ರಂಜಾನ್ ಆಚರಣೆಗೂ ಮುನ್ನ ಟೆಕ್ಕಿ ದುರಂತ ಸಾವು

ದರ್ಗಾದಲ್ಲಿ ಶಬ್ಬೇಖಾದರ್ ಹಬ್ಬದ ಪ್ರಯುಕ್ತ ಜಾಗರಣೆ ಮುಗಿಸಿ 27 ವರ್ಷದ ಮಹಮ್ಮದ್ ತನ್ವೀರ್ ಅವರು ಹಿಂತಿರುಗುವಾಗ ವಾಹನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ. ಕುಪ್ಪಹಳ್ಳಿ ಸಮೀಪ ಜರುಗಿದ ಈ ಘಟನೆಯಲ್ಲಿ ಟೆಕ್ಕಿ ತನ್ವೀರ್ ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಎಸ್ ಎಸ್ ಎಜಿ ಐಟಿ ಕಂಪನಿಯ ಉದ್ಯೋಗಿಯಾಗಿದ್ದ ತನ್ವೀರ್ ಅವರು ವೆಂಕಟೇಶಪುರ ನಿವಾಸಿಯಾಗಿದ್ದರು. ಮಿಟ್ಸು ಭಿಷಿ ವಾಹನ ಮಾಡಿಕೊಂಡು ಸಂಬಂಧಿಕರಾದ ಅಜೀಜ್ ಖಾನ್, ಅಹ್ರಾರ್ ಅಹ್ಮದ್, ಜುಬೇದ ಅಹ್ಮದ್, ಮಹಮ್ಮದ್ ಲತೀಫ್, ಮಹಮ್ಮದ್ ಇಬ್ರಾಹಿಂ ಮುಂತಾದವರ ಜೊತೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗ್ರಾಮದ ಅಸ್ತಾನೆ ಹಜರತ್ ಸೈದಾನ ಸುಲ್ತಾನ ಜಹಂಗೀರ್ ಬಾದ್ ಶಾ ಖಾದ್ರಿ ರಾ ದರ್ಗಾಗೆ ಭೇಟಿ ನೀಡಿದ್ದರು.
ಕಳೆದ ರಾತ್ರಿ ಇಡೀ ಜಾಗರಣೆಯಲ್ಲಿ ತೊಡಗಿದ್ದ ತನ್ವೀರ್ ಮುಂಜಾನೆ 3.45ರ ಸುಮಾರಿಗೆ ಬೆಂಗಳೂರು ಕಡೆಗೆ ಹೊರಟಿದ್ದಾರೆ. ಆದರೆ, ದುರುದೃಷ್ಟ ಅವರ ಬೆನ್ನ ಬಿದ್ದಿದ್ದು, ದರ್ಗಾ ಬಿಟ್ಟ ಐದು ನಿಮಿಷದೊಳಗೆ ನಂದಿ ರೈಲ್ವೆ ಗೇಟ್ ಬಳಿಯ ಕುಪ್ಪಹಳ್ಳಿ ಕ್ರಾಸ್ ಸಮೀಪ ಇವರಿದ್ದ ವಾಹನ ಪಲ್ಟಿ ಹೊಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಹಳ್ಳಕ್ಕೆ ಮಗುಚಿ ಬಿದ್ದಿದೆ.
ವಾಹನ ಪಲ್ಟಿಯಾದ ರಭಸಕ್ಕೆ ಬೆಂಕಿಹೊತ್ತಿಕೊಂಡಿದೆ. ತಕ್ಷಣ ವಾಹನದಲ್ಲಿದ ಕೆಲವರು ಕಿಟಕಿ ಮೂಲಕ ಹೊರ ಹಾರಿದ್ದಾರೆ. ಆದರೆ, ಸುಟ್ಟಗಾಯಗಳಿಂದ ತೀವ್ರವಾಗಿ ನೋವು ತಿಂದಿದ್ದ ತನ್ವೀರ್ ಅವರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆಯಲಿ ಅಸುನೀಗಿದ್ದಾರೆ. ವಾಹನದಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಹಾಗೂ ಆಸ್ಪತ್ರೆಗೆ ಭೇಟಿ ನೀಡಿದ ಸರ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಕುಮಾರ್ ಅವರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.












Click it and Unblock the Notifications