ವಿದ್ಯಾರ್ಥಿ ನೆನಪಲ್ಲಿ ಸಾವಿಗೆ ಶರಣಾದ ಉಪನ್ಯಾಸಕ!

ತಮಕೂರಿನ ಸಿದ್ಧಗಂಗಾ ವಾಣಿಜ್ಯ ಕಾಲೇಜಿನ ಉಪನ್ಯಾಸಕ ಸುನೀಲ್ (30) ಆತ್ಮಹತ್ಯೆ ಮಾಡಿಕೊಂಡವರು. ಶುಕ್ರವಾರ ರಾತ್ರಿ ಸುನೀಲ್ ನೇಣಿಗೆ ಶರಣಾಗಿದ್ದು, ಶನಿವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ.
ಸುನೀಲ್ ಬರೆದಿರುವ ಡೆತ್ ನೋಟ್ ನಲ್ಲಿ ನೆಚ್ಚಿನ ವಿದ್ಯಾರ್ಥಿ ಅಗಲಿಕೆಯಿಂದ ನೊಂದು, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಸಿದ್ದಗಂಗಾ ಮಠಕ್ಕೂ ಇಂತಹ ಪತ್ರವನ್ನು ಬರೆದು ಕಳುಹಿಸಿದ್ದಾರೆ.
ಗುರು-ಶಿಷ್ಯರು ಯಾರು : ಮಂಚಲ್ ಗುಪ್ಪೆಯ ನಿವಾಸಿಯಾಗಿದ್ದ ರಾಕೇಶ್ ಸಿದ್ಧಗಂಗಾ ವಾಣಿಜ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಚೆನ್ನಾಗಿ ಓದುತ್ತಿದ್ದ ರಾಕೇಶ್ ಉಪನ್ಯಾಸಕ ಸುನೀಲ್ ಅವರ ನೆಚ್ಚಿನ ಶಿಷ್ಯನಾಗಿದ್ದ.
ಸುನೀಲ್ ಹತ್ತಿರ ಟ್ಯೂಷನ್ ಗೂ ರಾಕೇಶ್ ಬರುತ್ತಿದ್ದರು. ಗುರು-ಶಿಷ್ಯರ ನಡುವೆ ತುಂಬಾ ಆತ್ಮೀಯತೆ ಇತ್ತು. ರಾಕೇಶ್ ನೆಚ್ಚಿನ ಉಪನ್ಯಾಸಕರಾಗಿಗಾಗಿ ಜರ್ಕಿನ್ ಮತ್ತು ವಾಚ್ ಗಳನ್ನು ಉಡುಗೊರೆಯಾಗಿಯೂ ನೀಡಿದ್ದರು.
ಆದೆರೆ, ಗುರುವಾರ ಮಂಚಲ್ ಗುಪ್ಪೆಯಲ್ಲಿ ಮೋಟಾರ್ ಆನ್ ಮಾಡಲು ಹೋದ ರಾಕೇಶ್ ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದ್ದರು. ನೆಚ್ಚಿನ ಶಿಷ್ಯನ ಸಾವಿನ ಸುದ್ದಿಕೇಳಿ ಸ್ಥಳಕ್ಕೆ ತೆರಳಿದ್ದ ಸುನೀಲ್, ಶಿಷ್ಯನ ಅಂತ್ಯಸಂಸ್ಕಾರ ಮುಗಿಸಿ ತುಮಕೂರಿಗೆ ಮರಳಿದ್ದರು.
ನೆಚ್ಚಿನ ಶಿಷ್ಯನ ಸಾವು ಅವರನ್ನು ದುಖಃದ ಮಡುವಿಗೆ ತಳ್ಳಿತ್ತು. ಎರಡು ದಿನ ಕಾಲೇಜಿಗೆ ರಜೆ ತೆಗೆದುಕೊಂಡಿದ್ದ ಸುನೀಲ್, ಕೊಠಡಿಯಲ್ಲಿ ದಿನ ಕಳೆದಿದ್ದರು. ಶುಕ್ರವಾರ ಬೆಳಗ್ಗೆ, ರಾಕೇಶ್ ಸಮಾಧಿ ಸ್ಥಳಕ್ಕೆ ಹೋಗಿ ರಾತ್ರಿ ತುಮಕೂರಿಗೆ ಮರಳಿದ್ದರು.
ಶುಕ್ರವಾರ ರಾತ್ರಿ ಸಿದ್ಧಗಂಗಾ ಮಠದ ಆಡಳಿತ ಮಂಡಳಿಗೆ ಪತ್ರ ಬರೆದು ಸುನೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಕೊಠಡಿಯಲ್ಲೂ ಒಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಬೆಳಗ್ಗೆ ಮಠದ ಅಧಿಕಾರಿಗಳು ಪತ್ರ ನೋಡಿ, ಸುನೀಲ್ ಕೊಠಡಿಗೆ ಆಗಮಿಸಿದಾಗ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಲಾಸ್ಟ್ ಲೈನ್ : ಸುನೀಲ್ ತಮ್ಮ ಡೆತ್ ನೋಟ್ ನಲ್ಲಿಯ ಕೊನೆಯದಾಗಿ ತಮ್ಮ ಮನದ ಬಯಕೆ ಹೇಳಿದ್ದಾರೆ. ಅವರ ಕೊನೆಯ ಆಸೆಯಂತೆ ರಾಕೇಶ್ ಸಮಾಧಿ ಪಕ್ಕದಲ್ಲೇ ತಮ್ಮ ಅಂತ್ಯ ಸಂಸ್ಕರ ಮಾಡುವಂತೆ ಮನವಿ ಮಾಡಿದ್ದಾರೆ. ತಂದೆ-ತಾಯಿಗೆ ಸುನೀಲ್ ಒಬ್ಬರೇ ಮಗನಾಗಿದ್ದು, ಪುತ್ರನ ಸಾವಿನ ಸುದ್ದಿ ಕೇಳಿ ಅವರು ಅಘಾತ ಗೊಂಡಿದ್ದಾರೆ.












Click it and Unblock the Notifications