ್ಟ್ 10: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಉಪಚುನಾವಣೆ ಸಮೀಪಿಸುತ್ತಿದ್ದಂತೆ ಕಣ ರಂಗೇರುತ್ತಿದೆ. ಒಂದು ಕಡೆ ಜೆಡಿಎಸ್ ವರಿಷ್ಠರು ಕೆಲ ಮುಖಂಡರನ್ನು ಮಾತೃಪಕ್ಷಕ್ಕೆ ಎಳೆದುಕೊಂಡರೆ, ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಕೂಡ ತಮ್ಮ ಸಹೋದರನನ್ನು ಗೆಲ್ಲಿಸಲೇಬೇಕೆಂಬ ಹಠಕ್ಕೆ ಬಿದ್ದು ಪಕ್ಷ ಬಿಟ್ಟವರನ್ನು ಮತ್ತೇ ಕಾಂಗ್ರೆಸ್ಸಿಗೆ ಮರಳುವಂತೆ ನೋಡಿಕೊಳ್ಳುತ್ತಿದ್ದಾರೆ.
ಜೆಡಿಎಸ್ ವರಿಷ್ಠ ದೇವೇಗೌಡರು ಮಾಜಿ ಶಾಸಕ ಎಂಸಿ ಅಶ್ವತ್ಥ್ ಅವರನ್ನು ಮತ್ತೆ ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಇನ್ನು, ಮಾಗಡಿಯಲ್ಲಿ ಜೇಡರಹಳ್ಳಿ ಕೃಷ್ಣಪ್ಪ (ಎಚ್ಎಂ ಕೃಷ್ಣಮೂರ್ತಿ) ಅವರನ್ನು ಮತ್ತೆ ಕಾಂಗ್ರೆಸಿಗೆ ಬರಮಾಡಿಕೊಂಡಿರುವ ಶಿವಕುಮಾರ್ ಎದುರಾಳಿಗೆ ಟಾಂಗ್ ನೀಡಿದ್ದಾರೆ.

ಎಲ್ಲಾ ಅನುಜನಿಗಾಗಿ: ಈ ಮಧ್ಯೆ, ಮಾಗಡಿಯಲ್ಲಿ ಮಾತನಾಡಿರುವ ಡಿಕೆ ಶಿವಕುಮಾರ್ ಅವರು ತಮ್ಮ ಕಡುವಿರೋಧಿ, ಮಾಜಿ ಸಂಸದೆ ತೇಜಸ್ವಿನಿ ಗೌಡ ಹಾಗೂ ಶಾಸಕ ಯೋಗೀಶ್ವರ್ ಜತೆ ಮಾತನಾಡಿ ಪಕ್ಷಕ್ಕೆ ಬೆಂಬಲ ನೀಡುವಂತೆ ಕೋರಿದ್ದೇನೆ ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಯೋಗೀಶ್ವರ್ 'ನಾನು ಎದುರಿಸಿರುವ ಈವರೆಗಿನ ಎಲ್ಲಾ ಚುನಾವಣೆಯಲ್ಲೂ ಜೆಡಿಎಸ್ ನನಗೆ ಪ್ರಬಲ ವಿರೋಧಿಯಾಗಿದೆ. ಹಾಗಂತ, ಕಾಂಗ್ರೆಸ್‌ನಲ್ಲಿ ಇದ್ದಾಗ ಡಿಕೆ ಶಿವಕುಮಾರ್ ಮಾಡಿರುವ ದ್ರೋಹವನ್ನೂ ನಾನು ಮರೆತಿಲ್ಲ. ಈಗ ನನ್ನ ಬಳಿಯೇ ಉಭಯ ಪಕ್ಷಗಳಿಗೂ ಕೈ ಚಾಚುವ ಸ್ಥಿತಿ ಬಂದಿದೆ. ರಾಜಕಾರಣದಲ್ಲಿ ಯಾರನ್ನು, ಏನನ್ನು ನಂಬಬೇಕೋ, ದ್ವೇಷಿಸಬೇಕೋ ಎಂಬುದು ಅರಿಯದಾಗಿದೆ. ಎರಡು ದಿನ ಕಾದು ನೋಡಿ' ಎಂದು ವಿಶ್ಲೇಷನಾತ್ಮಕ ಉತ್ತರ ನೀಡಿದ್ದಾರೆ
ಡಿಕೆಶಿಗೆ ಜೇಡ್ರಳ್ಳಿ ಋಣ ಸಂದಾಯ: ಕಾಂಗ್ರಸ್‌ಗೆ ಮರಳಿ ಬಂದಿರುವ ಮಾಗಡಿಯ ಎಚ್ ಎಂ ಕೃಷ್ಣಮೂರ್ತಿ 'ನಾನು ಡಿಕೆ ಶಿವಕುಮಾರ್ ಮೇಲಿನ ಅಭಿಮಾನದಿಂದ ಕಾಂಗ್ರೆಸ್ ಸೇರ್ಪಡೆಗೊಂಡು, ಡಿಕೆ ಸುರೇಶ್ ಪರವಾಗಿ ಕೆಲಸ ಮಾಡುತ್ತೇನೆ' ಎಂದು ತಿಳಿಸಿದ್ದಾರೆ.
ತಮ್ಮ ಮಾತಿನ ಭರದಲ್ಲಿ ಜೇಡ್ರಳ್ಳಿ ಕೃಷ್ಣಪ್ಪ 'ತಾನು ಈ ಹಿಂದೆ ಜೈಲುಪಾಲಾಗುವ ಸಂದರ್ಭ ಬಂದಾಗ ಇದೇ ಶಿವಕುಮಾರ್ ಅವರು ಅದನ್ನು ತಡೆದರು. ಶಿವಕುಮಾರ್ ಅವರು ಅಂದು ಮಾಡಿದ ಉಪಕಾರವನ್ನು ಸ್ಮರಿಸುತ್ತಾ, ಚುನಾವಣೆಯಲ್ಲಿ ತಮ್ಮನಿಗೆ ಬೆಂಬಲ ಸೂಚಿಸುವ ಮೂಲಕ ಋಣ ಸಂದಾಯ ಮಾಡುವೆ' ಎಂದು ತುಂಬಿದ ಸಭೆಯಲ್ಲಿ ತಿಳಿಸಿದ್ದಾರೆ.












Click it and Unblock the Notifications