ಬಿಜೆಪಿಗೆ ಬಿಎಸ್‌ಆರ್ ಧಾರೆಯೆರೆಯಲು ರಾಮುಲು ಯತ್ನ

ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಈ ಕಾರ್ಯಯೋಜನೆಯ ಮೊದಲ ಪ್ರಯತ್ನವಾಗಿ ಬಿಎಸ್‌ಆರ್ ಪಕ್ಷದ ರಾಜ್ಯ ಪದಾಧಿಕಾರಿಗಳು, ನಾನಾ ಘಟಕಗಳ ರಾಜ್ಯ ಪದಾಧಿಕಾರಿಗಳು, ಕಾರ್ಯಕಾರಿಣಿ ಪ್ರತಿನಿಧಿಗಳು, ಜಿಲ್ಲೆ/ತಾಲೂಕು ಅಧ್ಯಕ್ಷರು ಹಾಗೂ ಸಮಿತಿಗಳನ್ನು ದಿಢೀರನೇ ವಿಸರ್ಜಿಸಲಾಗಿದೆ. ಬಿಜೆಪಿಗೆ ಮರಳಲು ರಾಮಲು ತೆರೆಮರೆಯ ಪ್ರಯತ್ನಗಳನ್ನು ಜಾರಿಯಲ್ಲಿಟ್ಟಿದ್ದಾರೆ ಎನ್ನಲಾಗಿದೆ.
ಆದರೆ, ಹೊಸ ಸಮಿತಿಗಳು ಅಸ್ತಿತ್ವಕ್ಕೆ ಬರುವವರೆಗೂ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಪಕ್ಷದಲ್ಲಿ ಸಕ್ರಿಯವಾಗಿರುವಂತೆ ಪಕ್ಷದ ಸಂಸ್ಥಾಪಕ ಬಿ ಶ್ರೀರಾಮುಲು ಸೂಚಿಸಿದ್ದಾರೆ.
ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನ ಮಾಡುವ ಚಿಂತನೆ ನಡೆಸಿಲ್ಲ. ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಂಘಟಿಸಿ, ಜನರ ವಿಶ್ವಾಸಗಳಿಸಲು ಹೆಚ್ಚಿನ ಶ್ರಮ ಹಾಕಲಾಗುವುದು ಎಂದು ಶ್ರೀರಾಮುಲು ಪ್ರತಿಕ್ರಿಯಿಸಿದ್ದಾರೆ. ಆದರೆ ಬಿಜೆಪಿಯತ್ತ ಹೊರಳಲು ತಮಗೆ ಅನುಕೂಲವಾಗುವ ವಾತಾವರಣ ಸೃಷ್ಟಿಸಿಕೊಳ್ಳಲು ಸಮಿತಿ, ಅಧ್ಯಕ್ಷರುಗಳನ್ನು ಪದಚ್ಯುತಗೊಳಿಸಲಾಗಿದೆ. ಇದರಿಂದ ಅವರು ಏಕಪಕ್ಷೀಯ ನಿರ್ಧಾರ ತೆಗೆದುಕೊಂಡು ಬಿಜೆಪಿ ತೆಕ್ಕೆಗೆ ಸೇರಬಹುದು ಎಂದು ವಿಶ್ಲೇಷಿಸಲಾಗಿದೆ.
ಈ ಮಧ್ಯೆ, ಈಗ ಸಗಟು ರೂಪದಲ್ಲಿ ಪದಚ್ಯುತರಾದ ನಾಯಕರು ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿ, ಪಕ್ಷ ಹೀನಾಯ ಸೋಲಿಗೆ ಕಾರಣಕರ್ತರಾಗಿದ್ದರು. ಇದರಿಂದ ಸಿಟ್ಟಿಗೆದ್ದ ರಾಮುಲು ಅಷ್ಟೂ ನಾಯಕರನ್ನು ಹೊರದಬ್ಬಿ ಪಕ್ಷಕ್ಕೆ ಹೊಸನೀರು ತರಲು ಮುಂದಾಗಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳಿವೆ.












Click it and Unblock the Notifications