ಬಿಜೆಪಿ ಸೇರುವ ಮಾತಿಗೆ ತೆರೆಎಳೆದ ಯಡಿಯೂರಪ್ಪ!
ಬೆಂಗಳೂರು, ಜೂ.8 : "ತೃತೀಯ ರಂಗದ ಜೊತೆ ಕೈಜೋಡಿಸೋಣ ಆದರೆ, ಮತ್ತೊಮ್ಮೆ ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲ". ಇಂತಹದ್ದೊಂದು ಕಠಿಣ ನಿರ್ಧಾರವನ್ನು ಶುಕ್ರವಾರ ನಡೆದ ಕೆಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೆಗದುಕೊಳ್ಳಲಾಗಿದೆ. ಇದರಿಂದಾಗಿ ತೃತೀಯ ರಂಗ ರಚನೆಯ ಕನಸು ಮರಜೀವ ಪಡೆದಿದೆ.
ಶುಕ್ರವಾರ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಪಕ್ಷದ ಕೋರ್ ಕಮಿಟಿ ಸಭೆ ನಡೆಯಿತು. ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ಮೊದಲ ಪಕ್ಷದ ಕೋರ್ ಕಮಿಟಿ ಸಭೆ ನಡೆದಿದ್ದು, ಹಲವಾರು ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಬಿಜೆಪಿ ಜತೆಗೆ ಪುನಃ ಕೈಜೋಡಿಸುವ ಅಥವಾ ವಿಲೀನವಾಗುವ ವದಂತಿಗಳ ಬಗ್ಗೆ ಸಭೆ ಸುದೀರ್ಘವಾಗಿ ಚರ್ಚೆ ನಡೆದಿದೆ. ಸಭೆಯ ನಂತರ, ಯಾವುದೇ ಕಾರಣಕ್ಕೂ ಬಿಜೆಪಿಗೆ ವಾಪಸ್ ಮರಳುವ ಅಥವಾ ಕೈಜೋಡಿಸಬಾರದು. ಬಿಜೆಪಿ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಬಾರದು ಎಂದು ನಿರ್ಣಯ ಕೈಗೊಳ್ಳಲಾಗಿದೆ.
ಪಕ್ಷದ ಶಾಸಕರು, ಮಾಜಿ ಶಾಸಕರು, ಪ್ರಚಾರ ಸಮಿತಿ ಅಧ್ಯಕ್ಷ ವಿ. ಧನಂಜಯಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಡಿ. ಲಕ್ಷ್ಮೀನಾರಾಯಣ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮುಂತಾದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ನಾಲ್ಕು ಪ್ರಮುಖ ನಿರ್ಣಯಗಳು.

ಬಿಜೆಪಿಗೆ ವಾಪಸ್ ಹೋಗಬಾರದು
ಪಕ್ಷದ ಯಾವ ನಾಯಕರು ಎಂದೂ ಬಿಜೆಪಿಗೆ ಮರಳಬಾರದು ಎಂಬ ನಿರ್ಣಯವನ್ನು ಒಮ್ಮತದಿಂದ ತೆಗೆದುಕೊಳ್ಳಲಾಯಿತು. ಅಲ್ಲದೆ ಬಿಜೆಪಿ ಬಗ್ಗೆ ಟೀಕಿಸುವುದು ಮತ್ತು ಪಕ್ಷದ ವೇದಿಕೆಯಲ್ಲಿ ಬಿಜೆಪಿ ಬಗ್ಗೆ ಮಾತನಾಡಬಾರದು ಎಂಬ ನಿರ್ಣಯ ಕೈಗೊಳ್ಳಲಾಗಿದೆ.

ತೃತೀಯರಂಗದ ಜೊತೆ ಕೈ ಜೋಡಿಸೋಣ
ಲೋಕಸಸಭೆ ಚುನಾವಣೆ ಹೊತ್ತಿಗೆ ಬಿಜೆಪಿ ಹೊರತುಪಡಿಸಿದ ತೃತೀಯರಂಗದ ಜತೆ ಅಗತ್ಯವಿದ್ದರೆ, ಮಾತ್ರ ಕೈ ಜೋಡಿಸೋಣ ಎಂದು ಪಕ್ಷದ ನಾಯಕರು ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ರಾಜ್ಯದಲ್ಲಿ ತೃತೀಯ ರಂಗ ಕಟ್ಟುವ ಕೆಲಸ ಪ್ರಾರಂಭವಾಗಿದೆ ಎಂಬ ಸೂಚನೆ ದೊರಕಿದೆ.

ಜಿಲ್ಲಾ ಸಮಾವೇಶ, ಪಕ್ಷದ ಬಲವರ್ಧನೆಗೆ ರಾಜ್ಯಪ್ರವಾಸ
ವಿಧಾನಸಭೆ ಅಧಿವೇಶನ ಮುಗಿಯುತ್ತಿದ್ದಂತೆ, ಪತ್ರಿ ಜಿಲ್ಲೆಯಲ್ಲೂ ಪಕ್ಷದ ಸಮಾವೇಶ ಆಯೋಜಿಸಿ ಪಕ್ಷ ಸಂಘಟನೆ ಮಾಡುವುದು. ವಿವಿಧ ನಾಯಕರು ರಾಜ್ಯ ಪ್ರವಾಸ ಮಾಡಿ, ಕಾರ್ಯಕರ್ತರೊಂದಿಗೆ ಚರ್ಚಿಸಿ, ಲೋಕಸಭೆ ಚುನಾವಣೆಗೆ ಸಿದ್ಧತೆ ನಡೆಸುವುದು.

ಪದಾಧಿಕಾರಿಗಳ ಬದಲಾವಣೆ, ಪಕ್ಷ ಸಂಘಟನೆ
ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟನೆ ಮಾಡುವ ಉದ್ದೇಶದಿಂದ ಪಕ್ಷದ ಪದಾಧಿಕಾರಿಗಳನ್ನು ಮರು ನೇಮಕ ಮಾಡುವುದು. ಪ್ರತಿ ತಾಲೂಕಿನಲ್ಲೂ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವುದು.

ಯಡಿಯೂರಪ್ಪ ಬಿಜೆಪಿಗೆ ಹೋಗೋಲ್ಲ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳುತ್ತಾರೆ ಎಂಬ ಸುದ್ದಿಗಳಿಗೆ ಅಧಿಕೃತವಾಗಿ ತೆರೆ ಬಿದ್ದಿದೆ. ತೃತೀಯ ರಂಗದ ಜೊತೆ ಕೈ ಜೋಡಿಸುವ ನಿರ್ಣಯ ಕೈಗೊಳ್ಳಲಾಗಿದೆ. ಲೋಕಸಭೆ ಚುನಾವಣೆ ವೇಳೆಗೆ ತೃತೀಯ ರಂಗ ರಚನೆ ಆಗುವುದು ಖಚಿತವಾಗಿದೆ.












Click it and Unblock the Notifications