ಹುಯ್ಯಂತ ಎಲ್ಲಾರೂ ಸೇರಿ ಮಜಾ ಮಾಡೋಣಂತ
ಬೆಂಗಳೂರು, ಆ. 8 : "ಪಂಚಮಿ ಹಬ್ಬ ಬಂತು ಸನಿಯಾಕ, ಅಣ್ಣ ಬರಲಿಲ್ಲ ಇನ್ನೂ ಕರಿಲಾಕ" ಎಂದು ಹಲುಬಾಕತ್ತಿದ್ದರ, ನಿಮಗೊಂದು ಒಳ್ಳೆ ಸುದ್ದಿ ಐತಿ. ಉತ್ತರ ಕರ್ನಾಟಕ ಸಂಘದವರು ಅಗಸ್ಟ್ 10 ಮತ್ತು 11ನೇ ತಾರೀಕು ಬೆಂಗಳೂರಿನ ಅರಮನೆ ಮೈದಾನದಾಗ ನಿಮ್ ತವರುಮನಿಯ ಹಬ್ಬ ಮಾಡಾಕ ಹತ್ತ್ಯಾರ. ಬಿಟ್ಟದ್ ಬಿಟ್ಟ್ ಬರ್ರಿ.. ಹುಯ್ಯಂತ ಎಲ್ಲಾರೂ ಸೇರಿ ಮಜಾ ಮಾಡೋಣಂತ.
ಉತ್ತರ ಕರ್ನಾಟಕ ನಾಗರಿಕ ಅಭಿವೃದ್ಧಿ ವೇದಿಕೆಯವರು ಈ 'ಉತ್ತರ ಕರ್ನಾಟಕ ಉತ್ಸವ 2013' ಅನ್ನೋ ವಿಶಿಷ್ಟ ಬಗೆಯ ಉತ್ಸವವನ್ನ ಬೆಂಗಳೂರಿನ ಅರಮನಿ ಮೈದಾನದಾಗ ಇರೋ ನಲ್ ಪಾಡ್ ಪೆವಿಲಿಯನ್ ದಾಗ ಅರೇಂಜ್ ಮಾಡ್ಯಾರ. ಉತ್ತರ ಕರ್ನಾಟಕದ ಮಂತ್ರಿಗೋಳು ಈ ಉತ್ಸವದ ಉದ್ಘಾಟನೆ ಮಾಡವ್ರಿದ್ದಾರ. ಶನಿವಾರ ಮತ್ತ ಆದಿತ್ಯವಾರ (ಭಾನುವಾರ) ಭರ್ಜರಿ ಸಾಂಸ್ಕೃತಿಕ ಸಮ್ಮೇಳನ ನಡೀಲಿಕ್ಕದ.

500 ಜನಾ ಉತ್ತರ ಕರ್ನಾಟಕದ ಕಲಾವಿದರು ಜಮಾ ಆಗಿ ತಮ್ಮ ಕಲಾಪ್ರದರ್ಶನ ಮಾಡ್ತಾರ. ನಶಿಸಿ ಹೋಗ್ತಿರುವಂಥಾ ಗರ್ದಿಗಮ್ಮತ್ತು, ಮೋಡಿಕ್ಯಾರ ಆಟ, ರಾಮಕೊಂಡಡಿ ಹೆಳವರ ಹೇಳಿಕೆ ಮುಂತಾದ ಕಲಾಪ್ರದರ್ಶನ, ಗೀಗೀಪದ, ಡೊಳ್ಳುಕುಣಿತ, ಹಲಗೆ ಮೇಳ, ವೀರಗಾಸೆ, ಸೋಬಾನ ಪದ... ಇನ್ನೂ ಬೇಕಾದಷ್ಟವ.
ಇಷ್ಟೆಲ್ಲಾ ಇದ್ದ ಮ್ಯಾಲ ಮಜೇದಾರ ಊಟ ಇಲ್ಲದಿದ್ದರ ಹ್ಯಾಂಗರೀ ಯಪ್ಪಾ? ಅದಕ್ಕಂತ, 101 ನಮನಿ ತಿಂಡಿ, ತಿನಿಸುಗಳ ಪ್ರದರ್ಶನ ಮತ್ತ ಸ್ಪರ್ಧೆ ಕೂಡ ಆಯೋಜಕರು ಏರ್ಪಡಿಸ್ಯಾರ. ರೊಟ್ಟಿ ಭಾಳ ಸೇರ್ತದಂದ್ರ ನಿಮಗೊಂದು ಆಹ್ವಾನ ಐತಿ. ಯಾರು ರೊಟ್ಟಿ ಜಮಾಶಿ ಹೊಡೀತಾರೋ ಅವರಿಗೆ 'ರೊಟ್ಟಿ ವೀರ' ಅಂತ ಬಿರುದು ನೀಡೋವ್ರಿದ್ದಾರ. ಜೋಡಿ ಗುರೆಳ್ ಚಟ್ನಿ, ಬ್ಯಾಡಗಿ ಮೆಣಸಿನಕಾಯಿ ರಂಜಕ ಇದ್ದ ಇರ್ತೈತಿ. ಒಂದು ಕೈ ನೋಡೇ ಬಿಡ್ತೀರೇನು?
ಎಷ್ಟೋ ಉತ್ತರ ಕರ್ನಾಟಕದಾವ್ರ ಬೆಂಗಳೂರಿನ್ಯಾಗ ಬಂದು ಭಾಳ ವರ್ಷದಿಂದ ಝಂಡಾ ಊರಿಬಿಟ್ಟಾರ. ಆದ್ರೇನಂತ, ಎಲ್ಲಿದ್ದೇನು ಅವರು ಉತ್ತರ ಕರ್ನಾಟಕವ್ರ. ಅಲ್ಲಿ ಸಂಸ್ಕೃತಿ ಮರೀಬ್ಯಾಡ್ರಿ, ಅಲ್ಲಿ ಮಾತು ಮರೀಬ್ಯಾಡ್ರಿ, ಅಲ್ಲಿ ವೇಷ ಭೂಷಣ ಮರೀಬ್ಯಾಡ್ರಿ. ಹಂಗ ಬರೋಮುಂದ, ಉತ್ತರ ಕರ್ನಾಟಕದ ಶೈಲಿ ಉಡುಗೆ ತೊಟ್ಟು ಬರ್ರಿ ಮತ್ತ, ಇನಾಮು ಗೆದ್ರೂ ಗೆಲ್ಲಬಹುದು.
ಹಲವಾರು ವಿಚಾರಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ, ಸಿರಿ ಸಂಪದ ಸ್ಮರಣ ಸಂಚಿಕೆ ಬಿಡುಗಡೆ, ಚಾಲುಕ್ಯ ಪ್ರಶಸ್ತಿ ಪ್ರದಾನ... ಇನ್ನೂ ಹಲವಾರು ಕಾರ್ಯಕ್ರಮ ಅವ. ಈ ಉತ್ಸವಕ್ಕ ರಾಜ್ಯ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಲಿಕ್ಕತ್ತದ. ಯಾರು ಏನೇ ಸಹಕಾರ ನೀಡಿದ್ರೂ ನೀವು, ಅಂದ್ರ ಉತ್ತರ ಕರ್ನಾಟಕದಾವ್ರು ಸಂಸಾರ ಸಮೇತರಾಗಿ ಬಂದ್ರನ ಮಜಾ. ಬರ್ತೀರಿ ಹೌದಲ್ಲೋ, ಮರೀಬ್ಯಾಡ್ರಿ ಮತ್ತ.












Click it and Unblock the Notifications