ಅತ್ತೆ ಮೇಲಿನ ಕೋಪಕ್ಕೆ ಲಾರಿ ಹತ್ತಿಸಿಕೊಂದ ಅಳಿಯ

ತಲಘಟ್ಟಪುರದ ನಿವಾಸಿಯಾದ ಚಂದ್ರಶೇಖರ್ (25) ಕೆಂಗೇರಿಯ ನೈಸ್ ರಸ್ತೆ ಸಮೀಪ ಅತ್ತೆ, ಮಾವ ಮತ್ತು ಹೆಂಡತಿ ಪ್ರಯಾಣಿಸುತ್ತಿದ್ದ ಬೈಕ್ ಗೆ ಲಾರಿಯನ್ನು ಡಿಕ್ಕಿ ಹೊಡೆದಿದ್ದಾನೆ. ಲಾರಿ ಗುದ್ದಿದ ರಭಸಕ್ಕೆ ಅತ್ತೆ ಆದಿ ಲಕ್ಷಮ್ಮ(47) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮಾವ ಮತ್ತು ಚಂದ್ರಶೇಖರ್ ಪತ್ನಿ ಮಂಜುಳಾ ಅಪಘಾತದಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅತ್ತೆ ತನ್ನನ್ನು ಜೈಲಿಗೆ ಕಳುಹಿಸಿದರು ಎಂದು ಕೊಲೆ ಮಾಡಿದ್ದಾಗಿ, ಚಂದ್ರಶೇಖರ್ ಒಪ್ಪಿಕೊಂಡಿದ್ದಾರೆ.
ಘಟನೆ ಏನು : ಚಂದ್ರಶೇಖರ್ ಮತ್ತು ಮಂಜುಳಾ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ, ಒಂದು ವರ್ಷ ಸಂಸಾರ ಮಾಡಿದ ಮಂಜುಳಾ ನಂತರ ತವರಿಗೆ ಹಿಂದಿರುಗಿದ್ದಳು. ಗಂಡ ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾನೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಳು.
ದೂರಿನ ಆಧಾರದ ಮೇಲೆ ಚಂದ್ರಶೇಖರ್ ನನ್ನು ಪೊಲೀಸರು ಬಂಧಿಸಿದ್ದರು. ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಿ ಆತ ಕೆಲವು ದಿನಗಳ ಹಿಂದೆ ಹೊರಗೆ ಬಂದಿದ್ದ. ಜೈಲಿನಿಂದ ಬಂದನವೇ ಡೈವೋರ್ಸ್ ಗಾಗಿ ಅರ್ಜಿ ಹಾಕಿದ್ದ.
ಆದರೆ, ಚಂದ್ರಶೇಖರ್ ಜೊತೆ ಮಾತುಕತೆ ನಡೆಸಿದ್ದ ಮಂಜುಳಾ ಕುಟುಂಬದವರು ಡೈವೋರ್ಸ್ ಅರ್ಜಿ ಹಿಂಪಡೆದರೆ, ಮಂಜುಳಾರನ್ನು ನಿನ್ನ ಜೊತೆ ಕಳುಹಿಸುವುದಾಗಿ ಹೇಳಿದ್ದರು. ಅವರ ಮಾತನ್ನು ನಂಬಿದ ಚಂದ್ರಶೇಖರ್ ಡೈವೋರ್ಸ್ ಅರ್ಜಿ ಹಿಂಪಡೆದಿದ್ದ.
ಅರ್ಜಿ ಹಿಂಪಡೆದರೂ ಮಂಜುಳಾ ಮಾತ್ರ ಆತನ ಜೊತೆಗೆ ಬಂದು ವಾಸಿಸಲಿಲ್ಲ. ಇದರಿಂದ ಕೆರಳಿದ ಆತ ಅತ್ತೆಯ ಬಳಿ ಗಲಾಟೆ ಮಾಡಿದ್ದ. ಅವರು ಮತ್ತೆ ಪೊಲೀಸರಿಗೆ ದೂರು ಕೊಡುತ್ತೇವೆ ಎಂದು ಚಂದ್ರಶೇಖರ್ ಅವರಿಗೆ ಬೆದರಿಸಿ ಕಳಿಸಿದ್ದರು.
ಇದರಿಂದ ಕೆರಳಿದ ಆತ ಅತ್ತೆ, ಮಾವ ಮತ್ತು ಹೆಂಡತಿಯನ್ನು ಕೊಲ್ಲಲು ಸಂಚು ರೂಪಿಸಿದ್ದ. ಬುಧವಾರ ರಾತ್ರಿ ಮೂವರು ಬೈಕ್ ನಲ್ಲಿ ಹೋಗುವಾಗ ಅವರಿಗೆ ಲಾರಿಯಲ್ಲಿ ಬಂದು ಡಿಕ್ಕಿ ಹೊಡೆದಿದ್ದಾನೆ. ಮತ್ತೆ ಹಿಂದೆ ಬಂದು ಅತ್ತೆಯ ಮೇಲೆ ಲಾರಿ ಹತ್ತಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಪ್ರಕರಣದ ದಾಖಲಿಸಿಕೊಂಡು ತನಿಖೆ ನಡೆಸಿದ ಕೆಂಗೇರಿ ಪೊಲೀಸರು ಗುರುವಾರ ಬೆಳಗ್ಗೆ ಚಂದ್ರಶೇಖರನನ್ನು ಬಂಧಿಸಿದ್ದಾರೆ. ಮೂವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ.












Click it and Unblock the Notifications