ರೆಡ್ಡಿ ಗುಳುಂ ಮಾಡಿದ್ದ ರಸ್ತೆ ಮತ್ತೆ ಸಾರ್ವಜನಿಕರಿಗೆ

ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸಚಿವನಾಗಿ ಅಧಿಕಾರದಲ್ಲಿದ್ದಾಗ ಬಳ್ಳಾರಿಯ ಜನ ದಿನಾ ಓಡಾಡುತ್ತಿದ್ದ ರಸ್ತೆಯ ಜಾಗವನ್ನು ತನ್ನ ಮನೆಯೊಳಕ್ಕೆ ಸೇರಿಸಿಕೊಂಡಿದ್ದೂ ಅಲ್ಲದೆ ಸರಕಾರಿ ದಾಖಲೆಯ ಭೂಪಟದಿಂದ ಅದನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ.
ರೆಡ್ಡಿ ದರ್ಬಾರು ನಡೆಯುತ್ತಿದ್ದಾಗ ಆತನ ವಿರುದ್ಧ ಯಾರೂ ದನಿಯೆತ್ತುತ್ತಿರಲಿಲ್ಲ. ಆದರೆ ಈಗ ಕಾಲ ಬದಲಾಗಿದೆ. ರೆಡ್ಡಿ ಸಾಮ್ರಾಜ್ಯ ಕಳೆಗುಂದಿದೆ. ಸಾರ್ವಜನಿಕ ರಸ್ತೆಯನ್ನು ತನ್ನ ಮನೆಗೆ ದಕ್ಕಿಸಿಕೊಂಡಿದ್ದ ರೆಡ್ಡಿಯ ಕುಠೀರ ಈಗ ಹಾಳು ಹಂಪಿಯಂತಾಗಿದೆ.
ಜನಸಮಾನ್ಯರು ರೆಡ್ಡಿಗಾರು ವಿರುದ್ಧ ಸೊಲ್ಲೆತ್ತುತ್ತಿದ್ದಾರೆ. ಅದರಲ್ಲೂ ಅರ್ಚಕರೊಬ್ಬರು ಲೋಕಾಯುಕ್ತಕ್ಕೆ ದೂರುವಷ್ಟರ ಮಟ್ಟಿಗೆ ಕಾಲಚಕ್ರ ಉರುಳಿದೆ.
ರೆಡ್ಡಿಯ ಕುಠೀರದ ಸಮೀಪವಿರುವ ಆಂಜನೇಯನ ಗುಡಿಯ ಪೂಜಾರಿ ತಿಮ್ಮಯ್ಯ ಅವರು ಇತ್ತೀಚೆಗೆ 'ಸಚಿವ ರೆಡ್ಡಿ ಸಾರ್ವಜನಿಕ ರಸ್ತೆಯನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡಿರುವುದೂ ಅಲ್ಲದೆ ಮುಂದೆ ಯಾರೂ ಅದರ ವಿರುದ್ಧ ತಕರಾರು ಎತ್ತಬಾರದು ಎಂದು ಜಿಲ್ಲಾ ಭೂಪಟದಿಂದ ಅದನ್ನು ಅಳಿಸಿ ಹಾಕುವಲ್ಲಿಯೂ ಯಶಸ್ವಿಯಾಗಿದ್ದರು.
ಇದರಿಂದ ಭಕ್ತಾಧಿಗಳು ದೇವಸ್ಥಾನಕ್ಕೆ ಬಂದುಹೋಗುವುದು ನಿಂತುಹೋಗಿದೆ. ಈ ಬಗ್ಗೆ ನ್ಯಾಯ ಒದಗಿಸಿಕೊಡಿ' ಎಂದು ಉಪ ಲೋಕಾಯುಕ್ತ ಸುಭಾಷ್ ಬಿ ಆದಿ ಅವರಿಗೆ ಮನವಿ ಮಾಡಿಕೊಂಡಿದ್ದರು.
ದಾಖಲೆಗಳನ್ನು ಪರಾಮರ್ಶಿಸಿದ ನ್ಯಾಯಮೂರ್ತಿ ಆದಿ ಅವರು ರಸ್ತೆಯನ್ನು ಮತ್ತೆ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಿ, ತನಿಖೆ ನಡೆಸುವಂತೆ ಆಜ್ಞಾಪಿಸಿದ್ದಾರೆ. ಈ ಸಂಬಂಧ ಜುಲೈ 17 ರಂದು ರೆಡ್ಡಿಯ ವಿರುದ್ಧ ದೂರು ಸಹ ದಾಖಲಾಗಿದೆ. ಜಿಲ್ಲಾಧಿಕಾರಿ ಆದಿತ್ಯ ಅಮ್ಲಾನ್ ಬಿಸ್ವಾಸ್ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.












Click it and Unblock the Notifications