ಮೋದಿ, ಆರೆಸ್ಸೆಸ್ ವಿರುದ್ಧ ಮತ್ತೆ ಹರಿಹಾಯ್ದ ಪ್ರೊ. ಜಿಕೆ
ದಾವಣಗೆರೆ, ಜುಲೈ29: ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ, ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಹಿರಿಯ ಚಿಂತಕ ಪ್ರೊ. ಜಿಕೆ ಗೋವಿಂದರಾವ್ ಮತ್ತೆ ಕಿಡಿಕಾರಿದ್ದಾರೆ. ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾದರೆ ದೇಶಕ್ಕೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಪ್ರೊ ಜಿಕೆ ಜರಿದಿದ್ದಾರೆ.
'ಗುಜರಾತ್ ಮುಖ್ಯಮಂತ್ರಿ ಮೋದಿ ಅವರು 2500 ಮಂದಿ ಅಮಾಯಕ ಮುಸ್ಲಿಮರ ಸಾವಿಗೆ ಕಾರಣರಾಗಿದ್ದಾರೆ. ಪ್ರಗತಿ ಮತ್ತು ಅಭಿವೃದ್ಧಿ ಮಂತ್ರ ಜಪಿಸುವ ಬಿಜೆಪಿಯವರು 2500 ಜನರ ಸಾವಿಗೆ ಕಾರಣರಾಗಿರುವ ನರೇಂದ್ರ ಮೋದಿಯನ್ನು ಈ ದೇಶದ ಪ್ರಧಾನಮಂತ್ರಿ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ.
ಅಂತಹವರು ಈ ದೇಶದ ಪ್ರಧಾನಮಂತ್ರಿಯಾದರೆ ಕಷ್ಟ ಕಷ್ಟ' ಎಂದು 'ತಳ ಸಮುದಾಯಗಳು ಮತ್ತು ಪ್ರಸ್ತುತ ರಾಜಕೀಯ' ಕುರಿತು ಹಮ್ಮಿಕೊಂಡಿದ್ದ ವಿಚಾರಣ ಸಂಕಿರಣ ಉದ್ಘಾಟಿಸಿದ ಸಂದರ್ಭದಲ್ಲಿ ಅವರು ಹೀಗೆ ಅಭಿಪ್ರಾಯಪಟ್ಟರು. ನಗರದ ನರಹರಿ ಶೇಟ್ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾ ಕುರುಬರ ಸಂಘ ಮತ್ತು ಜಿಲ್ಲಾ ಅಹಿಂದ ಘಟಕ ಈ ವಿಚಾರಣ ಸಂಕಿರಣವನ್ನು ಹಮ್ಮಿಕೊಂಡಿತ್ತು.

ಸಂಘ ಪರಿವಾರದ ಹಿನ್ನೆಲೆಯೇನು?:
'ಬ್ರಿಟೀಷರು ನಮ್ಮ ದೇಶ ಬಿಟ್ಟು ಹೋದ ಮೇಲೆ ಅಧಿಕಾರ, ಸೌಲಭ್ಯಗಳು ನಮ್ಮ ಕೈಬಿಟ್ಟು ಹೋಗಬಾರದು ಎಂಬ ಹಿನ್ನೆಲೆಯಲ್ಲಿ 1925ರಲ್ಲಿ ಸಂಘ ಪರಿವಾರ ಹುಟ್ಟಿತು. ಉನ್ನತ ವರ್ಗ, ಉಳ್ಳವರು, ಪ್ರಭಾವವುಳ್ಳವರು ಸಂಘ ಪರಿವಾರದ ಸದಸ್ಯರಾಗಿದ್ದಾರೆಯೇ ಹೊರತು, ದಲಿತರು, ಶೋಷಿತರು, ಅಲ್ಪಸಂಖ್ಯಾತರಿಗೆ ಅವಕಾಶ ಇರಲಿಲ್ಲ.

ಸಂಘ ಪರಿವಾರ ಮಾಡುತ್ತಿರುವುದೇನು?:
ಸಂಘ ಪರಿವಾರ ಸಾವಿರಾರು ವರ್ಷಗಳಿಂದ ಕೆಲ ಸಮುದಾಯಗಳನ್ನು ಹುಳಗಳನ್ನಾಗಿ ಕಂಡಿದೆ. ಇತ್ತೀಚಿನ ದಿನಗಳಲ್ಲಿ ದಲಿತರು, ಶೋಷಿತರು, ಅಲ್ಪಸಂಖ್ಯಾತರು ಸಂಘ ಪರಿವಾರದ ಒಂದು ಭಾಗವಾಗಿರುವ ಬಿಜೆಪಿ ಸೇರುತ್ತಿರುವುದು ದುರಂತ ಸಂಗತಿ. ಹೀಗಾಗಿ ಕೆಲ ಸಮುದಾಯಗಳನ್ನು ಎಚ್ಚರಿಸುವ ಸಲುವಾಗಿ ಕರಪತ್ರ ಮತ್ತು ಚರ್ಚೆಗಳ ಮೂಲಕ ಜಾಗೃತಿ ಮೂಡಿಸಬೇಕಾಗಿದೆ ಎಂದು ಸಂಘ ಪರಿವಾರದ ವಿರುದ್ಧವೂ ಪ್ರೊ. ಜಿಕೆ ಗೋವಿಂದರಾವ್ ಕ್ರೋಧ ವ್ಯಕ್ತಪಡಿಸಿದ್ದಾರೆ.

ಮೋದಿ ವಿರುದ್ಧ ಉರ್ದು ಪತ್ರ ಅಭಿಯಾನ
ಅದಕ್ಕಾಗಿ ನಾನು ಕನ್ನಡದಲ್ಲಿ ಪತ್ರ ಬರೆದು ಉರ್ದುಗೆ ತರ್ಜುಮೆ ಮಾಡಿ ಪ್ರತಿಯೊಬ್ಬ ಅಲ್ಪಸಂಖ್ಯಾತರಿಗೆ ಹಂಚುವ ಮೂಲಕ ನರೇಂದ್ರ ಮೋದಿಯನ್ನು ದೂರವಿಡಬೇಕೆಂಬ ಅಭಿಯಾನ ನಡೆಸಲಾಗುವುದು ಎಂದೂ ಪ್ರೊ. ಜಿಕೆ ತಿಳಿಸಿದರು.

ದಲಿತ ನಾಯಕ ಅಧ್ಯಕ್ಷ ಪದವಿಯಿಂದ ಇಳಿದ ಪ್ರಸಂಗ
'ಬಿಜೆಪಿಯವರು ನಾವು ಜಾತ್ಯತೀತರು ಎಂಬುದಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಈ ಹಿಂದೆ ದಲಿತ ನಾಯಕನನ್ನು ಬಿಜೆಪಿ ರಾಷ್ಟ್ರ ಅಧ್ಯಕ್ಷರನ್ನಾಗಿ ಮಾಡಿದರು. ಅದೇ ರೀತಿ ಲಂಚ ಪಡೆಯುವ ರೀತಿ ನಾಟಕ ಮಾಡಿಸಿ ವ್ಯವಸ್ಥಿತ ಹುನ್ನಾರದಿಂದ ಅವರನ್ನು ಕೆಳಗಿಳಿಸಿ ಮನೆಗೆ ಕಳುಹಿಸಿದರು. ನೀವು ಕೂಡ ಬಿಜೆಪಿಗೆ ಸೇರಿದರೆ ಅದೇ ಗತಿ ಬರುತ್ತದೆ' ಎಂದು ಜಿಕೆ ಎಚ್ಚರಿಸಿದರು.












Click it and Unblock the Notifications