ವಿಧಾನಪರಿಷತ್ ಚುನಾವಣೆಗೆ ವಾಟಾಳ್ ನಾಗರಾಜ್ ಸ್ಪರ್ಧೆ

ಶುಕ್ರವಾರ ಬೆಂಗಳೂರಿನಲ್ಲಿ ಮಾತನಾಡಿದ ವಾಟಾಳ್ ನಾಗರಾಜ್, ವಿಧಾನ ಪರಿಷತ್ತಿನಲ್ಲಿ ನಾಡು-ನುಡಿಯ ಬಗ್ಗೆ ಧ್ವನಿ ಎತ್ತುವವರು ಇಲ್ಲದಂತಾಗಿದೆ. ಆದ್ದರಿಂದ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತೇನೆ, ಎಲ್ಲಾ ಪಕ್ಷಗಳು ನನಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಎಲ್ಲಾ ಪ್ಷಕಗಳಿಗೂ ನಾನು ಬೆಂಬಲ ನೀಡಿದ್ದೇನೆ. ಆದ್ದರಿಂದ ಎಲ್ಲಾ ರಾಜಕೀಯ ಪಕ್ಷಗಳು ನನಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ಶಾಸನ ಸಭೆವೊಳಗೆ ಕನ್ನಡದ ಬಗ್ಗೆ ಮಾತನಾಡುವ ಯಾವ ಶಾಸಕರು ಇಲ್ಲ ಎಂದು ವಾಟಾಳ್ ಆರೋಪಿಸಿದರು.
ಕಾಂಗ್ರೆಸ್ ಪಕ್ಷದ ಬಿ.ಕೆ.ಹರಿಪ್ರಸಾದ್, ಎಸ್.ಎಂ.ಕೃಷ್ಣ, ಶ್ರೀನಿವಾಸ್ ಪ್ರಸಾದ್ ಮುಂತಾದವರು ವಿಧಾನಪರಿಷತ್ತಿಗೆ ಆಯ್ಕೆಯಾಗುವಾಗ ನಾನು ಅವರಿಗೆ ಬೆಂಬಲ ನೀಡಿದ್ದೇನೆ. ಆದ್ದರಿಂದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಬೆಂಬಲ ನೀಡುವಂತೆ ಮನವಿ ಮಾಡಲಿದ್ದೇನೆ ಎಂದರು.
ರಾಜ್ಯದ ಪ್ರಗತಿ ಪರ ಚಿಂತಕರು, ಸಾಹಿತಿಗಳು ಚುನಾವಣೆಗೆ ನಿಲ್ಲುವಂತೆ ನನಗೆ ಒತ್ತಾಯಿಸುತ್ತಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲವಿಲ್ಲದೆ ಗೆಲ್ಲುವುದು ಅಸಾಧ್ಯ ಆದ್ದರಿಂದ ಎಲ್ಲಾ ಪಕ್ಷಗಳ ಬೆಂಬಲ ಕೋರುತ್ತಿರುವುದಾಗಿ ಹೇಳಿದರು.
ಕೊನೆವರೆಗೆ ಹೋರಾಟ : ವಿಧಾನ ಪರಿಷತ್ತಿನ ಚುನಾವಣೆಗೆ ನಾಮಪತ್ರ ಸಲ್ಲಿಸಲು ಆ.5 ಕೊನೆಯ ದಿನವಾಗಿದ್ದು, ಅಲ್ಲಿಯವರೆಗೂ ಪಕ್ಷಗಳ ಮನವೊಲಿಸಲು ಪ್ರಯತ್ನಿಸುವುದಾಗಿ ವಾಟಾಳ್ ನಾಗರಾಜ್ ಹೇಳಿದರು. ಎಲ್ಲಾ ಪಕ್ಷಗಳು ತಮಗೆ ಬೆಂಬಲ ನೀಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications