'ಯಡಿಯೂರಪ್ಪ ವಾಪಸ್ ಬಂದ್ರೆ ರಾಜ್ಯಕ್ಕೆ ಅನುಕೂಲವಾಗಲ್ಲ'

Yeddyurappa's return will not help Karnataka : KS Eshwarappa
ಶಿವಮೊಗ್ಗ, ಜು. 16 : ತಾವು ತಪ್ಪು ಮಾಡಿದ್ದರಿಂದ ಜನರಿಗೆ ಬೇಡವಾದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ವಿಧಾನಸೌಧದಲ್ಲಿ ಮಂಗಳವಾರ ಆಡಿದ ಮಾತುಗಳು ಅವರ ಬೆಂಬಲಿಗರಿಗೆ ಮಂಗಳಕರವಾಗಿರುವುದು ಎಷ್ಟು ನಿಜವೋ, ಕೆಲವರ ಹೃದಯದಲ್ಲಿ ಅವಲಕ್ಕಿ ಕುಟ್ಟಿದ ಹಾಗೆ ಆಗಿರುವುದು ಕೂಡ ನಿಜ.

ಇದು ಸಾಬೀತಾಗಿರುವುದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಬಾಯಿಯಿಂದ ಬಂದ ಮಾತುಗಳಿಂದ. ಯಡಿಯೂರಪ್ಪನವರು ಭಾರತೀಯ ಜನತಾ ಪಕ್ಷಕ್ಕೆ ಮರಳಿದರೆ ರಾಜ್ಯದ ಜನತೆಗೆ ಅನುಕೂಲವಾಗುವುದಿಲ್ಲ, ಪಕ್ಷಕ್ಕೂ ಒಳ್ಳೆಯದಾಗುವುದಿಲ್ಲ ಎಂದು ಹೇಳಿ, ಯಡಿಯೂರಪ್ಪನವರ ಸಂಭವನೀಯ ವಾಪಸಾತಿಗೆ ಅಡ್ಡಗಾಲು ಹಾಕಿದ್ದಾರೆ.

ಶಿವಮೊಗ್ಗದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ, ಯಡಿಯೂರಪ್ಪನವರು ತಾವು ಪಕ್ಷ ಬಿಟ್ಟು ದೊಡ್ಡ ತಪ್ಪು ಮಾಡಿದೆ ಎಂದು ವಿಧಾನಸೌಧದಲ್ಲಿ ಒಪ್ಕೊಂಡಿದ್ರಿಂದ ರಾಜ್ಯದ ಜನತೆಗೇನು ಅನುಕೂಲವಾಗಲ್ಲ, ಒಳ್ಳೆಯದೂ ಆಗಲ್ಲ ಎಂಬ ಮಾತನ್ನು ಹೇಳಿ ತಮಗೆ ಯಡಿಯೂರಪ್ಪ ವಾಪಸ್ ಬರುವುದು ಬೇಕಾಗಿಲ್ಲ ಎಂಬ ಅಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ತಾನು ಪಕ್ಷ ಬಿಟ್ಟು ಮಾಡುತ್ತಿರುವುದು ತಪ್ಪು ಎಂದು ಅವರಿಗೆ ಪಕ್ಷ ಬಿಡುವಾಗಲೇ ಅನ್ನಿಸಿರಲಿಲ್ಲವೆ ಎಂದು ಪ್ರಶ್ನಿಸಿರುವ ಈಶ್ವರಪ್ಪ ಅವರು, ಅವರು ಬಿಜೆಪಿ ತೊರೆಯುವುದರಿಂದ ರಾಜ್ಯದ ಜನತೆಗೆ, ಪಕ್ಷಕ್ಕೆ ಅನ್ಯಾಯವಾಗುತ್ತದೆಂದು ಅಂದೇ ಅನಿಸಬೇಕಾಗಿತ್ತು, ಈಗ ಜ್ಞಾನೋದಯವಾಗಬೇಕಾಗಿತ್ತಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾವು ಮಾಡಿದ್ದು ತಪ್ಪೆಂದು ಅಂದೇ ಅನಿಸಿದ್ದರೆ ಇಂದು ವಿಧಾನಸಭೆಯಂಥ ಪವಿತ್ರವಾದ ಸ್ಥಳದಲ್ಲಿ ಅವರು ಹೀಗೆ ಹೇಳುತ್ತಿರಲಿಲ್ಲ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವುದೇ ತನ್ನ ಗುರಿ ಎಂದು ಅವರು ಹೇಳಿದ್ದಾರೆ. ಹಿಂದೆ ಪಕ್ಷ ಬಿಟ್ಟಾಗ ಬಿಜೆಪಿಯನ್ನು ಸೋಲಿಸುವುದೇ ತನ್ನ ಗುರಿ ಎಂದು ಹೇಳಿದ್ದರು. ಇಂಥವರನ್ನು ನಂಬುವುದು ಹೇಗೆ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟಿದ್ದಾರೆ.

