ಜಾರ್ಖಂಡ್ : ನಕ್ಸಲ್ ದಾಳಿಗೆ ಎಸ್ಪಿ ಸೇರಿ ಪೊಲೀಸರ ಬಲಿ
ರಾಂಚಿ, ಜು.2: ಜಾರ್ಖಂಡ್ ನ ಪಕೂರ್ ಜಿಲ್ಲೆಯಲ್ಲಿ ಪೊಲೀಸ್ ರಕ್ಷಣಾದಳದ ಮೇಲೆ ಮಂಗಳವಾರ ನಕ್ಸಲರು ಹಠಾತ್ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಪೊಲೀಸ್ ಅಧೀಕ್ಷಕ ಸೇರಿದಂತೆ 7 ಪೊಲೀಸರು ಹತ್ಯೆಗೀಡಾಗಿರುವ ಪ್ರಾಥಮಿಕ ವರದಿಗಳು ಬಂದಿವೆ. ಸಾವಿನ ಸಂಖ್ಯೆ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಪಕೂರ್ ಜಿಲ್ಲಾ ಪೊಲೀಸ್ ಅಧೀಕ್ಷಕ ಅಮರ್ ಜೀತ್ ಬಲಿಹಾನ್ ಅವರನ್ನು ಗುರಿಯಾಗಿರಿಸಿ ಮಾವೋವಾದಿಗಳು ಈ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾತಿಕುಂಡ್ ಪ್ರದೇಶದಲ್ಲಿ ಪೊಲೀಸರು ಹಾದುಹೋಗುತ್ತಿದ್ದಾಗ ಮಾವೋವಾದಿಗಳು ಗುಂಡಿನ ಸುರಿಮಳೆಗೈದಿದ್ದಾರೆ. ಮಾವೋವಾದಿ ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ ಈಗಲೂ ಜಾರಿಯಲ್ಲಿದ್ದು ಹೆಚ್ಚಿನ ಪೊಲೀಸ್ ಪಡೆಯನ್ನು ಪ್ರದೇಶದತ್ತ ಕಳಿಸಲಾಗಿದೆ ಎಂದು ಡಿಐಜಿ ಪೊಲೀಸ್ ರಾಜೀವ್ ಕುಮಾರ್ ಹೇಳಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ 8 ಜನ ಪೊಲೀಸರನ್ನು ನಕ್ಸಲರು ಹತ್ಯೆ ಮಾಡಿದ್ದಾರೆ. ಪಕೂರ್ ಜಿಲ್ಲಾ ಪೊಲೀಸ್ ಅಧೀಕ್ಷಕ ಅಮರ್ ಜೀತ್ ಬಲಿಹಾನ್ ಅವರು ಸಭೆಯೊಂದನ್ನು ಮುಗಿಸಿಕೊಂಡು ಹಿಂತಿರುಗುವಾಗ ನಕ್ಸಲರು ಈ ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಪಾಟ್ನದಲ್ಲಿ ರೈಲ್ವೆ ಪೊಲೀಸರನ್ನು ಗುರಿಯಾಗಿಸಿಕೊಂಡು ಧನಬಾದ್- ಪಟ್ನಾ ಎಕ್ಸ್ ಪ್ರೆಸ್ ಮೇಲೆ ನಕ್ಸಲರು ಪೂರ್ವಯೋಜಿತ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಇಬ್ಬರು ರೈಲು ಪ್ರಯಾಣಿಕರು ದುರಂತ ಸಾವನ್ನಪ್ಪಿದ್ದರು. ರೈಲಿನ ಚಾಲಕ ಸೇರಿದಂತೆ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದ ಘಟನೆ ನಡೆದಿತ್ತು.
ಛತ್ತೀಸ್ ಗಡದ ಸುಕ್ಮಾದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪರಿವರ್ತನಾ ಮೆರವಣಿಗೆ ಮುಗಿಸಿಕೊಂಡು ವಾಪಸ್ಸಾಗುತ್ತಿದ್ದ ವೇಳೆ ಕಾಂಗ್ರೆಸ್ ತಂಡದ ಮೇಲೆ ನಕ್ಸಲರು ದಾಳಿ ನಡೆಸಿ 29ಕ್ಕೂ ಅಧಿಕ ಜನರನ್ನು ಬಲಿ ತೆಗೆದುಕೊಂಡಿದ್ದರು.
ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್ ಪಾಟೇಲ್ ಹಾಗೂ ಅವರ ಪುತ್ರ ದಿನೇಶ್ ಪಾಟೇಲ್, ಕೇಂದ್ರ ಮಾಜಿ ಸಚಿವ ವಿ,ಸಿ ಶುಕ್ಲ, ರಾಜ್ಯದ ಮಾಜಿ ಗೃಹ ಸಚಿವ ಮಹೇಂದ್ರ ಕರ್ಮ ಮತ್ತು ರಾಜನಂದಗಾಂವ್ ಕ್ಷೇತ್ರದ ಮಾಜಿ ಶಾಸಕ ಉದಯ ಮೊದಲಿಯಾರ್ ಈ ಘಟನೆಗೆ ಬಲಿಯಾಗಿದ್ದರು.
ನಕ್ಸಲ್ ದಾಳಿಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮನಮೋಹನ್ ಸಿಂಗ್ ಸೇರಿದಂತೆ ಅನೇಕ ನಾಯಕರು ಖಂಡಿಸಿದ್ದರು. ಮಾವೋವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ, ನಕ್ಸಲ್ ದಾಳಿ ಪುನಾರಾವರ್ತನೆಯಾಗುತ್ತಿದೆ.












Click it and Unblock the Notifications