ನಾನು ರೆಡಿ, ನೀವು ರೆಡಿನಾ ಅನಂತ್ ಗೆ ಬಿಎಸ್ವೈ ಪ್ರಶ್ನೆ

ಕೆಜೆಪಿಯನ್ನು ಬಿಜೆಪಿಯಲ್ಲಿ ವಿಲೀನ ಗೊಳಿಸುವ ಕಾರ್ಯ ಸ್ವಲ್ಪ ವಿಳಂಬವಾಗಲಿದೆ. ಯಡಿಯೂರಪ್ಪ ಕಮಲ ಪಕ್ಷದ ತೆಕ್ಕೆಗೆ ಮರಳಿದರೆ ಅವರ ಬೆಂಬಲಿಗರ ಮುಂದಿನ ರಾಜಕೀಯ ಭವಿಷ್ಯವೇನು ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.
ಒಂದು ವೇಳೆ ಬಿಜೆಪಿ ಸೇರುವಂಥ ಸಂದರ್ಭ ಬಂದರೆ ಅನಂತ್ ಕುಮಾರ್ ಮಾತ್ರವಲ್ಲ, ಯಾರ ಜತೆ ಬೇಕಾದರೂ ಮಾತುಕತೆ ನಡೆಸಲು ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕೆಜೆಪಿ ಮುಂದಿನ ಸಂಘಟನೆ ಕುರಿತಂತೆ ಚರ್ಚಿಸಲು ಗುರುವಾರ ಕರೆದಿರುವ ರಾಜ್ಯ ಮತ್ತು ಜಿಲ್ಲಾ ಮುಖಂಡರ ಸಭೆಗೆ ಒಂದು ದಿನ ಬಾಕಿ ಇರುವಂತೆ ಯಡಿಯೂರಪ್ಪ ಅವರು ನೀಡಿರುವ ಈ ಹೇಳಿಕೆ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ವಿಲೀನ ಇಲ್ಲ?: ಯಾವ ಪಕ್ಷದೊಂದಿಗೂ ಕೆಜೆಪಿಯನ್ನು ವಿಲೀನ ಮಾಡುವುದಿಲ್ಲ. ಯಾವ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂಬುದನ್ನು ಲೋಕಸಭೆ ಚುನಾವಣೆ ವೇಳೆ ನಿರ್ಧರಿಸಲಾಗುವುದು ಎಂದು ಒಂದೆಡೆ ಹೇಳಿದರೆ, ಬಿಜೆಪಿ ಸೇರುವ ವಿಚಾರದಲ್ಲಿ ಯಾರೊಂದಿಗೆ ಬೇಕಾದರೂ ಮಾತುಕತೆಗೆ ಸಿದ್ಧ. ಲೋಕಸಭೆ ಚುನಾವಣೆ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ಹೇಳಿದ್ದಾರೆ.
ಯಡಿಯೂರಪ್ಪ ಮತ್ತು ಅನಂತಕುಮಾರ್ ಮಧ್ಯೆ ಭಿನ್ನಾಭಿಪ್ರಾಯವಿರುವುದು ಎಲ್ಲರಿಗೂ ಗೊತ್ತೇ ಇದೆ. ಇದನ್ನು ಹೋಗಲಾಡಿಸಲು ಈ ಇಬ್ಬರನ್ನೂ ಒಂದೇ ವೇದಿಕೆಯಡಿ ಕರೆತಂದು ಇಬ್ಬರ ಮಧ್ಯೆ ಮಾತುಕತೆ ನಡೆಯುವಂತೆ ವೇದಿಕೆ ಒದಗಿಸಲು ಬಿಜೆಪಿ ಕೆಲ ನಾಯಕರು ಯತ್ನಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಇಬ್ಬರು ನಾಯಕರು ಸ್ಪಂದಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕೆಜೆಪಿ ಮುಖಂಡರ ಸಭೆ: ಈ ಮಧ್ಯೆ ಕೆಜೆಪಿ ಸಂಘಟನೆ ಕುರಿತಂತೆ ಚರ್ಚಿಸಲು ಯಡಿಯೂರಪ್ಪ ಅವರು ಗುರುವಾರ ಪಕ್ಷದ ರಾಜ್ಯ ಮತ್ತು ಜಿಲ್ಲಾ ಮುಖಂಡರ ಸಭೆ ಕರೆದಿದ್ದಾರೆ. ಬೆಳಗ್ಗೆ 11 ಗಂಟೆಗೆ ಖಾಸಗಿ ಹೊಟೇಲ್‌ನಲ್ಲಿ ಈ ಸಭೆ ನಡೆಯಲಿದ್ದು, ಹಲವು ಮಹತ್ವದ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇದೆ. ಮುಂದಿನ ಅಪ್ಲೇಟ್ ಗಾಗಿ ಕಾಯಿರಿ.












Click it and Unblock the Notifications