ಸಾಲ ಬಾಧೆ: ಚಿಗುರು ನಿರ್ದೇಶಕ ಆತ್ಮಹತ್ಯೆ

ಆತ ಗುಡ್ಡೆ ಹಾಕಿಕೊಂಡಿದ್ದ ಸಾಲದ ಮೊತ್ತ ವಿಪರೀತವಾಗಿ ಕರುವೈ ಚಿತ್ರವನ್ನು ಅರ್ಧಕ್ಕೇ ಕೈಬಿಟ್ಟಿದ್ದರು. ಕಬಿಲನ್ ಚೆನ್ನೈನ ತಮ್ಮ ಅಪಾರ್ಟ್ ಮೆಂಟಿನಲ್ಲಿ ಸೋಮವಾರ ರಾತ್ರಿ ನೇಣು ಹಾಕಿಕೊಂಡು ಸಾವಿಗೀಡಾಗಿದ್ದಾರೆ.
ಹಲವು ಕಿರು ಚಿತ್ರಗಳನ್ನು ನಿರ್ಮಿಸಿದ್ದ ನಿರ್ದೇಶಕ ಕಬಿಲನ್, 2012ರಲ್ಲಿ ಕರುವೈ ಚಿತ್ರ ನಿರ್ದೇಶನದಲ್ಲಿ ತೊಡಗಿದರು. ಆದರೆ ಚಿತ್ರದ ನಿರ್ಮಾಪಕರು ಮತ್ತು ಕಬಿಲನ್ ಮಧ್ಯೆ ಭಿನ್ನಾಭಿಪ್ರಾಯ ಭುಗಿಲೆದ್ದು, ಚಿತ್ರ ಅರ್ಧಕ್ಕೇ ನಿಂತುಹೋಗಿತ್ತು.
ಪತ್ನಿ ಸತ್ಯವತಿ ಜತೆಗೂಡಿ ಕಳೆದ ವಾರಾಂತ್ಯ ಆಕೆಯ ತವರು ಮನೆಗೆ ಹೋಗಿದ್ದರು. ಆದರೆ ವಾಪಸು ಒಬ್ಬರೇ ತಮ್ಮ ಮನೆಗೆ ವಾಪಸಾಗಿ ಮಸಣದ ಹಾದಿ ಹಿಡಿದಿದ್ದಾರೆ. ಸಾಯುವ ಮುನ್ನ ಪತ್ನಿ ಸತ್ಯವತಿಗೆ ಫೋನ್ ಮಾಡಿದ ಕಬಿಲನ್, ಸಾಲದ ಸುಳಿಯಿಂದ ಕಂಗೆಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಚಿತ್ರ ಪೂರ್ಣವಾಗದಿರುವುದರ ಬಗ್ಗೆ ದುಃಖ ತೋಡಿಕೊಂಡಿದ್ದಾರೆ. ಸಾಲ ವಿಪರೀತವಾಗುತ್ತಿದ್ದು, ಇನ್ನು ಬಾಳು ನಡೆದುವುದು ದುಸ್ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.
ಕೊನೆಗೆ, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿಯೂ ಹೇಳಿ ಫೋನ್ ಡಿಸ್ ಕನೆಕ್ಟ್ ಮಾಡಿದ್ದಾರೆ. ತತ್ ಕ್ಷಣ ಪತ್ನಿ ಸತ್ಯವತಿ ಮನೆಗೆ ವಾಪಸಾಗಿದ್ದಾರೆ. ಆದರೆ ಕಬಿಲನ್, ಒಳಗಿನಿಂದ ಚಿಲಕ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪಕ್ಕದ ಮನೆಯವರ ನೆರವಿನೊಂದಿಗೆ ಬಾಗಿಲು ಹೊಡೆದು ಹಾಕಿ ಒಳಬಂದು ನೋಡಿದಾಗ ಪತಿರಾಯ ಕಬಿಲನ್ ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡಿರುವುದು ಕಂಡು ಸತ್ಯವತಿ ಕುಸಿದುಬಿದ್ದಿದ್ದಾರೆ.












Click it and Unblock the Notifications