ಕರ್ನಾಟಕದ ಜಿಲ್ಲಾ ಸುದ್ದಿಗಳ ಸುತ್ತ ಒಂದು ಸುತ್ತು

ಶಿವಮೊಗ್ಗ : ಶಿಕಾರಿಪುರದ ಅಂಜನಾಪುರ ಜಲಾಶಯದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ನೀರು ಹೊರಬರುತ್ತಿದೆ. ಇದರಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಜಲಾಶಯಕ್ಕೆ ಆಗಮಿಸಿದ ನೀರಾವರಿ ಇಲಾಖೆ ಅಧಿಕಾರಿಗಳು ಕ್ರೆಸ್ಟ್ ಗೇಟ್ ಮೂಲಕ ನೀರನ್ನು ಹೊರಬಿಟ್ಟು ನೀರಿನ ತಗ್ಗಿಸಲು ಪ್ರಯತ್ನಿಸುತ್ತಿದ್ದಾರೆ.
ಮಂಡ್ಯ : ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಚಿಕ್ಕನಾಯಕನಹಳ್ಳಿಯಲ್ಲಿ 11 ತಿಂಗಳ ಮಗುವೊಂದು ಡೆಂಗ್ಯೂ ಮಹಾಮಾರಿಗೆ ಬಲಿಯಾಗಿದೆ. ಗ್ರಾಮದ ಲೋಕೇಶ್ವರ್ ಅವರ ಮಗು ಕುಶಾಲ್ ಮಂಗಳವಾರ ಬೆಳಗ್ಗೆ ಮೃತಪಟ್ಟಿದೆ. ಕಳೆದ ಒಂದು ವಾರದಿಂದ ಮಗು ಜ್ವರದಿಂದ ಬಳಲುತ್ತಿತ್ತು.
ಹಾಸನ : ಸಿಲಿಂಡರ್ ಸ್ಪೋಟಗೊಂಡು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. ಸೋಮವಾರ ರಾತ್ರಿ, ಹೊಳೆನರಸೀಪುರ ತಾಲೂಕಿನ ಅಂಬೇಡ್ಕರ್ ಕಾಲೋನಿಯ ಮನೆಯೊಂದರಲ್ಲಿ ಸಿಲಿಂಡರ್ ಸ್ಪೋಟಗೊಂಡಿತ್ತು. ಘಟನೆಯಿಂದಾಗಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಮಧ್ಯಾಹ್ನ ಅವರು ಮೃತಪಟ್ಟಿದ್ದಾರೆ.
ಬೆಳಗಾವಿ : ಉತ್ತರ ಕರ್ನಾಟಕದಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಖಾನಾಪುರ ತಾಲೂಕಿನ ಕಣಕಂಬಿ, ಭೀಮಗಢ, ಪಾಸೋಲಿ, ಕಳಸಾ ಬಂಡೂರಿ ಮುಂತಾದ ಗ್ರಾಮಗಳು ಜಲಾವೃತವಾಗಿದೆ. ಗ್ರಾಮದಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ.
ಹುಬ್ಬಳ್ಳಿ : ತನ್ನ ಒಂದು ವರ್ಷದ ಹೆಣ್ಣು ಮಗುವನ್ನು ರೈಲಿನಲ್ಲಿ ತಾಯಿಯು ಬಿಟ್ಟು ಪರಾರಿಯಾಗಿರುವ ಘಟನೆ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಮಗುವನ್ನು ನೋಡಿದ ಸಹ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.
ರಾಯಚೂರು : ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದರಿಂದ ಮಸ್ಕಿ ಸಂಚಾರಿ ವೃತ್ತ ನಿರೀಕ್ಷಕ ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ. ವೃತ ನಿರೀಕ್ಷಕ ಲಕ್ಷ್ಮೀನಾರಾಯಣ ಮತ್ತು ಇನ್ಸ್ ಪೆಕ್ಟರ್ ಬಸವರಾಜ್ ಬೀಸನಕೊಪ್ಪ ಅವರು, ನ್ಯಾಯಾಲಯಕ್ಕೆ ಪ್ರಕರಣವೊಂದರ ಕುರಿತು. ತಪ್ಪು ಮಾಹಿತಿ ನೀಡಿದ್ದರು. ಆದ್ದರಿಂದ ಅವರನ್ನು ಅಮಾನತುಗೊಳಿಸಲಾಗಿದೆ.












Click it and Unblock the Notifications