ಕೆಪಿಎಸ್‌ಸಿ ಅಕ್ರಮ ತನಿಖೆ ಚುರುಕು, ಇಬ್ಬರ ಬಂಧನ

ಭಾನುವಾರ ಮಹಾರಾಷ್ಟ್ರದಲ್ಲಿ ಕೆಪಿಎಸ್ ಸಿಯ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ ಅವರ ಆಪ್ತ ಕಾರ್ಯದರ್ಶಿ ಕೆ.ಆರ್.ಸುಂದರ್ ಹಾಗೂ ಬಿಡಿಎ ಎಂಜಿನಿಯರ್ ಸೋಮೇಶ್ ಅವರನ್ನು ಬಂಧಿಸಲಾಗಿದೆ. ಪ್ರಕರಣ ಹೊರಬಂದ ಬಳಿಕ ಇವರು ತಲೆಮರಿಸಿಕೊಂಡಿದ್ದರು.
ಕೆಪಿಎಸ್ ಸಿ ಹಗರಣ ತನಿಖೆ ಆರಂಭಿಸಿದ ನಂತರ ಮೊದಲ ಬಾರಿಗೆ ಸಿಐಡಿ ಇಬ್ಬರನ್ನು ಬಂಧಿಸುವ ಮೂಲಕ, ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಮಹಾರಾಷ್ಟ್ರದ ಶಿರಡಿ ಸಮೀಪ ಸುಂದರ್ ಹಾಗೂ ಸೋಮೇಶ್ ಅಡಗಿರುವ ಬಗ್ಗೆ ಮಾಹಿತಿ ತಿಳಿದ ಪೊಲೀಸರು, ದಾಳಿ ನಡೆಸಿ ಅವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ವಿಚಾರಣೆ ಮುಂದುವರೆದಿದೆ. ಆರೋಪಿಗಳು ಅಡಗಿದ್ದ ನಿವಾಸದಿಂದ ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್ ಕೆಲವು ವಸ್ತುಗಳು ಮತ್ತು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ನಾಲ್ವರಿಗಾಗಿ ಶೋಧ : ಪ್ರಕರಣಕ್ಕೆ ಸಂಬಂಧಿಸಿದಂತೆ ಗೋನಾಳ್ ಭೀಮಪ್ಪ ನ್ಯಾಯಾಲಯದಲ್ಲಿ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದು ಬಂಧನ ಭೀತಿಯಿಂದ ಮುಕ್ತರಾಗಿದ್ದಾರೆ. ಆದ್ದರಿಂದ ಉಳಿದ ಆರೋಪಿಗಳಿಗಾಗಿ ಸಿಐಡಿ ಪೊಲೀಸರು ಬಲೆ ಬೀಸಿದ್ದಾರೆ.
ಆಯೋಗದ ಸದಸ್ಯೆ ಮಂಗಳಾ ಶ್ರೀಧರ್, ಅವರ ಆಪ್ತ ಕಾರ್ಯದರ್ಶಿ ಅಶೋಕ್ ಕುಮಾರ್, ವಿಶೇಷ ಅಧಿಕಾರಿ ಅರುಣಾಚಲಂ ಹಾಗೂ ವಿಧಾನಸೌಧ ಸಚಿವಾಲಯದ ಅಧಿಕಾರಿ ರಾಜಶೇಖರ್ ಅವರಿಗಾಗಿ ಪೊಲೀಸರು ಹುಟುಕಾಟ ಪ್ರಾರಂಭಿಸಿದ್ದು, ಶೀಘ್ರದಲ್ಲೇ ಬಂಧಿಸುವುದಾಗಿ ಹೇಳಿದ್ದಾರೆ.
ಪ್ರಕರಣವೇನು : 362 ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳ ಭರ್ತಿಗಾಗಿ ಕೆಪಿಎಸ್‌ಸಿ ಲಿಖೀತ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆ ನಡೆಸಿತ್ತು. ಆಯ್ಕೆ ಪ್ರಕ್ರಿಯೆ ಅಂತಿಮ ಹಂತವನ್ನೂ ತಲುಪಿತ್ತು. (ಕೆಪಿಎಸ್‌ಸಿ ಅಕ್ರಮದ ತನಿಖೆ ಸಿಐಡಿ ಹೆಗಲಿಗೆ)
ಆದರೆ, ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದವರಿಗೆ, ಸಂದರ್ಶನದಲ್ಲಿ ಕಡಿಮೆ ಅಂಕ ನೀಡಲಾಗಿದೆ. ಸಂದರ್ಶನದಲ್ಲಿ ಹೆಚ್ಚು ಅಂಕ ನೀಡಲು ಹಣದ ವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು.
ಪ್ರಕರಣದ ಬಗ್ಗೆ ವಿಧಾನ ಮಂಡಲ ಅಧಿವೇಶದಲ್ಲಿಯೂ ಚರ್ಚೆ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ಬಗ್ಗೆ ತನಿಖೆ ನಡೆಸುವಂತೆ ಅಭ್ಯರ್ಥಿಗಳು ಮನವಿ ಮಾಡಿದ್ದರು. ಸಿದ್ದರಾಮಯ್ಯ ಪ್ರಕರಣದ ತನಿಖೆಯನ್ನು ಸಿಐಡಿಗೆವಹಿಸಿ ಆದೇಶ ಹೊರಡಿಸಿದ್ದರು.











Click it and Unblock the Notifications