ಮತ್ತೆ ಸಿಕ್ಕಿಬಿದ್ರು ಮೂವರು ನಕಲಿ ಪೊಲೀಸರು!

ಕಳೆದ ಕೆಲವು ತಿಂಗಳಿನಿಂದ ಕಳ್ಳಾ-ಪೊಲೀಸ್ ಆಟವಾಡುತ್ತಿದ್ದ ಖಾಕಿ ವೇಷಧಾರಿ ಮತ್ತು ಆತನ ಮೂವರು ಸಹಚರರನ್ನು ಮಾಗಡಿ ರಸ್ತೆಯ ಪೊಲೀಸರು ಶನಿವಾರ ಬಂಧಿಸಿ, 40 ಲಕ್ಷ ರೂ. ಮೌಲ್ಯದ ನಗ-ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜಾಸ್ಥಾನ ಮೂಲದ ರಾಜಗೋಪಾಲನಗರ ನಿವಾಸಿಯಾಗಿದ್ದ ರಾಜಾರಾಂ(38), ಲಗ್ಗೆರೆಯ ಹೇಮರಾಜ್ (27), ಸುಂಕದಕಟ್ಟೆ ನಿವಾಸಿ ನಾಗೇಶ್ (30) ಮಾಗಡಿ ಪೊಲೀಸರಿಗೆ ಸೆರೆ ಸಿಕ್ಕಿರುವ ಆರೋಪಿಗಳು. ಇನ್ನೂ ಇಬ್ಬರು ತಲೆಮರಿಸಿಕೊಂಡಿದ್ದು, ಪೊಲೀಸರು ಅವರಿಗಾಗಿ ಹುಟುಕಾಟ ಪ್ರಾರಂಭಿಸಿದ್ದಾರೆ.
ಮಹಾ ಚಾಲಕಿ : ರಾಜಾರಾಂ ಪ್ರಕರಣದ ಪ್ರಮುಖ ಆರೋಪಿ. ಹಗಲು ಹೊತ್ತಿನಲ್ಲಿ ಪೊಲೀಸ್ ಅಧಿಕಾರಿಯ ಸಮವಸ್ತ್ರ ಧರಿಸಿ ಬುಲೆಟ್‌ನಲ್ಲಿ ನಗರ ಪ್ರದಕ್ಷಿಣೆ ಹಾಕುತ್ತಿದ್ದ ಈತ, ಮನೆಗಳನ್ನು ಗುರುತು ಮಾಡಿಕೊಂಡು ರಾತ್ರಿವೇಳೆ ಸಹಚರರ ಜೊತೆ ಕಳ್ಳತನ ನಡೆಸುತ್ತಿದ್ದ. (ಬಾಣಸವಾಡಿ : ನಕಲಿ ಪೊಲೀಸ್ ಅಂದರ್!)
ಈತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 36 ಪ್ರಕರಣಗಳು ದಾಖಲಾಗಿದ್ದವು. ರಾಮನಗರ ಮತ್ತು ತಾವರೆಕೆರೆ ಠಾಣೆಗಳಲ್ಲಿ 5 ಪ್ರಕರಣಗಳು ಸೇರಿದಂತೆ 41 ಪ್ರಕರಣಗಳಲ್ಲಿ ನಕಲಿ ಪೊಲೀಸ್ ಪ್ರಮುಖ ಆರೋಪಿಯಾಗಿದ್ದ.
ಕಳ್ಳರ ಪರಿಚಯವೇ ಪ್ರೇರಣೆ : ಏಳನೇ ತರಗತಿ ಓದಿರುವ ರಾಜಾರಾಂ ಸಹೋದರ ದಯಾರಾಂ ಜೊತೆ ರಾಜಗೋಪಾಲನಗರದಲ್ಲಿ ಗಿರವಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳ ಬಳಿಕ ಸ್ವಂತ ಗಿರವಿ ಅಂಗಡಿ ಆರಂಭಿಸಿ ಕಳವು ಮಾಲುಗಳನ್ನು ಖರೀದಿ ಮಾಡತೊಡಗಿದ.
ತನ್ನ ಅಂಗಡಿಗೆ ಕಳ್ಳತನದ ಮಾಲು ಮಾರಲು ಬರುತ್ತಿದ್ದವರ ಸಂಘ ಬೆಳೆಸಿ ಅವರನ್ನೇ ತನ್ನ ಸಹಚರರನ್ನಾಗಿ ಇಟ್ಟುಕೊಂಡು, ರಾಜಾರಾಂ ಕಳ್ಳತನ ಮಾಡುತ್ತಿದ್ದ ಎಂದು ಮಾಗಡಿ ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ ಮೂವರು ಪೊಲೀಸ್ ಸಮವಸ್ತ್ರ ಧರಿಸಿ, ನಗರ ಸುತ್ತಾಡಿ ಮನೆಗಳನ್ನು ಗುರುತಿಸುತ್ತಿದ್ದರು.
ರಾತ್ರಿ ಟಾಟಾ ಇಂಡಿಕಾ ಕಾರಿನಲ್ಲಿ ಸಹಚರರೊಂದಿಗೆ ಆಗಮಿಸಿ, ಮನೆಯ ಬಾಗಿಲು ಒಡೆದು ನಗ-ನಾಣ್ಯ ಹಾಗೂ ಪಿಠೋಪಕರಣ ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳಿಂದ 1 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 4 ಟಿವಿ, 1 ಕಂಪ್ಯೂಟರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫೋಟೋದಲ್ಲೂ ವಂಚನೆ : ಬಂಧಿತ ರಾಜಾರಾಂ ಸೆಕ್ಯೂರಿಟಿ ಏಜೆನ್ಸಿ ಆರಂಭಿಸಲು ಮುಂದಾಗಿದ್ದ ಎಂಬ ಮಾಹಿತಿಯೂ ಪೊಲೀಸರಿಗೆ ದೊರಕಿದೆ. ಭಾರತ್ ಸೆಕ್ಯೂರಿಟಿ ಏಜೆನ್ಸಿ ಎಂಬ ಸಂಸ್ಥೆ ಪ್ರಾರಂಭಿಸಲು ಈತ ಮುಂದಾಗಿದ್ದ.
ಅದಕ್ಕಾಗಿ, ನಗರ ಪೊಲೀಸ್ ಆಯುಕ್ತರಾಗಿದ್ದ ರಾಘವೇಂದ್ರ ಔರಾದ್‌ಕರ್ ಅವರು ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರ ಜೊತೆ ನಿಂತು ಫೋಟೋ ತೆಗೆಸಿಕೊಂಡಿದ್ದ ನಕಲಿ ಪೋಟೋವನ್ನು ತಯಾರಿಸಿದ್ದ.ಇದರಿಂದ ಜನರಿಗೆ ನಂಬಿಕೆ ಬರುತ್ತದೆ ಎಂಬುವುದು ರಾಜಾರಾಂ ಆಲೋಚನೆ ಆಗಿತ್ತು.












Click it and Unblock the Notifications