ದಕ್ಷಿಣ ರಾಜ್ಯಗಳಲ್ಲಿ ವಿದ್ಯುತ್ ಕೊರತೆ ಕಾಡಲಿದೆ

ಕರ್ನಾಟಕ ಸೇರಿದಂತೆ ದೇಶದ 17 ರಾಜ್ಯಗಳು 2013-14ನೇ ಅವಧಿಯಲ್ಲಿ ಭಾರಿ ವಿದ್ಯುತ್ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಸಿಇಎ (ಕೇಂದ್ರ ವಿದ್ಯುತ್ ಪ್ರಾಧಿಕಾರಿ) ಲೆಕ್ಕಾಚಾರ ನಡೆಸಿದೆ. ಹದಿನೇಳು ರಾಜ್ಯಗಳಲ್ಲಿ ಶೇ 19.1ರಷ್ಟು ವಿದ್ಯುತ್ ಕೊರತೆ ಉಂಟಾಗಬಹುದು ಎಂದು ಅಂದಾಜು ನಡೆಸಿದೆ.
ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ ಈ ಬಾರಿ ವಿದ್ಯುತ್ ಸಮಸ್ಯೆಯನ್ನು ತೀವ್ರವಾಗಿ ಎದುರಿಸಬೇಕಾಗುತ್ತದೆ. 2012-13ನೇ ವರ್ಷದಲ್ಲಿ ಈ ರಾಜ್ಯಗಳಲ್ಲಿ ಶೇ 15ರಷ್ಟು ವಿದ್ಯುತ್ ಕೊರತೆ ಉಂಟಾಗಿತ್ತು. ಈ ಬಾರಿ ಆ ಪ್ರಮಾಣ ಶೇ 19ರಷ್ಟು ಹೆಚ್ಚಾಗಲಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಕಾರಣವೇನು : ಇಂಧನ ಕೊರತೆ, ಡಿಸ್ಕಾಂ(ವಿದ್ಯುತ್ ವಿತರಣ ಕಂಪನಿಗಳು)ಗಳ ಹಣಕಾಸು ಪರಿಸ್ಥಿತಿ ದುರ್ಬಲ ಮತ್ತು ಪ್ರಸರಣ ಸಮಸ್ಯೆ, ಕಲ್ಲಿದ್ದಲು ಕೊರತೆ ಮುಂತಾದ ಸಮಸ್ಯೆಗಳಿಂದಾಗಿ ದೇಶಾದ್ಯಂತ ವಿದ್ಯುತ್ ಕೊರತೆ ಉಂಟಾಗಲಿದೆ ಎಂದು ವರದಿ ಹೇಳಿದೆ.
ಅವುಗಳಲ್ಲಿ ಕೆಲವು ರಾಜ್ಯಗಳಿಗೆ ವಿದ್ಯುತ್ ಕೊರತೆಯ ಪ್ರಮಾಣ ಹೆಚ್ಚಾಗಲಿದೆ. ತಮಿಳುನಾಡಿನಲ್ಲಿ ಅತಿ ಹೆಚ್ಚು ಅಂದರೆ, ಶೇ. 26.5ರಷ್ಟು, ಕೇರಳದಲ್ಲಿ ಶೇ.24.8, ಕರ್ನಾಟಕದಲ್ಲಿ ಶೇ.23.2, ಆಂಧ್ರದಲ್ಲಿ ಶೇ.9.1 ಹಾಗೂ ಪುದುಚೇರಿಯಲ್ಲಿ ಶೇ.9.9ರಷ್ಟು ಕೊರತೆ ಉಂಟಾಗಲಿದೆ.
ಆದರೆ, ಪಶ್ಚಿಮ ಬಂಗಾಳ ಮತ್ತು ಬಿಹಾರ ಸೇರಿದಂತೆ ದೇಶದ ಪೂರ್ವಭಾಗದಲ್ಲಿ ಶೇ.10.2ರಷ್ಟು ಹೆಚ್ಚು ವಿದ್ಯುತ್ ಪೂರೈಕೆಯಾಗಲಿದೆ ಎಂದು ಸಿಇಎ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೇಶದ ದಕ್ಷಿಣ ವಲಯದ ರಾಜ್ಯಗಳಿಗೆ ವಿದ್ಯುತ್ ಕೊರತೆಯ ಬಿಸಿ ಹೆಚ್ಚಾಗಿ ತಟ್ಟಲಿದೆ.
9 ಸಾವಿರ ಮೆಗಾವ್ಯಾಟ್ ಕೊರತೆ : ಏಪ್ರಿಲ್ ತಿಂಗಳಿನಲ್ಲಿ ದೇಶದಲ್ಲಿ ಸುಮಾರು 9 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಕೊರತೆ ಉಂಟಾಗಿತ್ತು. ಕಲ್ಲಿದ್ದಲು ಅಭಾವ ವಿದ್ಯುತ್ ಉತ್ಪಾದನೆ ಮೇಲೆ ನೇರವಾಗಿ ಪರಿಣಾಮ ಬೀರಿದೆ ಎಂದು ಸಿಇಎ ವಿಶ್ಲೇಷಣೆ ನಡೆಸಿದೆ.












Click it and Unblock the Notifications