ಬಿಜೆಪಿಗೆ ಮರಳೊಲ್ಲ : ಯಡಿಯೂರಪ್ಪ ಖಡಕ್ ಉತ್ತರ

ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಯಡಿಯೂರಪ್ಪ, ಕೆಜೆಪಿ ಪಕ್ಷವನ್ನು ಮತ್ತಷ್ಟು ಪ್ರಬಲವಾಗಿ ಕಟ್ಟಿ ಬೆಳಸುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಬಿಜೆಪಿಗೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಗೆ ಮರಳುವಂತೆ ಪಕ್ಷದ ನಾಯಕರು ತಮ್ಮನ್ನು ಆಹ್ವಾನಿಸಿದ್ದು ನಿಜ ಎಂದು ಯಡಿಯೂರಪ್ಪ ಹೇಳಿದರು.
ಬಿಜೆಪಿ ಪಕ್ಷದಲ್ಲಿ ತಮಗೆ ನೋವಿನ ಅನುಭವವಾಗಿದೆ. ಅದರಿಂದ ಸಾಕಷ್ಟು ಪಾಠ ಕಲಿತಿದ್ದೇನೆ. ಆದ್ದರಿಂದ ಆ ಪಕ್ಷಕ್ಕೆ ಮರಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಲೋಕಸಭೆ ಚುನಾವಣೆಗೆ ಪಕ್ಷವನ್ನು ಪ್ರಬಲವಾಗಿ ಕಟ್ಟಿ ಬೆಳೆಸುತ್ತೇನೆ. ಕೆಲವು ಬಿಜೆಪಿ ನಾಯಕರು ಪಕ್ಷಕ್ಕೆ ಮರಳುವಂತೆ ಭೇಟಿ ಮಾಡಿ ಆಹ್ವಾನ ನನಗೆ ನೀಡಿದ್ದರು. ಅದನ್ನು ನಿರಾಕರಿಸಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದರು.
ಗುರುವಾರ ರಾಜ್ಯದ ಕೆಲವು ಬಿಜೆಪಿ ನಾಯಕರು ಸಭೆ ಸೇರಿ ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಮರಳಿ ಕರೆತರುವ ಬಗ್ಗೆ ಚರ್ಚೆ ನಡೆಸಿದ್ದರು. ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರಿಗೆ ಯಡಿಯೂರಪ್ಪ ಮರಳಿ ಕರೆತರುವ ಬಗ್ಗೆ ಅಭಿಪ್ರಾಯ ತಿಳಿಸಿದ್ದರು. ಆದರೆ, ಜೂ.29ರಂದು ನಡೆಯುವ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಈ ಕುರಿತು ನಿರ್ಧರಿಸುವುದಾಗಿ ಜೋಶಿ ಹೇಳಿಕೆ ನೀಡಿದ್ದರು. (ಬಿಜೆಪಿಗೆ ಬಿಎಸ್ವೈ ಶನಿವಾರ ನಿರ್ಧಾರ?)
ಜೂ.29ರ ಶನಿವಾರ ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದ್ದು, ಅದರಲ್ಲಿ ಬಿಜೆಪಿಗೆ ಯಡಿಯೂರಪ್ಪ ಅವರನ್ನು ಕರೆತರುವ ಕುರಿತು ಶಾಸಕರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ರಾಜ್ಯ ಬಿಜೆಪಿ ಉಸ್ತುವಾರಿ ಥಾವರ್ ಚಂದ್ ಗೆಹ್ಲೊಟ್ ಅವರಿಗೆ ತಿಳಿಸಲು ಪ್ರಹ್ಲಾದ್ ಜೋಶಿ ನಿರ್ಧರಿಸಿದ್ದರು.
ಥಾವರ್ ಚಂದ್ ಅವರ ಮೂಲಕ ವರಿಷ್ಠರಿಗೆ ಈ ಸಂದೇಶ ಕಳಿಸಿ, ಅವರ ಅಂತಿಮ ಒಪ್ಪಿಗೆ ಬಳಿಕ ನಿರ್ಧಾರ ಕೈಗೊಳ್ಳುವ ಕುರಿತು ಜೋಶಿ ಮಾಹಿತಿ ನೀಡಿದ್ದರು. ರಾಜ್ಯದ ನಾಯಕರು ಯಡಿಯೂರಪ್ಪ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಅವರು ಶಾಸಕರಿಗೆ ಕಟ್ಟಪ್ಪಣೆ ಮಾಡಿದ್ದರು.
ಆದರೆ, ಬಿಜೆಪಿಗೆ ಮರಳುವ ಪ್ರಸ್ತಾಪವನ್ನು ಸ್ವತಃ ಯಡಿಯೂರಪ್ಪ ತಳ್ಳಿ ಹಾಕಿದ್ದಾರೆ. ಇದರಿಂದ ಬಿಜೆಪಿಯ ಕೆಲವು ನಾಯಕರಿಗೆ ಭಾರೀ ನಿರಾಸೆ ಉಂಟಾಗಿದೆ. ಯಡಿಯೂರಪ್ಪ ಮರಳಿ ಕರೆತಂದು ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಸ್ಥಾನಗಳಿಸುವ ಅವರ ಕನಸಿಗೆ ತಣ್ಣೀರು ಸುರಿದಂತಾಗಿದೆ.(ಯಡಿಯೂರಪ್ಪ ಬಿಜೆಪಿಗೆ ಏಕೆ ಮರಳಬೇಕು)
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಿಜೆಪಿಯ ಲೋಕಸಭಾ ಚುನಾವಣೆಯ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಪಡೆದ ನಂತರ ಯಡಿಯೂರಪ್ಪ ಬಿಜೆಪಿಗೆ ಮರಳುತ್ತಾರೆ ಎಂಬ ಸುದ್ದಿಗಳು ಹಬ್ಬಿದ್ದವು. ರಾಜ್ಯದ ಕೆಲವು ನಾಯಕರು ಬಿಎಸ್ವೈ ಬಿಜೆಪಿಗೆ ಮರಳಬೇಕು ಎಂದು ಬಹಿರಂಗವಾಗಿ ಹೇಳಿಕೆ ನೀಡಿ, ಕರೆತರುವ ಪ್ರಯತ್ನವನ್ನು ಆರಂಭಿಸಿದ್ದರು.












Click it and Unblock the Notifications