ನಟ ಸಲ್ಮಾನ್ ಖಾನ್ ಗೆ 10 ವರ್ಷ ಶಿಕ್ಷೆ ಭೀತಿ
ಮಂಬೈ, ಜು.24: ಸುಮಾರು 11 ವರ್ಷಗಳಷ್ಟು ಹಳೆಯದಾದ ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮೇಲೆ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಹಲವಾರು ಬಾರಿ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಸಲ್ಮಾನ್ ಗೆ ಈಗ ಬಂಧನ, ಶಿಕ್ಷೆ ಭೀತಿ ಕಾಡುತ್ತಿದೆ.
2002ರ ಹಿಟ್ ಅಂಡ್ ರನ್ ಕೇಸಿಗೆ ಸಂಬಂಧಿಸಿದಂತೆ ಬುಧವಾರ ವಿಚಾರಣೆ ಆರಂಭವಾಗಿದ್ದು, ಮುಂಬೈ ಪೊಲೀಸರು ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ. ಸಲ್ಮಾನ್ ಖಾನ್ ಅವರ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 304,337 ಸೇರಿದಂತೆ ಹಲವಾರು ಸೆಕ್ಷನ್ ಗಳಡಿಯಲ್ಲಿ ಆರೋಪ ಹೊರೆಸಲಾಗಿದೆ. ಆರೋಪಗಳು ಸಾಬೀತಾದರೆ 10 ವರ್ಷ ಜೈಲುಶಿಕ್ಷೆ ಗ್ಯಾರಂಟಿ.
ಸಲ್ಮಾನ್ ಖಾನ್ ಅವರಿದ್ದ ಲ್ಯಾಂಡ್ ಕ್ರೂಸರ್ ವಾಹನ ಸೆಪ್ಟೆಂಬರ್ 28, 2002ರಲ್ಲಿ ಫುಟ್ ಪಾತ್ ನಲ್ಲಿ ಮಲಗಿದ್ದವರ ಮೇಲೆ ಹರಿದಿತ್ತು. ಓರ್ವನ ಸಾವು, ನಾಲ್ವರು ಗಾಯಗೊಂಡಿದ್ದರು. ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮರ್ಡರ್ ಚಾರ್ಚ್ ಹಾಕಿ ಸಲ್ಮಾನ್ ವಿರುದ್ಧ ತೀರ್ಪು ಬಂದಿತ್ತು.

ಆದರೆ, ವಕೀಲ ಅಶೋಕ್ ಮುಂಡರಗಿ ಅವರು ಮ್ಯಾಜಿಸ್ಟ್ರೇಟ್ ಕೋರ್ಟ್ ನ ತೀರ್ಪನ್ನು ಪ್ರಶ್ನಿಸಿದ್ದರು, ಸಾಕ್ಷಿಗಳ(ಸುಮಾರು 17 ಸಾಕ್ಷಿಗಳ ವಿಚಾರಣೆ ನಡೆದಿತ್ತು) ವಿಚಾರಣೆ ಸರಿಯಾಗಿ ನಡೆದಿಲ್ಲ. ಸಲ್ಮಾನ್ ಅವರಿಗೆ ಕೊಲ್ಲುವ ಯಾವುದೇ ಉದ್ದೇಶ ಇರಲಿಲ್ಲ. ಇದೊಂದು ಅಪಘಾತ ಎಂಬುದನ್ನು ನ್ಯಾಯಾಧೀಶರು ಗಮನಿಸಬೇಕು ಎಂದು ವಾದಿಸಿದ್ದರು.
ಆದರೆ, ಕೋರ್ಟಿಗೆ ಹೊಸ ನ್ಯಾಯಾಧೀಶರು ಬರುವ ತನಕ ಈ ಪ್ರಕರಣವನ್ನು ಮುಂದೂಡಲಾಗಿದೆ. 'ಕಿಕ್' ಚಿತ್ರದ ಚಿತ್ರೀಕರಣಕ್ಕಾಗಿ ಲಂಡನ್ ಗೆ ತೆರಳಬೇಕಿದ್ದ ಸಲ್ಮಾನ್ ಗೆ ಕೊಂಚ ರಿಲೀಫ್ ಸಿಕ್ಕಿದೆ. ಜಾಕ್ವಲಿನ್ ಫರ್ನಾಂಡೀಸ್ ಜೊತೆ ಸಲ್ಮಾನ್ ಲಂಡನ್ ವಿಮಾನ ಹತ್ತುವ ಸಾಧ್ಯತೆಯಿದೆ. ಮುಂದಿನ ವಿಚಾರಣೆ ಆಗಸ್ಟ್ 19ರಂದು ನಡೆಯುವ ಸಾಧ್ಯತೆಯಿದ್ದು, ಸಲ್ಮಾನ್ ಖುದ್ದು ಹಾಜರಾತಿಗೂ ವಿನಾಯತಿ ಸಿಕ್ಕಿದೆ.
ಇದರ ಜೊತೆಗೆ ಹದಿನಾಲ್ಕು ವರ್ಷಗಳ ಹಿಂದೆ ರಾಜಸ್ತಾನದಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣದ ವಿಚಾರಣೆ ಜೋಧ್ ಪುರ ಕೋರ್ಟ್ ನಲ್ಲಿ ನಡೆದಿದೆ. 1998ರಲ್ಲಿ 'ಹಮ್ ಸಾಥ್ ಸಾಥ್ ಹೈ' ಚಿತ್ರೀಕರಣ ವೇಳೆ ಜೋಧಪುರ ಸಮೀಪದ ಹಳ್ಳಿಯೊಂದರ ಬಳಿ ಕೃಷ್ಣಮೃಗ ಭೇಟಿಯಾಡಿದ್ದ ಆರೋಪ ಸಲ್ಮಾನ್ ಸೇರಿದಂತೆ ಸೈಫ್ ಆಲಿ ಖಾನ್, ಟಬು, ನೀಲಂ ಹಾಗೂ ಸೋನಾಲಿ ಬೇಂದ್ರೆ ವಿರುದ್ಧ ಇದೆ.


Click it and Unblock the Notifications
