ಮತ್ತೆ ವಿವಾದ: ಗುಜ್ರಾತ್ ಲೋಕಾ ಆಗಲೊಲ್ಲೆ- ನ್ಯಾ ಮೆಹತಾ

ನರೇಂದ್ರ ಮೋದಿ ಸರ್ಕಾರವನ್ನೂ ಬದಿಗೊತ್ತಿ ಗುಜರಾತ್ ಲೋಕಾಯುಕ್ತರನ್ನಾಗಿ ಮೆಹತಾ ಅವರನ್ನು ರಾಜ್ಯಪಾಲರು ನೇಮಕ ಮಾಡಿದ್ದರು. ಇದಕ್ಕೆ ರಾಜ್ಯ ಸರಕಾರ ತೀವ್ರ ವಿರೋಧ ಮತ್ತು ಅಸಮಾಧಾನ ವ್ಯಕ್ತಪಡಿಸಿ, ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿತು.
ಕಾನೂನು ಹೋರಾಟದಲ್ಲಿ ರಾಜ್ಯಪಾಲರು ಮಾಡಿದ್ದ ಲೋಕಾಯುಕ್ತ ನೇಮಕಾತಿಯನ್ನು ಕೋರ್ಟ್ ಎತ್ತಿಹಿಡಿದಿತ್ತು. ಆದರೆ ಇದರಿಂದ ಅಸಮಾಧಾನಗೊಂಡಿರುವ ನ್ಯಾ. ಮೆಹತಾ ಅವರು ತಮ್ಮ ವಿಶ್ವಾಸಾರ್ಹತೆ ಮತ್ತು ಸಮಗ್ರತೆಯನ್ನು ಪ್ರಶ್ನಿಸಲಾಗಿದೆ. ಹೀಗಾಗಿ ನಾನು ಆ ಸ್ಥಾನದಲ್ಲಿ ಕೂರುವುದು ಮುಜುಗರ ತರುತ್ತಿದೆ ಎಂದು ಲೋಕಾಯುಕ್ತ ಸ್ಥಾನವನ್ನು ಒಲ್ಲೆ ಅಂದಿದ್ದಾರೆ.
ರಾಜ್ಯಪಾಲರಿಗೆ ಮತ್ತು ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಪತ್ರ ಬರೆದಿರುವ ಅವರು ರಾಜ್ಯ ಸರ್ಕಾರದ ನಿಲುವುಗಳಿಂದಾಗಿ ನಾನು ಹುದ್ದೆ ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಲೋಕಾಯುಕ್ತ ನೇಮಕ ವಿಚಾರ ಗುಜರಾತ್ ಕೋರ್ಟುಗಳಿಂದ ಸುಪ್ರೀಂಕೋರ್ಟಿನರೆಗೂ ಹೋಗಿದೆ. ಈ ಸಂದರ್ಭದ ಮನವಿ, ಮೇಲ್ಮನವಿಗಳಿಂದಾಗಿ ವಿಚಾರಣೆಯ ಪ್ರಕ್ರಿಯೆಗೇ 45ಕೋಟಿ ರೂ. ಗಳಷ್ಟು ಸಾರ್ವಜನಿಕ ಹಣ ಖರ್ಚಾಗಿದೆ. ಇದರ ಅಗತ್ಯ ಇತ್ತೇ? ಇದೆಲ್ಲಾ ಬೆಳವಣಿಗೆಗಳು ನನ್ನ ಮನಸ್ಸಿಗೆ ನೋವು ತಂದಿದೆ ಹಾಗೂ ಕಣ್ಣು ತೆರೆಸಿವೆ ಎಂದು ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಬಡವರ ಪರ ಮತ್ತು ಸ್ವಂತ ನಿರ್ಧಾರಗಳನ್ನು ಮಾಡುವ ವ್ಯಕ್ತಿತ್ವ ಹೊಂದಿರುವ ಮೆಹತಾ ಸರ್ಕಾರದ ವಿರೋಧಿ ಎನ್ನುವ ಕಾರಣಕ್ಕಾಗಿ ಕಳೆದ 2011 ರಿಂದಲೂ ಇವರ ನೇಮಕಕ್ಕೆ ರಾಜ್ಯ ಸರ್ಕಾರ ಆಕ್ಷೇಪ ಎತ್ತಿತ್ತು.
2003ರಿಂದ ಖಾಲಿ ಇದ್ದ ಲೋಕಾಯುಕ್ತಕ್ಕೆ 2011ರಲ್ಲಿ ರಾಜ್ಯಪಾ ಡಾ. ಕಮಲ ಅವರು ನ್ಯಾಯಮೂರ್ತಿ ಮೆಹತಾ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದರು. ಇದನ್ನು ಗುಜರಾತ್ ಸರ್ಕಾರ ಸುಪ್ರೀಂಕೋರ್ಟಿನಲ್ಲೂ ಪ್ರಶ್ನಿಸಿತ್ತು. ಕಳೆದ ಜುಲೈನಲ್ಲಿ ವಿಚಾರಣೆ ಅಂತ್ಯಗೊಂಡ ನಂತರ ಮೆಹತಾ ಲೋಕಾಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು.












Click it and Unblock the Notifications