ಹೀಗೆ ದಿನಕ್ಕೊಂದು ಹೇಳಿಕೆ ನೀಡುವುದರಿಂದ ಅವರಿಗೂ ಒಳ್ಳೆಯದಾಗಲ್ಲ, ಜನರಿಗೂ ಒಳ್ಳೆಯದಾಗಲ್ಲ, ಪಕ್ಷಕ್ಕೂ ಒಳ್ಳೆಯದಾಗಲ್ಲ. ಹೆಜ್ಜೆ ಇಡಬೇಕಾದರೆ ಅವರು ಮುಂದಿನ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಹೆಜ್ಜೆ ಇಡಬೇಕಾಗಿತ್ತು. ಈಗ ಈ ರೀತಿ ಹೇಳಿಕೆ ನೀಡುವುದರಿಂದ ಏನು ಪ್ರಯೋಜನ ಎಂದು ಈಶ್ವರಪ್ಪ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯಡಿಯೂರಪ್ಪನವರನ್ನು ತಮ್ಮ ನಾಯಕರೆಂದು ಪಕ್ಷದ ಕಾರ್ಯಕರ್ತರು, ರಾಜ್ಯದ ಜನರು ಕೂಡ ಒಮ್ಮನಸ್ಸಿನಿಂದ ಒಪ್ಪಿಕೊಂಡಿದ್ದರು. ನಾಯಕರೇ ತಪ್ಪು ಮಾಡಿದ ಮೇಲೆ ಕಾರ್ಯಕರ್ತರು ಮಾಡದೆ ಇರುತ್ತಾರೆಯೆ ಎಂದು ಮಾರ್ಮಿಕವಾಗಿ ನುಡಿದ ಈಶ್ವರಪ್ಪನವರು, ಮುಂದೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂಬ ನಿರ್ಧಾರವನ್ನು ಯಡಿಯೂರಪ್ಪನವರೇ ತೆಗೆದುಕೊಳ್ಳಬೇಕು ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದ್ದಾರೆ.

ತಾವು ಹಿಂದೆ ತಪ್ಪು ಮಾಡಿದ್ದೇವೆ. ನಮ್ಮ ಒಳಜಗಳಗಳಿಂದ ಜನರಿಗೆ ಬೇಡವಾದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿತು. ಅಂಥ ತಪ್ಪು ಹಿಂದೆ ಮಾಡಬಾರದಿತ್ತು. ನಮಗೆ ತಪ್ಪಿನ ಅರಿವಾಗಿದೆ. ಮುಂದೆ ಅಂಥ ತಪ್ಪು ಆಗುವಂತೆ ಬಿಡುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸರಿಯಾದ ಪಾಠ ಕಲಿಸುತ್ತೇವೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಹೊರಗಿಡುವುದು ತಮ್ಮ ಗುರಿ ಎಂದು ಯಡಿಯೂರಪ್ಪನವರು ಹೇಳಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಯಡಿಯೂರಪ್ಪ ಆಡಿದ ಮಾತುಗಳು ಮತ್ತು ಶಿವಮೊಗ್ಗದಲ್ಲಿ ಈಶ್ವರಪ್ಪ ಆಡಿದ ಮಾತುಗಳಿಂದ, ಭಾರತೀಯ ಜನತಾ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ಬೆಳವಣಿಗೆಗಳ ಬಗ್ಗೆ ಒಂದು ಚಿತ್ರಣ ಸಿಕ್ಕಂತಾಗಿದೆ. ಯಡಿಯೂರಪ್ಪನವರು ಬಿಜೆಪಿಗೆ ವಾಪಸ್ ಆಗುವ ಬಗ್ಗೆ ಸುಳಿವು ನೀಡಿದ್ದರೆ, ತಮಗೆ ಅವರು ಬರುವುದು ಬೇಕಾಗಿಲ್ಲ ಎಂದು ಕೆಎಸ್ ಈಶ್ವರಪ್ಪ ಸ್ಪಷ್ಟ ಮಾತುಗಳಲ್ಲಿ ಅರುಹಿದ್ದಾರೆ. ಸಿಟಿ ರವಿ ಕೂಡ ಯಡಿಯೂರಪ್ಪನವರ ಮಾತನ್ನು ಅಷ್ಟು ಗಂಭೀರವಾಗಿ ಪರಿಗಣಿಸಬೇಕಾಗಿಲ್ಲ ಎಂದಿದ್ದಾರೆ. ಮಂದೇನು ಆಗಲಿದೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+