ಬೆಂಗಳೂರಿನಲ್ಲಿ ಆರಂಭವಾಯ್ತು ನಮೋ ಬ್ರಿಗೇಡ್

ಭಾನುವಾರ ಯೂತ್ ಫಾರ್ ನೇಷನ್(ವೈಎಫ್‌ಎನ್) ನೇತೃತ್ವದಲ್ಲಿ ಜಯನಗರದಲ್ಲಿ ನಮೋ ಬ್ರಿಗೇಡ್ ಗೆ ಚಾಲನೆ ದೊರಕಿದೆ. ಮೋದಿ ಪ್ರಧಾನಿ ಆಗಬಯಸುವವರು ಈ ವೇದಿಕೆಗೆ ಸೇರಬಹುದು ಎಂದು ವೈಎಫ್‌ಎನ್ ಅಧ್ಯಕ್ಷ ಪದ್ಮಪ್ರಸಾದ್ ಹೆಗಡೆ ಕರೆ ನೀಡಿದ್ದಾರೆ.
ನಮೋ ಬ್ರಿಗೇಡ್ ಗೆ ಚಾಲನೆ ನೀಡಿ ಮಾತನಾಡಿದ ಪದ್ಮಪ್ರಸಾದ್ ಹೆಗಡೆ, ನರೇಂದ್ರ ಮೋದಿ ಪ್ರಧಾನಿಯಾದರೆ ಮಾತ್ರ ಭಾರತ 2020ರೊಳಗೆ ಸೂಪರ್ ಪವರ್ ಆಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಭಾರತದ ಮೇಲೆ ದೇಶ ವಿರೋಧಿ ಶಕ್ತಿಗಳು ಆಕ್ರಮಣ ನಡೆಸುತ್ತಿವೆ. ಇಂತಹವುಗಳನ್ನು ತಡೆಯಲು ದೇಶಕ್ಕೆ ಸೂಕ್ತ ನಾಯಕ ಬೇಕು. ಅಂತಹ ನಾಯಕತ್ವ ಗುಣ ನರೇಂದ್ರ ಮೋದು ಅವರಲ್ಲಿದೆ. ಅವರು ಪ್ರಧಾನಿ ಆಗಬೇಕು ಎಂಬುದೇ ಬ್ರಿಗೇಡ್ ಉದ್ದೇಶ ಎಂದು ಅವರು ಹೇಳಿದರು.
ಪ್ರಧಾನಿ ಮೌನ ಸರಿಯಲ್ಲ : ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆದಾಗ, ಪಾಕಿಸ್ತಾನೀಯರು ದೇಶದ ಸೈನಿಕರಿಬ್ಬರ ರುಂಡ ಕಡಿದಾಗ ದೇಶದ ಪ್ರಧಾನಿ ಮೌನ ವಹಿಸಿದ್ದರು. ಆದರೆ, ದೇಶದ ನಾಗರೀಕರಾಗಿ ನಾವು ಪ್ರಧಾನಿಯ ಮೌನವನ್ನು ಸಹಿಸುವುದು ಅಸಾಧ್ಯ ಎಂದರು.
ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಕನಸಿನಂತೆ 2020ರ ವೇಳೆಗೆ ಭಾರತ ಸೂಪರ್ ಪವರ್ ದೇಶವಾಗಬೇಕು. ಈ ಗುರಿ ಸಾಧಿಸಲು ನರೇಂದ್ರ ಮೋದಿ ಅವರು ಪ್ರಧಾನಿ ಆಗಬೇಕು. ಅದಕ್ಕಾಗಿ ಯುವಕರು ನಮೋ ಬ್ರಿಗೇಡ್ ಸೇರುವಂತೆ ಅವರು ಕರೆ ನೀಡಿದರು.
ಕೋಮುವಾದಿ ಎನ್ನುತ್ತಾರೆ : ಭಾರತ ರಾಮರಾಜ್ಯ ಆಗಬೇಕಾದರೆ, ನರೇಂದ್ರ ಮೋದಿ ಪ್ರಧಾನಿ ಆಗಬೇಕು. ಆದರೆ ಮೋದಿ ಬೆಂಬಲಿಸುವ ಜನರಿಗೆ ದೇಶದಲ್ಲಿ ಕೋಮುವಾದಿಗಳು ಎಂಬ ಅಪವಾದವಿದೆ. ನಮೋ ಬ್ರಿಗೇಡ್ ಸದಸ್ಯರು ಇಂತಹ ಟೀಕೆ ಎದುರಿಸಲು ಸಿದ್ಧವಾಗಿರಬೇಕು ಎಂದು ಕರೆ ನೀಡಿದರು.
ವೆಬ್ ಸೈಟ್ ಗೆ ಚಾಲನೆ : ನಮೋ ಬ್ರಿಗೇಡ್ ನ ಉದ್ದೇಶಗಳನ್ನು ಜನರಿಗೆ ತಲುಪಿಸಲು www.namobrigade.in ವೆಬ್‌ಸೈಟ್ ಗೆ ಚಾಲನೆ ನೀಡಲಾಗಿದೆ. ನೀವು ವೆಬ್ ಸೈಟ್ ಗೆ ಭೇಟಿ ನೀಡಿ ಬ್ರಿಗೇಡ್ ಕುರಿತು ಮಾಹಿತಿ ಪಡೆಯಬಹುದು.
ಮಿಸ್ಡ್ ಕಾಲ್ ಮೂಲಕ ಬೆಂಬಲ : ನರೇಂದ್ರ ಮೋದಿ ಪ್ರಧಾನಿಯಾಗಲಿ ಎಂಬ ಆಂದೋಲನಕ್ಕೆ ಬೆಂಬಲ ನೀಡಲು ಕೇವಲ ಒಂದು ಮಿಸ್ಡ್ ಕಾಲ್ ಕೊಡಬಹುದು. 080-67166886 ನಂಬರ್ ಗೆ ನೀವು ಮಿಸ್ಡ್ ಕಾಲ್ ಕೊಟ್ಟರೆ, ನೀವು ಆಂದೋಲನಕ್ಕೆ ಬೆಂಬಲ ನೀಡಿದಂತಾಗುತ್ತದೆ.
ಎಸ್‌ಎಂಎಸ್, ಇ-ಮೇಲ್ ಸಹಿತ ಸಾಮಾಜಿಕ ಜಾಲ ತಾಣಗಳ ಮೂಲಕ ಮೋದಿ ಪರ ಜನಾಭಿಪ್ರಾಯ ಮೂಡಿಸಲು ಬ್ರಿಗೇಡ್ ಸಿದ್ದವಾಗಿದೆ. ಮುಂಬರುವ ಲೋಕಸಭೆ ಚುನಾವಣೆವರೆಗೂ ಈ ಕಾರ‌್ಯಕ್ರಮ ಮುಂದುವರಿಯಲಿದೆ.












Click it and Unblock the Notifications