ಲೋಕಸಭೆ ಚುನಾವಣೆಗೆ ಬಿಜೆಪಿಗೆ ಹೊಸ ರೂಪ
ಬೆಂಗಳೂರು, ಜೂ. 6 : ವಿಧಾನಸಭೆ ಚುನಾವಣೆಯ ಹೀನಾಯ ಸೋಲಿನ ಕಹಿಯನ್ನು ಮರೆತು, ಪಕ್ಷದ ಕಾರ್ಯಕರ್ತರನ್ನು ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧಗೊಳಿಸಲು ಕರ್ನಾಟಕ ಬಿಜೆಪಿ ಸಭೆ ನಡೆಸಿತು. ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಲೋಕಸಭೆ ಚುನಾವಣೆಗೆ ಸಿದ್ದರಾಗುವಂತೆ ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಗುರುವಾರ ಮಲ್ಲೇಶ್ವರಂ ಪಕ್ಷದ ಕಚೇರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಹಾಗೂ ಪ್ರಧಾನ ಕಾರ್ಯದರ್ಶಿಗಳ ಸಭೆ ನಡೆಯಿತು. ಪಕ್ಷದ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಲೋಕಸಭೆ ಚುನಾವಣೆಯ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಯಿತು.
ರಾಜ್ಯ ಬಿಜೆಪಿ ಉಸ್ತುವಾರಿ ಥಾವರ್ ಚಂದ್ ಗೆಹ್ಲೋಟ್ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಡಿ.ವಿ.ಸದಾನಂದಗೌಡ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ ಕುಮಾರ್ ಸಭೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ಬಿಜೆಪಿ ಪದಾಧಿಕಾರಿಗಳ ಸಮಿತಿಗಳನ್ನು ವಿಸರ್ಜಿಸಿ ಹೊಸ ಸದಸ್ಯರನ್ನು ಆಯ್ಕೆ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಜುಲೈ ಮೊದಲವಾರದಿಂದ ಪದಾಧಿಕಾರಿಗಳ ಬದಲಾವಣೆ ಜೊತೆಗೆ ಲೋಕಸಭೆ ಚುನಾವಣೆಯ ಸಿದ್ಧತೆ ಪ್ರಾರಂಭಿಸಬೇಕು, ಎಂದು ಎಲ್ಲಾ ಜಿಲ್ಲಾಧ್ಯಕ್ಷರಿಗೆ ಪ್ರಹ್ಲಾದ್ ಜೋಶಿ ನಿರ್ದೇಶನ ನೀಡಿದ್ದಾರೆ. ಬಿಜೆಪಿ ಪದಾಧಿಕಾರಿಗಳ ಸಭೆಯ ವಿವರಗಳು ಹೀಗಿವೆ.

ಸೋಲು ಮರೆಯಿರಿ, ಪಕ್ಷ ಕಟ್ಟಿ
ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಸೋಲನ್ನು ಮರೆಯಿರಿ. ಪಕ್ಷದ ಸಂಘಟನೆಗಾಗಿ ಕೆಲಸ ಮಾಡಿ. ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆದ್ದು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದು ಎಲ್ಲರ ಏಕೈಕ ಗುರಿಯಾಗಿರಲಿ.

ಘಟಕಗಳ ವಿಸರ್ಜನೆ
ಜಿಲ್ಲೆ ಮತ್ತು ತಾಲೂಕುಗಳ ಬಿಜೆಪಿ ಘಟಕಗಳನ್ನು ವಿಸರ್ಜನೆ ಮಾಡಿ ಮತ್ತೊಮ್ಮೆ ಪುನಃ ರಚಿಸುವುದು. ಪಕ್ಷ ಸಂಘಟನೆಯ ಉದ್ದೇಶದಿಂದ ನೂತನ ಪದಾಧಿಕಾರಿಗಳನ್ನು ನೇಮಿಸುವುದು. ಜೂನ್ ಅಂತ್ಯದಿಂದ ರಾಜ್ಯದ ಎಲ್ಲಾ ಘಟಕಗಳ ಪುನಃ ರಚನೆ ಕಾರ್ಯ ಪ್ರಾರಂಭಿಸುವುದು.

ಪೂರ್ವಸಿದ್ಧತೆ ಪ್ರಾರಂಭಿಸಿ
ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ ಮಾಡಲು ತಕ್ಷಣದಿಂದ ಪ್ರಾರಂಭಿಸಿ, ಆಯಾ ಜಿಲ್ಲೆಗಳ ಸಮಸ್ಯೆಗಳನ್ನು ಪಟ್ಟಿ ಮಾಡಿ. ಪ್ರತಿ ಜಿಲ್ಲೆಗಳ ಸ್ಥಳೀಯ ಸಮಸ್ಯೆ ನಿವಾರಿಸುವುದು ಪ್ರಣಾಳಿಕೆ ಮತ್ತು ಚುನಾವಣಾ ಪ್ರಚಾರದ ಮುಖ್ಯಂಶಗಳಾಗಲಿವೆ.

ನಾಯಕತ್ವದ ಬಗ್ಗೆ ಗೊಂದಲ ಬೇಡ
ಬಿಜೆಪಿ ರಾಜ್ಯಾಧ್ಯಕ್ಷ ಅಥವ ಯಾವುದೇ ನಾಯಕರ ಹುದ್ದೆಗಳಲ್ಲಿ ಬದಲಾವಣೆ ಆಗುವುದಿಲ್ಲ. ಪ್ರಹ್ಲಾದ್ ಜೋಶಿ ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲಿದ್ದೇವೆ. ಕಾರ್ಯಕರ್ತರು ನಾಯಕತ್ವದ ಬಗ್ಗೆ ಯಾವುದೇ ಗೊಂದಲಗಳಿಗೆ ಒಳಗಾವುದು ಬೇಡ.

ಯಡಿಯೂರಪ್ಪ ಬಗ್ಗೆಯೂ ಚರ್ಚೆ
ಪಕ್ಷ ತೊರೆದು ಬೇರೆ ಪಕ್ಷಗಳನ್ನು ಕಟ್ಟಿರುವ ಶ್ರೀರಾಮುಲು ಮತ್ತು ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷಕ್ಕೆ ಕರೆತರುವುದು. ವಿಧಾನ ಪರಿಷತ್ ಸದಸ್ಯ ಗೋ.ಮಧೂಸೂಧನ್ ವರಿಷ್ಠಿರಿಗೆ ಬರೆದ ಪತ್ರದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.












Click it and Unblock the Notifications