ವಿಷ್ಣು ಸ್ಮಾರಕಕ್ಕೆ ಸರ್ಕಾರದಿಂದ ಭೂಮಿ ಹಸ್ತಾಂತರ

ಭಾರತಿ ವಿಷ್ಣುವರ್ಧನ್ ಅವರು ಈ ಸಂಬಂಧ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ನಂತರ ಸಿದ್ದರಾಮಯ್ಯ ಈ ವಿಷಯ ಘೋಷಿಸಿದ್ದಾರೆ. ಹಸ್ತಾಂತರದ ದಾಖಲಾತಿ ಪತ್ರಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾರತಿ ವಿಷ್ಣುವರ್ಧನ್ ಅವರಿಗೆ ನೀಡಿದರು.
ಈಗಾಗಲೇ ಎರಡು ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಈ ಜಮೀನಿನ ಹಣವನ್ನು ಕೂಡ ಮಾಲೀಕರಿಗೆ ನೀಡಲಾಗಿದೆ. ಗುರುವಾರದಿಂದಲೇ ಭೂಮಿ ಟ್ರಸ್ಟ್ ವಶಕ್ಕೆ ದೊರಕಲಿದ್ದು, ಸ್ಮಾರಕ ನಿರ್ಮಾಣ ಕಾರ್ಯ ಯಾವುದೇ ಅಡೆ-ತಡೆ ಇಲ್ಲದೆ ಸಾಗಲಿದೆ ಎಂದರು.
ವಿಷ್ಣುವರ್ಧನ್ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟರಾಗಿದ್ದು, ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿ ಈ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.
ಸ್ಮಾರಕ ಕಾಮಗಾರಿ ಆರಂಭ : ಮುಂಬರುವ ಸೆಪ್ಟೆಂಬರ್ ವೇಳೆಗೆ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಭಾರತಿ ವಿಷ್ಣುವರ್ಧನ್ ಹೇಳಿದರು. ಸಿಎಂ ನಿವಾಸದಲ್ಲಿ ಮುಖ್ಯಮಂತ್ರಿಯಿಂದ ಭೂಮಿ ಹಸ್ತಾಂತರ ಪಡೆದುಕೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ನಂತರ ಮುತುವರ್ಜಿ ವಹಿಸಿ ವಿಷ್ಣುವರ್ಧನ್ ಸಮಾಧಿ ಇರುವ ಅಭಿಮಾನ್ ಸ್ಟುಡಿಯೋದಲ್ಲಿ ಎರಡು ಎಕರೆ ಭೂಮಿಯನ್ನು ಗುರುತಿಸಿ ಟ್ರಸ್ಟ್ ವಶಕ್ಕೆ ನೀಡಿದ್ದಾರೆ.
ಸಮಾಧಿ ಸುತ್ತಲೂ ಇನ್ನೂ ಎರಡು ಎಕರೆ ನೀಡಬೇಕೆಂಬುದು ನಮ್ಮ ಬೇಡಿಕೆ. ಅಭಿಮಾನ್ ಸ್ಟುಡಿಯೋ ಮಾಲೀಕರಾಗಿದ್ದ ಹಿರಿಯ ನಟ ಬಾಲಕೃಷ್ಣ ಅವರ ಮಕ್ಕಳ ನಡುವೆ ಭೂಮಿ ಹಂಚಿಕೆ ಸಂಬಂಧ ತಕರಾರಿದ್ದು, ಅದು ಇತ್ಯರ್ಥವಾಗುವವರೆಗೂ ಸರ್ಕಾರ ಟ್ರಸ್ಟ್ ವಶಕ್ಕೆ ಭೂಮಿ ನೀಡಲು ಸಾಧ್ಯವಾಗುವುದಿಲ್ಲ.
ಹಾಗಾಗಿ ತಾವು ಬಾಲಕೃಷ್ಣ ಅವರ ಮಗಳ ಜೊತೆ ಖಾಸಗಿಯಾಗಿ ಮಾತನಾಡಿದಾಗ ಭೂಮಿ ನೀಡಲು ಒಪ್ಪಿಕೊಂಡಿದ್ದಾರೆ ಎಂದರು. ಆ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಬಾಲಕೃಷ್ಣ ಅವರ ಪುತ್ರಿ ಸ್ಮಾರಕ ನಿರ್ಮಾಣಕ್ಕೆ 2 ಎಕರೆ ನೀಡಲು ತನ್ನ ತಕರಾರಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದರೆ ವಿವಾದ ಬಗೆಹರಿದು ಬೇಡಿಕೆಯಷ್ಟು ಭೂಮಿ ಲಭ್ಯವಾಗುತ್ತದೆ.
ಆದರೆ ಅಲ್ಲಿಯವರೆಗೂ ಕಾಯುವುದಕ್ಕಿಂತ ಈಗ ಸರ್ಕಾರ ಕೊಟ್ಟಿರುವ 2 ಎಕರೆ ಭೂಮಿ ಯಲ್ಲೇ ಪ್ರಾಥಮಿಕ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಭಾರತಿ ವಿಷ್ಣುವರ್ಧನ್ ತಿಳಿಸಿದರು. ತಮ್ಮ ಪತಿ ವಿಷ್ಣುವರ್ಧನ್ ಎಲ್ಲರ ವಿಶ್ವಾಸ ಗಳಿಸಿದ್ದರು. ಹಾಗಾಗಿ ಎಲ್ಲಾ ಕೆಲಸಗಳು ಸುಗಮವಾಗಿ ನಡೆಯುತ್ತಿದೆ ಎಂದು ಭಾರತಿ ಅವರು ಹೇಳಿದರು.












Click it and Unblock the Notifications