ಧಾರವಾಡ ಬಳಿ ಭೀಕರ ಅಪಘಾತ, ಐವರ ಸಾವು

ಮುಂಬೈನಿಂದ ಬೆಂಗಳೂರಿಗೆ ನ್ಯಾಷನಲ್ ಟ್ರಾವಲ್ಸ್ ಬಸ್ ಬರುತ್ತಿದ್ದಾಗ ಇಟ್ಟಗಟ್ಟಿ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ 20 ಅಡಿ ಆಳದಲ್ಲಿರುವ ಹಳ್ಳಕ್ಕೆ ಬಸ್ ಉರುಳಿಬಿದ್ದ ಪರಿಣಾಮವಾಗಿ ಭಾರೀ ಅನಾಹುತ ಸಂಭವಿಸಿದೆ.
ಖಾಸಗಿ ಬಸ್ ಚಾಲಕ ವಿಪರೀತ ವೇಗವಾಗಿ ಬಸ್ ಚಲಾಯಿಸುತ್ತಿದ್ದ ಕಾರಣ ನಿಯಂತ್ರಣ ತಪ್ಪಿ ಬಸ್ ಹಳ್ಳಕ್ಕೆ ಉರುಳಿತು ಎಂದು ಯಾವುದೇ ಗಾಯವಿಲ್ಲದೆ ಪಾರಾದ ಪ್ರಯಾಣಿಕರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಅವರು ಬಸ್ಸಿನಿಂದ ಬಾಗಿಲು ಮುರಿದು ಹೊರಬಂದು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.
ಐವರು ಪ್ರಯಾಣಿಕರು ಸ್ಥಳದಲ್ಲೇ ಅಸುನೀಗಿದ್ದು, ಗಂಭೀರವಾಗಿ ಗಾಯಗೊಂಡ 15 ಪ್ರಯಾಣಿಕರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಸತ್ತವರ ಮತ್ತು ಗಾಯಗೊಂಡವರ ವಿವರ ಇನ್ನೂ ತಿಳಿದುಬಂದಿಲ್ಲ.
ಅಪಘಾತ ಆಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಜಿಟಿಜಿಟಿ ಮಳೆ ಸುರಿಯುತ್ತಿದ್ದ ಕಾರಣ ಪರಿಹಾರ ಕಾರ್ಯ ಲಗುಬಗನೆ ಸಾಗಿಸಲಾಗಿಲ್ಲ. ಅಲ್ಲದೆ ಬಸ್ ಅಡ್ಡ ಮುಗುಚಿಬಿದ್ದ ಪರಿಣಾಮ ಒಳಗಿದ್ದವರನ್ನು ಕೂಡಲೆ ಹೊರತೆಗೆಯಲೂ ಸಾಧ್ಯವಾಗಿಲ್ಲ. ಅಪಘಾತ ಸಂಭವಿಸುತ್ತಿದ್ದಂತೆ ಗಾಯಗೊಂಡ ಕ್ಲೀನರ್ ಮತ್ತು ಗಾಯಗೊಳ್ಳದೆ ಪಾರಾದ ಚಾಲಕ ಪರಾರಿಯಾಗಿದ್ದಾರೆ.












Click it and Unblock the Notifications