ಲಷ್ಕರ್ ಹಿಟ್ ಲಿಸ್ಟಲ್ಲಿ ಅಡ್ವಾಣಿ, ಮೋದಿ, ತೊಗಾಡಿಯಾ
ಅಹಮದಾಬಾದ್, ಜೂ.15: ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರಮೋದಿ, ಪ್ರವೀಣ್ ತೊಗಾಡಿಯಾ ಸೇರಿದಂತೆ ಹಲವಾರು ನಾಯಕರು ಲಷ್ಕರ್-ಇ-ತೊಯ್ಬಾ ಉಗ್ರಗಾಮಿ ಸಂಘಟನೆಯ ಹಿಟ್ ಲಿಸ್ಟ್ ನಲ್ಲಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ಹೊರ ಹಾಕಿದೆ.
ಕೇಂದ್ರ ಗುಪ್ತಚರ ಇಲಾಖೆ ನೀಡಿರುವ ಸೂಚನೆಯಂತೆ ಲಷ್ಕರ್-ಇ-ತೊಯ್ಬಾ ಉಗ್ರರು ಅಡ್ವಾಣಿ ಮತ್ತು ನರೇಂದ್ರ ಮೋದಿಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಲು ಸಂಚು ರೂಪಿಸಿರುವ ಸಂಗತಿ ಹೊರ ಬಿದ್ದಿದೆ.
2004 ಜೂನ್ 15ರಂದು ಅಹಮದಾಬಾದಿನಲ್ಲಿ ನಡೆದ ಎನ್ ಕೌಂಟರ್ ಗೆ ಪ್ರತಿಯಾಗಿ ಲಷ್ಕರ್-ಇ-ತೊಯ್ಬಾ ಉಗ್ರರು ಮೋದಿ ಮತ್ತು ಅಡ್ವಾಣಿಯನ್ನು ಹತ್ಯೆಗೈಯ್ಯಲು ಹಲವಾರು ಬಾರಿ ವಿಫಲ ಪ್ರಯತ್ನ ನಡೆಸಿದ್ದಾರೆಂದು ಗುಪ್ತಚರ ಇಲಾಖೆ ಅಧಿಕಾರಿಗಳು ಬಹಿರಂಗ ಮಾಡಿದ್ದಾರೆ.

ಕೇವಲ ಅಡ್ವಾಣಿ ಮತ್ತು ನರೇಂದ್ರಮೋದಿಯಲ್ಲದೆ ಲಷ್ಕರ್-ಇ-ತೊಯ್ಬಾ ಉಗ್ರರ ಲಿಸ್ಟ್ ನಲ್ಲಿ ವಿಶ್ವ ಹಿಂದೂ ಪರಿಷತ್ ನ ಪ್ರವೀಣ್ ತೊಗಾಡಿಯಾ, ಅಶೋಕ್ ಸಿಂಘಾಲ್ ಮತ್ತಿತರರು ಪಟ್ಟಿಯಲ್ಲಿದ್ದಾರೆ.
ಶಿವಸೇನೆ ಮುಖಂಡ ಬಾಳ ಠಾಕ್ರೆ ಕೂಡ ಇವರ ಹಿಟ್ ಲಿಸ್ಟ್ ನಲ್ಲಿದ್ದರು ಎಂದು ಗುಜರಾತಿನ ಗುಪ್ತಚರ ಇಲಾಖೆ ಮುಖ್ಯಸ್ಥ ರಾಜೇಂದ್ರಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ತರಬೇತಿ ಪಡೆದಿರುವ ಲಷ್ಕರ್-ಇ-ತೊಯ್ಬಾ ಉಗ್ರರು ಭಾರತದೊಳಗೆ ಒಳನುಸುಳಿ ಕೆಲವು ಗಣ್ಯ ವ್ಯಕ್ತಿಗಳನ್ನು ಹತ್ಯೆಗೈಯ್ಯಲು ಕಾರ್ಯತಂತ್ರ ರೂಪಿಸಿದ್ದಾರೆ. ಇಶ್ರತ್ ಜಹಾನ್ ಎನ್ ಕೌಂಟರ್ ಗೆ ಪ್ರತಿಯಾಗಿ ಈ ಸಂಚು ರೂಪಿಸಿದ್ದಾರೆಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ತರಬೇತಿ ಪಡೆದಿರುವ ಇಬ್ಬರು ಉಗ್ರರು ದೇಶದೊಳಗೆ ಒಳನುಸುಳಿರುವ ಸಾಧ್ಯತೆ ಇದೆ. ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ರಾಜ್ಯದ ವಿವಿಧೆಡೆ ಸ್ಫೋಟಿಸಲು ಸಂಚು ರೂಪಿಸಿದ್ದರು. ಆದರೆ, ಭಾರೀ ಭದ್ರತೆ ಕಾರಣ ಅವರ ಕಾರ್ಯ ಯಶಸ್ವಿಯಾಗಲಿಲ್ಲ ಎಂದು ಹೇಳಿದ್ದಾರೆ.
ದೇಶದ ಪ್ರಮುಖ ನಗರಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ. ಗಣ್ಯ ವ್ಯಕ್ತಿಗಳಿಗೆ ನೀಡಿರುವ ಭದ್ರತೆಯನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದಾರೆ.












Click it and Unblock the Notifications